ಸಂಪಾದಕೀಯ

ತಾಯಿ ಸೇವೆಗೆ ಸಂಬಳವೇ?

Published On :

ಕನ್ನಡ ಸಾಹಿತ್ಯದ ಧೃವತಾರೆಯೆಂದೇ ಪ್ರಸಿದ್ಧರಾಗಿದ್ದ ಸುಬ್ಬರಾಯರು, ತ.ರಾ.ಸು. ಎಂದೇ ಜನಪ್ರಿಯ. ಚಿತ್ರದುರ್ಗದ ತಳುಕಿನವರಾದ ತ.ರಾ.ಸು. ಕಾದಂಬರಿ, ಕಥಾ ಸಂಕಲನ, ನಾಟಕ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಹೆಸರು ಮಾಡಿದರು. ಅದರಲ್ಲಿಯೂ ಅವರ ದುರ್ಗಾಸ್ತಮಾನ, ರಕ್ತರಾತ್ರಿ, ನಾಗರಹಾವು, ಚಂದವಳ್ಳಿಯ ತೋಟ ತುಂಬಾ ಹೆಸರು ಮಾಡಿದವು. ಕೆಲವು ಚಲನಚಿತ್ರಗಳಾಗಿ ಸಹ ಜನಪ್ರಿಯತೆ ಗಳಿಸಿದವು. ನಿಜಲಿಂಗಪ್ಪನವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಪಾಲ್ಗೊಂಡು ಧ್ವಜ ಸತ್ಯಾಗ್ರಹ, ಈಚಲು ಗಿಡ ಕಡಿಯುವ ಚಳವಳಿ, ಚಲೇಜಾವ್ ಚಳವಳಿ ಮುಂತಾದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ ಪೊಲೀಸರ ಲಾಠಿ ರುಚಿಯನ್ನೂ, ಜೈಲು ಶಿಕ್ಷೆಯನ್ನೂ  ಅನುಭವಿಸಿದ್ದುಂಟು. ಕನ್ನಡ, ಕನ್ನಡಿಗರ ಕುರಿತು ಆಸಡ್ಡೆ, ಅವಹೇಳನ ಮತ್ತು ಅನ್ಯಾಯದ ವಿರುದ್ಧ ಸಿಡಿದೆದ್ದು ಚಳವಳಿ ಪ್ರಾರಂಭಿಸಿದ ಮ.ರಾಮಮೂರ್ತಿ ಮತ್ತು ಅ.ನ.ಕೃ ಜೊತೆಗೆ ಕೂಡಿಕೊಂಡು ಹೋರಾಟಕ್ಕಿಳಿದರು. ಒಮ್ಮೆ ಶಿಕ್ಷಣ ಮಂತ್ರಿಯಾಗಿದ್ದ ಶಂಕರೇಗೌಡರು ತ.ರಾ.ಸು.ಅವರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಅವರ ಆರ್ಥಿಕ ದುಃಸ್ಥಿತಿಯನ್ನು ಕಂಡು, ಮಂಡ್ಯದಲ್ಲಿ ಒಂದೆರಡು ಎಕರೆ ಜಮೀನು ಪಡೆಯಲೋಸುಗ ಅರ್ಜಿಹಾಕಲು ಸಲಹೆ ನೀಡಿದರು. ಏಕೆಂದರೆ ಮಂಡ್ಯದ ಭೂಮಿ ಫಲವತ್ತಾಗಿದ್ದು ನೀರಾವರಿ ಸೌಲಭ್ಯ ಉಳ್ಳಂಥದ್ದು. ಅದರಿಂದ ಸುಬ್ಬರಾಯರ ಕಷ್ಟ ತಪ್ಪಬಹುದು ಎಂಬ ಭಾವನೆ ಶಂಕರೇಗೌಡರದ್ದು.  ಅದಕ್ಕೆಲ್ಲ ತಮ್ಮ ಬಳಿ ಹಣ ಎಲ್ಲಿಂದ ಬರಬೇಕು ಎಂದು ತ.ರಾ.ಸು ಹೇಳಿದಾಗ, "ಅದಕ್ಕೇಕೆ ಬೇಕು ದುಡ್ಡು? ಹೇಗಿದ್ದರೂ ನೀವೂ ಸಹ ಸ್ವಾತಂತ್ರ್ಯ ಹೋರಾಟಗಾರರಾಗಿ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಹೇಗಿದ್ದರೂ ನಮ್ಮ ಸರ್ಕಾರವೇ ಇದೆ. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಜಮೀನು ಪಡೆಯಲು ಅರ್ಹತೆ ಬೇರೆ ಇದೆ. ಅರ್ಜಿ ಹಾಕಿ, ನಾನು ಕೊಡಿಸಿಕೊಡುತ್ತೇನೆ" ಎಂದರು. ಆದರೆ ತ.ರಾ.ಸು ಒಪ್ಪಬೇಕಲ್ಲಾ! ತಾವು ಹೋರಾಡಿದ್ದು ಪರಕೀಯರಿಂದ ಮಾತೃಭೂಮಿಯನ್ನು ಬಿಡಿಸಿಕೊಳ್ಳಬೇಕೆಂದು. ಅದಕ್ಕಾಗಿ ಸರ್ಕಾರಿ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆದುಕೊಂಡರೆ ತಾಯಿಗೆ ಸಲ್ಲಿಸಿದ ಸೇವೆಗೆ ಸಂಬಳ ತೆಗೆದುಕೊಂಡ ಹಾಗಾಗುತ್ತದೆ. ಆದ್ದರಿಂದ ತಮಗಾವ ಸವಲತ್ತುಗಳೂ ಬೇಡವೆಂದು ನಿರಾಕರಿಸಿದರು. ಮತ್ತೊಮ್ಮೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ತರಾಸು ಅವರಿಗೇ ರಾಜ್ಯ ಪ್ರಶಸ್ತಿ ನೀಡಬೇಕೆಂಬ ಒಮ್ಮತದ ತೀರ್ಮಾನ ಬಂದಾಗ ಹಿರಿಯರಾದ ಸಿ.ಕೆ.ವೆಂಕಟರಾಮಯ್ಯನವರಿಗೆ ಆ ಪ್ರಶಸ್ತಿ ಕೊಡಿಸಿದ್ದರವರು!


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.