ಸಂಪಾದಕೀಯ

ಉಪೇಕ್ಷೆಗೀಡಾದ ಗ್ರಂಥಾಲಯ ಇಲಾಖೆ

Published On :

ಇಲಾಖೆಗೆ ಸಂಬಂಧಪಟ್ಟ ಸಚಿವರಾಗಲೀ ಮಾನ್ಯ ಮುಖ್ಯಮಂತ್ರಿಗಳಾಗಲೀ ಗ್ರಂಥಾಲಯ ಇಲಾಖೆಯ ಬಗ್ಗೆ ತಳೆದಿರುವ ಮಲತಾಯಿ ಧೋರಣೆಗೆ ವಿಷಾದಿಸಬೇಕಾಗಿದೆ. 2011, 2012, 2013ರಿಂದ ಗ್ರಂಥಾಲಯಗಳು ಆಯ್ಕೆಯಾದ ಗ್ರಂಥಗಳನ್ನು ಖರೀದಿಸಿಲ್ಲ. ಓದುಗರಿಗೆ ಗ್ರಂಥಾಲಯಗಳಲ್ಲಿ ಇತ್ತೀಚಿನ ಗ್ರಂಥಗಳು ಲಭ್ಯವಾಗುತ್ತಿಲ್ಲ. ಇಲಾಖೆ ಇದ್ದೂ ಪ್ರಯೋಜನವಿಲ್ಲವಾಗಿದೆ. ಕಾರ್ಪೋರೇಷನ್‌ನಿಂದ ಇಲಾಖೆಗೆ ಬಾಕಿ ಇರುವ ಕೋಟ್ಯಂತರ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಗಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ಶೀಘ್ರ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಜಾಣಕುರುಡು. 3-4 ವರ್ಷಗಳಿಂದ ವರ್ಷಕ್ಕೊಬ್ಬರು ನಿರ್ದೇಶಕರು ಬಂದು ನಿವೃತ್ತರಾಗಿ ಹೋಗುತ್ತಿದ್ದಾರೆ. ಇವರು ಮಾಡಿರುವ ವ್ಯವಹಾರಗಳ ತನಿಖೆ ಆಗಿಲ್ಲ.
1. ಗ್ರಂಥಾಲಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಕಳೆದ ವರ್ಷದ ರಾಜಾರಾಮ್ ಮೋಹನರಾಯ್ ಬಿಲ್ ಹಣ ಇಂದಿನವರೆಗೆ ಪಾವತಿಯಾಗಿಲ್ಲ. ಕಾರಣ ಬಿಲ್‌ಗಳನ್ನು ವರ್ಷ ಮುಗಿದ ಮೇಲೆ ಕಲಕತ್ತೆಗೆ ಕಳುಹಿಸಲಾಗಿದೆ. ಇದಕ್ಕೆ ಯಾರು ಹೊಣೆ?
2. ಏಕಗವಾಕ್ಷಿ ಅಡಿಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಲೇಖಕರಿಗೆ ಇಂದಿನವರೆಗೆ ಇಲಾಖೆಯಿಂದ ಆಯ್ಕೆ ಆದ ಗ್ರಂಥಗಳಿಗೆ ಆದೇಶ ಬಂದಿಲ್ಲ.
3. ರಾಜ್ಯ ಪುಸ್ತಕ ಆಯ್ಕೆ ಸಮಿತಿಯ ಕಣ್ತಪ್ಪಿನಿಂದಾಗಿ ಆಯ್ಕೆ ಆಗದೆ ಬಿಟ್ಟು ಹೋಗಿರುವ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಪ್ರಬಂಧ ಇತ್ಯಾದಿ ಉತ್ತಮ ಗ್ರಂಥಗಳನ್ನು ಅದೇ ಹಳೇ ಸಮಿತಿಯೇ ಒಮ್ಮೆ ಸಭೆ ಸೇರಿ ಮರು ಪರಿಶೀಲನೆ ನಡೆಸಿ ಮರು ಆಯ್ಕೆ ಮಾಡಿ ಲೇಖಕರ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಕೃಪೆ ಮಾಡಬೇಕಾಗಿ ಲೇಖಕರ ಪರವಾಗಿ ವಿನಂತಿ.
ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿರುವ ಲೇಖಕರ, ಪ್ರಕಾಶಕರ ನೆರವಿಗೆ ಬಂದು ಅವರ ಕಷ್ಟ ಪರಿಹರಿಸಬೇಕಾಗಿ ವಿನಂತಿ. ಗ್ರಂಥ ಖರೀದಿಗೆ ಬಿಡುಗಡೆ ಮಾಡುವ ಅನುದಾನವನ್ನು ಇಲಾಖೆ ಬೇರೆ ಬಾಬುಗಳಿಗೆ ವಿನಿಯೋಗಿಸದಂತೆ ಕಟ್ಟುನಿಟ್ಟಿನ ಆಜ್ಞೆ ಮಾಡಬೇಕಾಗಿಯೂ ವಿನಂತಿ. ಪಕ್ಷ ಭೇದ ಮರೆತು ಶಾಸಕರು-ಸಚಿವರು ಗ್ರಂಥಾಲಯ ಇಲಾಖೆಯ ಸಮಸ್ಯೆಯನ್ನು ಅಸೆಂಬ್ಲಿಯಲ್ಲಿ ಚರ್ಚಿಸಬೇಕಾಗಿಯೂ ವಿನಂತಿ.
-ಬಿ.ಜಿ. ಸತ್ಯಮೂರ್ತಿ

'ಮಹರ್ಷಿ ವಾಲ್ಮೀಕಿ' ಪದ ಜಾತಿಸೂಚಕವೇ?

ಕೆ.ಎಸ್. ನಾರಾಯಣಾಚಾರ್ಯ ಬರೆದ ವಾಲ್ಮೀಕಿ ಯಾರು? ಕೃತಿ ಈಗ ತೀವ್ರ ವಿವಾದಕ್ಕೆ ಒಳಗಾಗಿ ಮಹರ್ಷಿ ವಾಲ್ಮೀಕಿ ಪದವನ್ನುಜಾತಿ ಸೂಚಕಕ್ಕೆ ಎಡೆಮಾಡಿಕೊಟ್ಟಿರುವುದು ಸಲ್ಲದು.
ರಾಮಾಯಣ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿಗಳು ಮಹಾಕವಿ, ಮಹರ್ಷಿ, ದ್ರಾಷ್ಟಾರ, ದಾರ್ಶನಿಕರಾಗಿ ನಮಗೆ ಪೂಜಾರ್ಹರಾಗಿದ್ದಾರೆ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಾಧುವಲ್ಲ. ಸಾಧನೆಯ ಸ್ಥಿತಿಯಲ್ಲಿ ಸುತ್ತ ಬೆಳೆದ ಹುತ್ತದಿಂದ ಹೊರಬಂದು ವಾಲ್ಮೀಕಿಯೆನಿಸಿಕೊಂಡು ಇವರಿಗೆ ಜಾತಿಯನ್ನು ಕಲ್ಪಿಸುವುದು ಕಲ್ಪನೆಗೂ ಮೀರಿದ ವಿಚಾರ. ಹುತ್ತ ಪದಕ್ಕೆ ಸಂಸ್ಕೃತದಲ್ಲಿ ವಾಲ್ಮೀಕ ಎಂದಿದೆ. ಈ ವಲ್ಮಿಕದಿಂದ ಹೊರಬಂದವನು ಅವನು ವಾಲ್ಮೀಕಿ.
ಇದು ಬವ್ರಿಹಿ ಸಮಾಸ ಮತ್ತು ಅನ್ವರ್ಥಕ್ಕೆ ಸಲ್ಲುತ್ತದೆ. ಹೀಗೆ ಅನ್ವರ್ಥ ನಾಮದಿಂದ ಪ್ರಸಿದ್ಧರಾದ ವಾಲ್ಮೀಕಿ ಮಹರ್ಷಿ ಪದದಲ್ಲಿ ವಿಪ್ರ-ವ್ಯಾಧ ಜಾತಿಯನ್ನು ಅರಸುವುದು ಮಹಾಪರಾಧ! ಋಷಿ ಮೂಲವನ್ನು ಹುಡುಕಬಾರದೆಂಬುದು ವೇದಾಂತ ಪ್ರಮಾಣ.
ವಾಲ್ಮಿಕ (ಹುತ್ತ) ಪದ ಜಾತಿ ಸೂಚಕವಾಗಿಲ್ಲದ್ದರಿಂದ ವಾಲ್ಮೀಕಿ ಮಹರ್ಷಿಗಳನ್ನು ಬ್ರಾಹ್ಮಣನೆಂದು ವಾದಿಸುವುದು ಹಾಗೂ ಬೇಡನೆಂದು ಸಮರ್ಥಿಸಿಕೊಳ್ಳುವುದು ಎರಡೂ ಸೈದ್ಧಾಂತಿಕವಾಗಿ ಹಾಗೂ ತಾತ್ವಿಕವಾಗಿ ಸಮಾಜಸವಲ್ಲ.
-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮ, ಸಿಂಧನೂರು.

ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.