ಸಂಪಾದಕೀಯ

ವಿದಾಯ ಹೇಳಲು ಸಂತೋಷಕೂಟ

Published On :

ನಮ್ಮ ದೇಶದ ಇತಿಹಾಸದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಹೆಸರು ಚಿರಸ್ಥಾಯಿಯಾಗಿದೆ. ಎಲ್ಲರೂ ಅವರನ್ನು ಪ್ರೀತಿಯಿಂದ ಜೆಪಿ ಎಂದೇ ಕರೆಯುತ್ತಿದ್ದರು. ಅವರು ಅಮೆರಿಕಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದಾಗ ಅವರ ಪತ್ನಿ ಪ್ರಭಾವತಿದೇವಿ ಗಾಂಧೀಜಿಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಜೆಪಿ ಮತ್ತು ಪ್ರಭಾವತಿಯವರ ದಾಂಪತ್ಯ ಅನುರೂಪ ಜೀವನವಾಗಿತ್ತು. ಇಬ್ಬರೂ ವಿಶಾಲ ಹೃದಯಿಗಳೂ, ದಯಾಪರರೂ, ಸರಳ ಜೀವನವನ್ನು ಇಷ್ಟಪಡುವ ಸಮಾಜ ಸೇವಕರಾಗಿದ್ದರು. ಪ್ರಭಾವತಿಯವರು ಧೀರ ಪ್ರವೃತ್ತಿಯ, ನೇರ ನುಡಿಯ ವ್ಯಕ್ತಿಯಾಗಿದ್ದರಲ್ಲದೆ, ಪ್ರೀತಿ ವಾತ್ಸಲ್ಯಗಳ ಗಣಿಯೆನಿಸಿದ್ದರು. ಎಲ್ಲರೂ ಅವರನ್ನು ದೀದಿ ಎಂದು ಕರೆದು ಗೌರವ ಸೂಚಿಸುತ್ತಿದ್ದರು. ಒಮ್ಮೆ ಪ್ರಭಾವತಿ ದೇವಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ವೈದ್ಯರ ಬಳಿ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ, ಪ್ರಭಾವತಿ ಗುಣಪಡಿಸಲಾಗದ ಮಾರಣಾಂತಿಕ ಕ್ಯಾನ್ಸರ್ನಿಂದ ನರಳುತ್ತಿರವುದನ್ನು ಪತ್ತೆಹಚ್ಚಿ ಅದನ್ನು ಜೆಪಿಯವರಿಗೆ ತಿಳಿಸಿದರು. ವಿಷಯವನ್ನು ಕೇಳಿ ಜೆಪಿಯವರಿಗೆ ದುಃಖವಾದರೂ ಧೃತಿಗೆಡಲಲ್ಲ. ಈ ಪರಿಸ್ಥಿತಿಯನ್ನು ಅವರು ತಮ್ಮ ಪತ್ನಿಗೆ ತಿಳಿಸಲೇಬೇಕಿತ್ತು.
ಒಂದು ದಿನ ಹೀಗೇ ಮಾತನಾಡುತ್ತಿರುವಾಗ ಜಯಪ್ರಕಾಶ್ ನಾರಾಯಣ್‌ರವರು, "ಪ್ರಭಾ, ನೋಡು ನಾನು ಮೊದಲು ಹೋಗುವೆನೆಂದು ಭಾವಿಸಿದ್ದೆ. ಆದರೆ ನೀನೇ ನನಗಿಂತ ಮೊದಲು ಹೋಗುವ ಲಕ್ಷಣಗಳು ಕಾಣುತ್ತಿವೆ" ಎಂದು ಹೇಳಿ, ಅವರಿಗಿರುವ ಕ್ಯಾನ್ಸರ್ ಬಗ್ಗೆ ವಿಷಯ ತಿಳಿಸಿದರು. ಅದನ್ನು  ಕೇಳಿ ಪ್ರಭಾವತಿಯವರು ಕಂಗೆಟ್ಟು ಗೋಳಾಡುವರೆಂದು ತಿಳಿದಿದ್ದ ಜೆಪಿಯವರಿಗೆ ಅಚ್ಚರಿ ಕಾದಿತ್ತು. ವಿಷಯ ತಿಳಿದ ದೀದೀ ಅಂಜಲಿಲ್ಲ, ಅಳುಕಲಿಲ್ಲ. ಮಾನಸಿಕ ಸಮತೋಲನವನ್ನೂ ಕಳೆದುಕೊಳ್ಳದೆ ಶಾಂತರಾಗಿ, ನೀವು ಒಳ್ಳೆಯ ವಿಷಯವನ್ನೇ ಹೇಳಿದಿರಿ. ಇಷ್ಟು ದಿನ ನೀವು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿರಿ. ನನ್ನ ಮೇಲೆ ಅದೆಷ್ಟು ಜನರು ತಮ್ಮ ಪ್ರೀತಿ, ವಿಶ್ವಾಸ ತೋರಿಸಿ ನನ್ನನ್ನು ತಮ್ಮ ಸಹೋದರಿಯಂತೆ ಕಂಡಿದ್ದಾರೆ ಅವರಿಗೆಲ್ಲಾ ನಾನು ಕೃತಜ್ಞತೆ ತೋರಬೇಡವೆ? ಆದ್ದರಿಂದ ಅವರೆಲ್ಲರಿಗೆ ಒಂದು ಸಂತೋಷ ಕೂಟವನ್ನು ಏರ್ಪಡಿಸೋಣ ಎಂದರು.  ಅದನ್ನು ಕೇಳಿ ಜೆಪಿಯವರಿಗಿದ್ದ ಆತಂಕ ದೂರವಾಗಿ, ತಮ್ಮ ಪತ್ನಿಯ ಬಗ್ಗೆ ಹೆಮ್ಮೆ ಎನಿಸಿತು. ಅಂತಹ ಸಂದರ್ಭದಲ್ಲಿಯೂ ಸಹ ಧೈರ್ಯತೋರಿದ ಅವರ ಮನಸ್ಥೈರ್ಯವನ್ನು ಮನಸಾರ ಶ್ಲಾಘಿಸಿದರು. ತಮ್ಮ ಪತ್ನಿಯ ಆಶಯದಂತೆ ದೆಹಲಿಯ ಇಂಡಿಯನ್ ಎಕ್ಸ್‌ಪ್ರೆಸ್ ಅತಿಥಿ ಗೃಹದಲ್ಲಿ ಒಂದು ಸಂತೋಷ ಕೂಟವನ್ನೇರ್ಪಡಿಸಿ ಎಲ್ಲ ಗೆಳೆಯರನ್ನು, ಹಿತೈಷಿಗಳನ್ನು ಕರೆದು ಉಪಚರಿಸಿದರು. ಅವರು ನಗುನಗುತ್ತಾ ಓಡಾಡಿ ಎಲ್ಲರನ್ನೂ ಉಪಚರಿಸುತ್ತಿದ್ದುದನ್ನು ನೋಡಿ ಜೆಪಿಯವರಿಗೆ ಕಣ್ಣಾಲಿಗಳು ತುಂಬಿ ಬಂದವು. ಆಗಮಿಸಿದ ಎಲ್ಲ ಅತಿಥಿಗಳೂ ಸಂತೃಪ್ತಿಯಿಂದ ಮನೆಗೆ ತೆರಳುವಾಗ ಪ್ರಭಾವತಿ ದೇವಿಯವರಿಗೆ ಶುಭ ಹಾರೈಸಿದರು. ಅದಾದ ಕೆಲವೇ ದಿನಗಳಲ್ಲಿ ಅವರು ಇಹಲೋಕ ತ್ಯಜಿಸಿದಾಗ ಜೆಪಿಯವರ ಬಾಳು ಶೂನ್ಯವಾಯಿತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.