ಎಂಟಾಣೆ ಇದ್ದಿದ್ದರೆ ಅಂಗಿಯನ್ನೇ ಕೊಳ್ಳುತ್ತಿದ್ದೆ
ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳು ನಾಡುಕಂಡ ಒಬ್ಬ ಶ್ರೇಷ್ಠ ಭಾಷಣಕಾರ, ಶಿಕ್ಷಕ, ರಾಯಭಾರಿ ಮತ್ತು ರಾಜಕಾರಣಿ. ಅವರ ಇಂಗ್ಲಿಷ್ ಭಾಷಣವನ್ನು ಕೇಳಿದ ಆಂಗ್ಲರು, ಇಂಗ್ಲಿಷರಿಗೆ ಇಂಗ್ಲಿಷನ್ನು ಕಲಿಸಿದ ಭಾರತೀಯ ಇಲ್ಲಿದ್ದಾನೆ ಎಂದು ಉದ್ಗರಿಸಿದ್ದುಂಟು!
ಶಾಸ್ತ್ರಿಗಳು ಅತ್ಯಂತ ಬಡ ಕುಟುಂಬದಿಂದ ಬಂದವರು. ಅವರ ತಂದೆ ಬಡ ವೈದಿಕರಾಗಿದ್ದರು. ಆ ಬಡತನ ಎಷ್ಟಿತ್ತೆಂದರೆ, ಯಾರಾದರೂ ಮಾವಿನ ಕಾಯಿಯನ್ನು ತಂದುಕೊಟ್ಟರೆ, ಅದಕ್ಕೆ ಉಪ್ಪು ಕೊಳ್ಳಲು ಹಣವಿಲ್ಲದ್ದರಿಂದ ಮಾವಿನಕಾಯಿಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. ಅಂತಹ ಕುಟುಂಬದಲ್ಲಿ ಜನಿಸಿ, ಮುಂದೆ ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಮೊದಲ ದರ್ಜೆಯೊಂದಿಗೆ ಉತ್ತೀರ್ಣರಾದರು. ಅವರು ಕುಂಭಕೋಣಂನ ಸರ್ಕಾರಿ ತರಬೇತಿ ಕಾಲೇಜಿನಲ್ಲಿ ಓದುತ್ತಿದ್ದಾಗ ಬಿಲ್ಡರ್ ಬೆಕ್ ಎಂಬ ಆಂಗ್ಲ ಪ್ರಾಚಾರ್ಯರಿದ್ದರು. ಅವರು ಅಶಿಸ್ತನ್ನೆಂದೂ ಸಹಿಸದವರಾಗಿದ್ದುದರಿಂದ ವಿದ್ಯಾರ್ಥಿಗಳಿಗೆ ಅವರನ್ನು ಕಂಡರೆ ಭಯ. ಒಮ್ಮೆ ಶ್ರೀನಿವಾಸ ಶಾಸ್ತ್ರಿಗಳು ಕಾಲೇಜಿಗೆ ಬರುವಾಗ ಅನಿರೀಕ್ಷಿತ ಮಳೆ ಬಂದುದರಿಂದ ಅಂಗಿಯೆಲ್ಲ ನೆನೆದು ಮುದ್ದೆಯಾಯಿತು. ಅದನ್ನು ಬಿಚ್ಚಿ ಕಾಲೇಜಿನ ಹೊರಗೆ ಒಣಗಲು ಹಾಕಿ, ಹಾಗೆಯೇ ತರಗತಿಯ ಒಳಗೆ ಹೋಗಿ ಕುಳಿತರು. ಅಂಗಿರಹಿತರಾಗಿ ಬಂದ ಶಾಸ್ತ್ರಿಗಳನ್ನು ನೋಡಿ ಮೊದಲೇ ಶಿಸ್ತಿನ ಸಿಪಾಯಿಯಾಗಿದ್ದ ಪ್ರಿನ್ಸಿಪಾಲರಿಗೆ ತುಂಬ ಕೋಪ ಬಂತು. ಶಾಸ್ತ್ರಿಗಳಿಗೆ ಎಂಟಾಣೆ (ಈಗಿನ 50 ಪೈಸೆ) ಜುಲ್ಮಾನೆ ವಿಧಿಸಿದರು. ದುಃಖತಪ್ತರಾದ ಶಾಸ್ತ್ರಿಗಳು ಕಣ್ಣಿರಿಡುತ್ತಾ, ತಮ್ಮ ಬಳಿ ಎಂಟಾಣೆ ಇದ್ದಿದ್ದರೆ, ಹೊಸ ಅಂಗಿಯನ್ನೇ ಕೊಂಡು ಧರಿಸುತ್ತಿದ್ದೆ ಎಂದಾಗ ಶಾಸ್ತ್ರಿಗಳ ಪರಿಸ್ಥಿತಿಯ ಅರಿವಾಗಿ ಬೆಕ್ ಮಮ್ಮುಲ ಮರುಗಿದರು. ತಾವೇ ಒಂದು ಹೊಸ ಅಂಗಿಯನ್ನು ತರಿಸಿ ಶಾಸ್ತ್ರಿಗಳಿಗೆ ನೀಡಿದರು. ಮುಂದೆ 1921ರಲ್ಲಿ ಶ್ರೀನಿವಾಸ ಶಾಸ್ತ್ರಿಗಳು ಇಂಗ್ಲೆಂಡಿಗೆ ಭೇಟಿನೀಡಿದಾಗ ಪ್ರಿನ್ಸಿಪಾಲ್ ಬಿಲ್ಡರ್ ಬೆಕ್‌ರವರು ತಮ್ಮ ವಿಶ್ರಾಂತಿ ಜೀವನವನ್ನು ಲಂಡನ್ನಿನಲ್ಲಿ ಕಳೆಯುತ್ತಿದ್ದರು. ತಮ್ಮ ಶಿಷ್ಯ ಈಗ ಬ್ರಿಟಿಷ್ ಪ್ರೀವಿ ಕೌನ್ಸಿಲ್‌ನ ಸದಸ್ಯನಾಗಿ ಲಂಡನ್ನಿಗೆ ಬಂದಿರುವುದನ್ನು ತಿಳಿದು, ಶಿಷ್ಯನ ಅಭ್ಯುದಯ ಕಂಡು ಸಂತಸಗೊಂಡರು. ಅವರು ತಂಗಿದ್ದ ಹೋಟೆಲಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಭೇಟಿ ಮಾಡುವ ಇಚ್ಚೆಯನ್ನು ವ್ಯಕ್ತ ಪಡಿಸಿದರು. ಅಲ್ಲದೆ ತನ್ನ ಶಿಷ್ಯನ ಗೌರವಾರ್ಥ ಸಂತೋಷಕೂಟವನ್ನು ಏರ್ಪಡಿಸಿದರು. ಅಲ್ಲಿ ಆಗಮಿಸಿದ್ದ ತಮ್ಮ ಮಿತ್ರರಿಗೆ ಶ್ರೀನಿವಾಸ ಶಾಸ್ತ್ರಿಗಳು ಓದುತ್ತಿದ್ದಾಗಿನ ಅಂಗಿಯ ದಾರುಣ ಕಥೆಯನ್ನು ಮನಮುಟ್ಟುವಂತೆ ಹೇಳಿದಾಗ ಅಲ್ಲಿದ್ದ ಎಲ್ಲರ ಕರುಳೂ ಚುರುಗುಟ್ಟಿತು. ಆಗ ಶಾಸ್ತ್ರಿಯವರು ತಮ್ಮ ಕೈಚೀಲದಿಂದ ಪ್ರಿನ್ಸಿಪಾಲರು ನೀಡಿದ್ದ ಅಂಗಿಯನ್ನು ತೆಗೆದು ಎಲ್ಲರಿಗೂ ತೋರಿಸಿದರು. ತಮ್ಮ ಪ್ರೀತಿಯ ಗುರುಗಳು ನೀಡಿದ ಕೊಡುಗೆಯನ್ನು ಅಷ್ಟು ವರ್ಷವೂ ತುಂಬಾ ಜತನದಿಂದ ಸಂರಕ್ಷಿಸಿದ್ದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

