ಸಂಪಾದಕೀಯ

ಚಲಿಸುವ ಶಾಲೆ ಮತ್ತು ಮೀರಾ

ಭಾರತದ ವಿಭಜನೆಯ ನಂತರ ಪಾಕಿಸ್ತಾನದ ಕರಾಚಿಯಿಂದ ವಲಸೆ ಬಂದ ಮರಿಯಂ ಮತ್ತವರ ಕುಟುಂಬ ನೆಲೆಸಿದ್ದು ಪುಣೆಯಲ್ಲಿ....

Published On :

ಭಾರತದ ವಿಭಜನೆಯ ನಂತರ ಪಾಕಿಸ್ತಾನದ ಕರಾಚಿಯಿಂದ ವಲಸೆ ಬಂದ ಮರಿಯಂ ಮತ್ತವರ ಕುಟುಂಬ ನೆಲೆಸಿದ್ದು ಪುಣೆಯಲ್ಲಿ. ನಂತರ ಮುಂಬಯಿಗೆ ಬಂದು ನೆಲಸಿ ಅಲ್ಲಿ ಪತ್ರಿಕೋದ್ಯಮಿ ಮಹದೇವನ್ ಅವರನ್ನು ವಿವಾಹವಾಗಿ ಮೀರಾ ಮಹದೇವನ್ ಆದರು. ನಂತರ ಅವರು ನೆಲೆಸಿದ್ದು ದೆಹಲಿಯಲ್ಲಿ. ಬರವಣಿಗೆಯ ಖಯಾಲಿಯಿದ್ದ ಮೀರಾ ಎರಡು ಕಾದಂಬರಿಗಳನ್ನು ಹಿಂದಿಯಲ್ಲಿ ಬರೆದಿದ್ದಾರೆ. ಒಂದು ದಿನ ಅವರು ದಾರಿಯಲ್ಲಿ ಹೋಗುತ್ತಿರುವಾಗ ಒಂದು ಬೃಹತ್ ಕಟ್ಟಡ ತಲೆ ಎತ್ತುತ್ತಿರುವುದನ್ನು ನೋಡಿದರು. ಅಲ್ಲಿನ ಸಿಮೆಂಟ್ ಧೂಳಿನಲ್ಲಿ, ಅನಾರೋಗ್ಯಕರ ವಾತಾವರಣದಲ್ಲಿ ಕೆಲಸಗಾರರ ಚಿಕ್ಕಚಿಕ್ಕ ಮಕ್ಕಳು ಹರುಕು ಕೊಳೆಬಟ್ಟೆ ಧರಿಸಿ, ಮಲಿನವಾದ ಕೈಗಳಿಂದ ಒಬ್ಬರಿಗೊಬ್ಬರು ತಲೆಯಲ್ಲಿ ಹೇನು ತೆಗೆಯುತ್ತಾ ಇರುವ ಕರುಣಾಜನಕ ಸ್ಥಿತಿಯನ್ನು, ಪುಟ್ಟ ಮಕ್ಕಳು ಕೆಳಕ್ಕೆ ಬೀಳದಂತೆ ಕಂಬಗಳಿಗೆ ಬಿಗಿದು ಕಟ್ಟಿರುವುದನ್ನೂ ನೋಡಿದ ಮೇಲಂತೂ ಮೀರಾರ ಕರುಳು ಚುರುಕ್ಕೆಂದಿತು. ಇಂತಹ ಮಕ್ಕಳಿಗಾಗಿ ಏನಾದರೂ ಮಾಡಬೇಕೆಂದು ಆಲೋಚಿಸಿ, ಅಲ್ಲಿ ಇಲ್ಲಿ ಕಾಡಿಬೇಡಿ ಸ್ವಲ್ಪ ಹಣ ಸಂಗ್ರಹಿಸಿದರು. "ಬೇಬಿ ಕ್ರಶ್" ಎಂಬ ಹೆಸರಿನಲ್ಲಿ ಒಂದು ಶಿಶುವಿಹಾರವನ್ನು ಇಂತಹ ಮಕ್ಕಳಿಗಾಗಿಯೇ ಪ್ರಾರಂಭಿಸಿದರು. ಕಾರ್ಮಿಕ ತಾಯಂದಿರನ್ನು ಒಪ್ಪಿಸಿ, ಅವರು ತಮ್ಮ ಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಒಪ್ಪಿಸಿದರು. ಸೇವಾ ಮನೋಭಾವದ ಆಯಾಗಳನ್ನು ನೇಮಿಸಿ ಮಕ್ಕಳಿಗೆ ಸ್ನಾನ ಮಾಡಿಸಿ, ಸ್ವಚ್ಛ ಬಟ್ಟೆ ಹಾಕಿ, ಊಟ ನೀಡಿ ಸೇವೆ ಮಾಡುತ್ತಿದ್ದುದನ್ನು ನೋಡಿದ ಕೆಲವು ಕಟ್ಟಡ ನಿರ್ಮಿಸುವ ಇಂಜಿನಿಯರ್ಗಳು ನಿರ್ಮಾಣದ ಹಂತದಲ್ಲಿದ್ದ ತಮ್ಮ ಕಟ್ಟಡದಲ್ಲಿಯೇ ಒಂದೆಡೆ ನೆಲೆ ಕಲ್ಪಿಸಿಕೊಡಲು ಪ್ರಾರಂಭಿಸಿದರು. ಎಷ್ಟೋ ವೇಳೆ ಮೀರಾ ತಾವೇ ಮುಂದೆ ನಿಂತು ಈ ಮಕ್ಕಳ ಬಟ್ಟೆ ಒಗೆಯುವುದು, ಮೀಯಿಸುವುದನ್ನು ನೋಡಿದ ಜನ ಇವರ ನೆರವಿಗೆ ಧಾವಿಸಿದ್ದೂ ಇದೆ. ಕಟ್ಟಡ ಪೂರ್ಣವಾದ ಮೇಲೆ ಮತ್ತೊಂದು ಕಡೆ ಇಂತಹ ಶಾಲೆ ಪ್ರಾರಂಭವಾಗುತ್ತಿತ್ತು. ಹೀಗಾಗಿ ಇದನ್ನು ಚಲಿಸುವ ಶಾಲೆ ಎಂದು ಕರೆಯಲಾಯಿತು. ಬೇಬಿ ಕ್ರಶ್ನಲ್ಲಿ ಮೂರರಿಂದ ಹನ್ನೆರಡು ವರ್ಷದ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಪ್ರಾರಂಭವಾಗಿ ಎಲ್ಲ ಕಡೆಯೂ ಶಾಲೆಗಳು ಚೆನ್ನಾಗಿ ನಡೆಯುತ್ತಿದ್ದವು. ಮೀರಾರ ಕಾರ್ಯವನ್ನು ನೋಡಿದ ಅನೇಕ ಸಂಘ ಸಂಸ್ಥೆಗಳು ನೆರವಿನ ಮಹಾಪೂರವನ್ನೇ ಹರಿಸಿದರು. ಇಂತಹ ಶಾಲೆಗಳು ಕೊಳೆಗೇರಿಗಳಲ್ಲಿಯೂ ಪ್ರಾರಂಭವಾದವು. ಸರ್ಕಾರ ಮತ್ತು ವಿಶ್ವಸಂಸ್ಥೆ ಕೂಡ ಮೀರಾರ ನೆರವಿಗೆ ಬಂದವು. ತಮ್ಮ ಸಾಧನೆಯ ಬಗ್ಗೆ ಲವಲೇಶವೂ ಹೇಳಿಕೊಳ್ಳದ ಮೀರಾ "ಬಡತನದ ಭೂತ ತೊಲಗಬೇಕಾದರೆ, ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಬಡತನಕ್ಕೆ ಬೆನ್ನು ತೋರದೆ ಅದರೊಡನೆ ಹೋರಾಡಬೇಕು" ಎನ್ನುತ್ತಾರೆ. ಇಂಥ ಸಮಾಜಸೇವಕಿ ತಮ್ಮ 48ನೇ ವಯಸ್ಸಿನಲ್ಲಿಯೇ ಕ್ಯಾನ್ಸರಿನಿಂದ ಮರಣಿಸಿದಾಗ ಇಡೀ ದೆಹಲಿ ಕಣ್ಣೀರಿಟ್ಟಿತು.

 
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.