ರಸ್ತೆ ವಿಸ್ತರಿಸಿ
ಮಾಲೂರು- ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೈವೇ ರಸ್ತೆ ಇರುವುದು ಸರಿಯಷ್ಟೆ. ಆದರೆ ಈ ರಸ್ತೆಯು ಬಹಳ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇತ್ತೀಚೆಗಂತೂ ಮಾಲೂರು-ಹೊಸಕೋಟೆ ರಸ್ತೆಯಲ್ಲಿನ ವಾಹನಗಳ ಸಂಚಾರ ದಟ್ಟಣೆ ಹೇಳಲಾರದಷ್ಟು ಹೆಚ್ಚಾಗುತ್ತಿದೆ. ಇದರಿಂದ ಈ ರಸ್ತೆಯು ಹೆಚ್ಚುತ್ತಿರುವ ವಾಹನಗಳ ಸಂಚಾರಕ್ಕೆ ಸಾಕಾಗದೆ ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಮಂತ್ರಿಗಳು ಈ ಕೂಡಲೇ ಇತ್ತ ಗಮನ ಹರಿಸಿ, ಹೆಚ್ಚಾಗುತ್ತಿರುವ ವಾಹನಗಳ ಸಂಚಾರವನ್ನು ಪರಿಶೀಲಿಸಿ ಹಾಗೂ ಈ ಚಿಕ್ಕದಾಗಿರುವ ರಸ್ತೆಯಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಈ ರಸ್ತೆಯನ್ನು ಮಾಲೂರಿನಿಂದ ಹೊಸಕೋಟೆಯವರೆವಿಗೂ ಶೀಘ್ರವಾಗಿ ಅಗಲೀಕರಣಗೊಳಿಸಲು ಕ್ರಮವನ್ನು ಕೈಗೊಂಡು ಕಾರ್ಯ ಪ್ರಾರಂಭಿಸಿ ಕಾರ್ಯರೂಪಕ್ಕೆ ತರುವಂತೆ ಮನವಿ. ಈ ರಸ್ತೆಯನ್ನು ಮಾಲೂರಿನಿಂದ ಹೊಸಕೋಟೆ ರಸ್ತೆಯ ಯಶವಂತಪುರ ಗೇಟಿನವರೆಗೂ ದ್ವಿ-ಮುಖ ರಸ್ತೆ (ಡಬಲ್ ರೋಡ್) ಮಾಡಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಅನುವು ಮಾಡಬೇಕು.
-ಸಿ.ಕೆ. ರಘುನಾಥ ಸಿಂಗ್, ಮಾಲೂರು
ಕಳ್ಳ ಯಾರೆಂದು ತಿಳಿಯಿರಿ
ಸನ್ಯಾಸ ಸವಾಲು, ಅಕ್ರಮ ಡಿನೋಟಿಫಿಕೇಷನ್, ಸಿದ್ದರಾಮಯ್ಯ -ಶೆಟ್ಟರ್ ವಾಗ್ಯುದ್ಧ (ಕ.ಪ್ರ. 27.7.14). ಈ ಅಕ್ರಮ ಡಿನೋಟಿಫಿಕೇಷನ್ನ್ನು ಪ್ರತಿಪಕ್ಷದ ನಾಯಕರಾದ ಜಗದೀಶ ಶೆಟ್ಟರ್ರವರು, ಈಗಿನ ಮುಖ್ಯಮಂತ್ರಿಯರು ಮಂಡಿಸುತ್ತಾರೆ ಎಂದು ದೂಷಿಸಿದರೆ, ಮುಖ್ಯಮಂತ್ರಿಗಳು ಬಿಜೆಪಿ ಅಧಿಕಾರದಲ್ಲಿದ್ದಾಗ ಮತ್ತು ಶೆಟ್ಟರ್ರವರು ಮುಖ್ಯಮಂತ್ರಿ ಆಗಿದ್ದಾಗಿನಿಂದಲೇ ಈ ಡಿನೋಟಿಫಿಕೇಷನ್ ಆಗಿದೆ ಎಂದು ಪ್ರತಿ ದೂಷಣೆ ಮಾಡಿದ್ದಾರೆ. ಈ ಇಬ್ಬರು ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಈ ಹಗರಣ ಒಂದು ವೇಳೆ ಅವರು ಮಾಡಿದ್ದರೆ, ಸನ್ಯಾಸ ಸ್ವೀಕರಿಸುವ ಮಾತನ್ನಾಡಿದ್ದಾರೆ. ಆದರೆ ಇದೊಂದು ಗಂಭೀರ ವಿಷಯ. ಕರ್ನಾಟಕದ ಜನತೆಗೆ ಈ ಇಬ್ಬರಲ್ಲಿ ಕಳ್ಳರು ಯಾರೆಂಬುದು ಗೊತ್ತಾಗಬೇಕಿದೆ. ಅದು ಅವರ ಹಕ್ಕೂ ಕೂಡ. ಆದುದರಿಂದ ಸರ್ಕಾರ ಈ ಕೂಡಲೇ ಸೂಕ್ತ ತನಿಖೆಗೆ ಆದೇಶಿಸಬೇಕು. ಆದರೆ ಮು.ಮ. ಅವರು ಸಿಬಿಐಗೆ ವಹಿಸಲು ನಿರಾಕರಿಸಿರುತ್ತಾರೆ. ಇದಕ್ಕಿಂತ ಹೆಚ್ಚಾಗಿರುವ ಯಾವ ತನಿಖಾ ಸಂಸ್ಥೆಯಿದೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ ಮಾನ್ಯ ಸ್ಪೀಕರ್ರವರು ಮತ್ತು ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರಿಯಾದ ತನಿಖೆ ಮಾಡಿಸಲೇಬೇಕು, ಸತ್ಯ ಜನರಿಗೆ ತಿಳಿಯಲೇಬೇಕು. ಇದು ಕೇವಲ ಕಣ್ಣುಮುಚ್ಚಾಲೆ ಆಟ ಆಗಬಾರದು.
-ಬ್ಯಾಂಕ್ ಶಿವಕುಮಾರ್, ಮೈಸೂರು
ನಾಗರಿಕ ಪ್ರಜ್ಞೆಯ ಅವಸಾನ
ಆಂಧ್ರದಲ್ಲಿ ಶಾಲಾ ಬಸ್, ಚಾಲಕನ ಮೊಬೈಲ್ ಪ್ರೀತಿಯಿಂದ 16 ಮಕ್ಕಳೂ ಸೇರಿ 18 ಜನ ದಾರುಣ ಸಾವನ್ನಪ್ಪಬೇಕಾಯ್ತು. ಮೊಬೈಲ್ ಮಾತಿನಿಂದಾಗಿ ಬರುತ್ತಿರುವ ರೈಲನ್ನೂ ಗಮನಿಸದೆ ಬಸ್ಸನ್ನು ಚಲಾಯಿಸಿ ಘಟನೆ ಸಂಭವಿಸಿದೆ. ಬಸ್ಸು-ಲಾರಿ-ಕಾರು-ರಿಕ್ಷಾ ಹಾಗೂ ದ್ವಿಚಕ್ರ ವಾಹನ ಚಾಲಕರು ಮೊಬೈಲ್ನ್ನು ಕಿವಿಗಾನಿಸಿ ವಾಹನ ಚಲಾಯಿಸುವುದು ಇಂದು ಸರ್ವೇ ಸಾಮಾನ್ಯ. ಸಂಚಾರಿ ನಿಯಮ ಇರುವುದೇ ಉಲ್ಲಂಘಿಸುವುದಕ್ಕೆ ಎಂಬಂತಾಗಿದೆ. ನಮ್ಮಲ್ಲಿ ನಾಗರೀಕ ಪ್ರಜ್ಞೆ ಕಡಿಮೆ ಆದಷ್ಟು ಇಂತಹ ದುರ್ಘಟನೆಗಳು ಮರುಕಳಿಸುತ್ತಾ ಇರುತ್ತವೆ. ಇದಕ್ಕೆ ಪೊಲೀಸರನ್ನಾಗಲಿ, ಸರ್ಕಾರವನ್ನಾಗಲಿ ದೂರಿ ಫಲವಿಲ್ಲ. ಮುಖ್ಯವಾಗಿ ವಾಹನ ಚಾಲಕರು ಮೊಬೈಲ್ ಪ್ರಿಯರಾಗದಿದ್ದರೆ ದಾರಿಹೋಕರೆಲ್ಲರೂ ಕ್ಷೇಮ.
-ಎನ್.ಡಿ. ಕಾರಂತ, ಮೈಸೂರು.
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

