ಸಂಪಾದಕೀಯ

ನನ್ನ ಜೀವನ ಪಾವನಗೊಳಿಸಿದರು

ಕನ್ನಡ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಅನೇಕ ಕಲಾವಿದರಲ್ಲಿ ನಟ ಶಿರೋಮಣಿ ಎ.ವಿ.ವರದಚಾರ್ಯರು ಶಿಖರಪ್ರಾಯರು...

Published On :

ಕನ್ನಡ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಅನೇಕ ಕಲಾವಿದರಲ್ಲಿ ನಟ ಶಿರೋಮಣಿ ಎ.ವಿ.ವರದಚಾರ್ಯರು ಶಿಖರಪ್ರಾಯರು. 50 ವರ್ಷಕ್ಕೂ ಹೆಚ್ಚುಕಾಲ ರಂಗಭೂಮಿಯ ಸೇವೆಮಾಡಿ ಅಮರರಾಗಿರುವ ವರದಾಚಾರ್ಯರು ರತ್ನಾವಳಿ ನಾಟಕ ಸಭೆಯನ್ನು 1902ರಲ್ಲಿ  ಸ್ಥಾಪಿಸಿ ಅದನ್ನು ಆಮರಣ ಪರ್ಯಂತ ನಡೆಸಿಕೊಂಡು ಬಂದರು.
ಗುಲೇಬಕಾವಲಿ, ಪ್ರಹ್ಲಾದ ಚರಿತ್ರೆ, ಶಾಕುಂತಲ ಮುಂತಾದ ನಾಟಕಗಳು ಅತ್ಯಂತ ಪ್ರಸಿದ್ಧಿ ಪಡೆದಿದ್ದವು. ಅವರ ಅಭಿನಯ ಮತ್ತು ಸಂಗೀತ ಕಲಾರಸಿಕರನ್ನು ಬಲವಾಗಿ ಆಕರ್ಷಿಸಿತ್ತು. ನಾಟ್ಯ-ಸಂಗೀತ ನಿಪುಣ, ರಸಿಕಾಗ್ರಣಿ ಮತ್ತು ವಿಶ್ವಪ್ರೇಮಿಯಾಗಿದ್ದಂತೆ  ಕೊಡುಗೈ ದಾನಿಯೂ ಅವರಾಗಿದ್ದರು. ರಾಜ ಮಹಾರಾಜರನ್ನು ಮೀರಿಸುವ ವೈಭವದಲ್ಲಿ ಬಾಳಿದ ನಟ ಕೊನೆಗಾಲದಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದು ಅವರು ಮುಂದಾಲೋಚನೆಯಿಲ್ಲದೆ ಮಾಡುತ್ತಿದ್ದ ದಾನ-ಧರ್ಮಗಳಿಂದ. ಆಧುನಿಕ ಕರ್ಣ ಎಂದು ಹೆಸರಾಗಿದ್ದ ಆಚಾರ್ಯರು ಸಹಾಯ ಯಾಚಿಸಿ ಬಂದ ಯಾರೊಬ್ಬರನ್ನೂ ಬರಿಕೈಲಿ ಕಳುಹಿಸುತ್ತಿರಲಿಲ್ಲ. ಉಡಲು ಬಟ್ಟೆಯಿಲ್ಲ ಎಂದು ಬಂದ ವಿಧವೆಗೆ ತಮ್ಮ ನಾಟಕ ಮಂಡಳಿಯ ವಸ್ತ್ರಗಳನ್ನು ಆಕೆಯ ಮುಂದೆ ಹರಡಿ ಬೇಕಾದುದನ್ನು ತೆಗೆದುಕೊಂಡು ಹೋಗಲು ತಿಳಿಸಿದ ಉದಾರಿ. ಹೊದೆಯಲು ವಸ್ತ್ರ ಕೇಳಿದ ಒಬ್ಬ ಭಿಕ್ಷುಕನಿಗೆ ತಾವು ಧರಿಸುತ್ತಿದ್ದ ಸರ್ಜ್ ಕೋಟನ್ನೇ ತೆಗೆದು ಕೊಟ್ಟಿದ್ದುಂಟು. ತಂಗಿಯ ವಿವಾಹಕ್ಕೆ ಸಹಾಯಮಾಡಬೇಕೆಂದು ಒಬ್ಬ ನಟ ಬಂದಾಗ, ತಾವು ಆರ್ಥಿಕವಾಗಿ ಸೋತುಹೋಗಿದ್ದರೂ, ಸಾಲ ಮಾಡಿ ನಾಲ್ಕುನೂರು ರುಪಾಯಿಗಳನ್ನು ಕೊಟ್ಟು ಕಳುಹಿಸಿದ್ದು ಅವರ ದೊಡ್ಡಗುಣ.
ಒಮ್ಮೆ ವರದಾಚಾರ್ಯರು ಊಟ ಮಾಡಲು ಸಿದ್ಧತೆ ನಡೆಸಿದ್ದಾರೆ. ತಟ್ಟೆಗೆ ಅನ್ನ ಬಡಿಸಿಯಾಗಿದೆ. ಅಷ್ಟರಲ್ಲಿ ಒಬ್ಬ ಬಡ ಬಾಹ್ಮಣನ ಆಗಮನವಾಯಿತು. ತಾನು ಮಗನ ಉಪನಯನ ಮಾಡಲು ಸಿದ್ಧತೆ ಮಾಡಿಕೊಂಡಿರುವುದಾಗಿಯೂ, ಅದಕ್ಕಾಗಿ ಸಹಾಯಮಾಡಬೇಕೆಂದೂ ವಿನಂತಿಸಿದ. ಆಗ  ವರದಾಚಾರ್ಯರ ಬಳಿ ನೀಡಲು ಏನೂ ಇರಲಿಲ್ಲ. ಏನು ಮಾಡಬೇಕೆಂದು ತೋಚದೆ, ತಾವು ಊಟಕ್ಕೆ ಇರಿಸಿಕೊಂಡಿದ್ದ ಬೆಳ್ಳಿಯ ತಟ್ಟೆಯಲ್ಲಿದ್ದ ಆಹಾರ ಪದಾರ್ಥಗಳನ್ನೆಲ್ಲಾ ಒಂದು ಬಾಳೆ ಎಲೆಗೆ ರವಾನಿಸಿ, ಆ ಬೆಳ್ಳಿತಟ್ಟೆಯನ್ನೇ ಆ ಬ್ರಾಹ್ಮಣನಿಗೆ ನೀಡಿ ಕೃಷ್ಣಾರ್ಪಣ ಎಂದುಬಿಟ್ಟರು. ದಾನ ಕೊಡುವಾಗ ತಾನು ಕೊಡುತ್ತಿದ್ದೇನೆ ಎಂಬ ಭಾವ ಎಂದೂ ಅವರ ಮನಸ್ಸಿಗೆ ಬರುತ್ತಿರಲಿಲ್ಲ.  ಇಂತಹ ಅದ್ಭುತ ನಟ ಕೊನೆಕೊನೆಗೆ ದಾರುಣ ಬದುಕನ್ನು ಬಾಳಿ ಕಣ್ಮರೆಯಾದದ್ದು ಮಾತ್ರ ವಿಪರ್ಯಾಸ ಎನ್ನಬಹುದು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.