ಸಂಪಾದಕೀಯ

ಮಾಸ್ತಿ ಕನ್ನಡದ ಆಸ್ತಿಯಾದದ್ದು ಹೇಗೆ?

Published On :

ನಮ್ಮ ಕನ್ನಡದ ಆಸ್ತಿ, ಸಣ್ಣ ಕಥೆಗಳ ಜನಕ, ಸಹೃದಯಿ - ಹೀಗೆಲ್ಲಾ ಹೆಸರನ್ನು ಗಳಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಕಡು ಬಡತನದಲ್ಲಿ ಹುಟ್ಟಿದರೂ ಸ್ವಾಭಿಮಾನವನ್ನು ಬಿಡದ ಇವರು ಚಿಕ್ಕಂದಿನಿಂದ ಕಡೆಯವರೆಗೆ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡಲಿಲ್ಲ. ಭೌತಶಾಸ್ತ್ರದ ಜೊತೆಗೆ ಕನ್ನಡ ಸಾಹಿತ್ಯವನ್ನೂ ಅಧ್ಯಯನ ಮಾಡಿ ಎಂ.ಎ. ಅನ್ನು ಅರ್ಧಕ್ಕೆ ನಿಲ್ಲಿಸಿ, ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದಿ ಮೊದಲ ಸ್ಥಾನ ಗಳಿಸಿದರು. ನಂತರ ಸಬ್ ಡಿವಿಜನ್ ಅಧಿಕಾರಿಗಳಾಗಿ ಸೇವೆಗೆ ಸೇರಿ ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಒಂದೊಂದೇ ಮೆಟ್ಟಿಲನ್ನು ಏರಿ ಕೊನೆಗೆ ಸ್ವಯಂ ನಿವೃತ್ತಿ ಪಡೆದರು. ಒಮ್ಮೆ ಕೋಲಾರದ ಮಲ್ಲಸಂದ್ರದಲ್ಲಿ ಜಮಾಬಂದಿಗೆ ಆಗಮಿಸಿದ್ದ ಮಾಸ್ತಿಯವರು ಅಲ್ಲಿಯೇ ಇದ್ದ ರೈತನೊಬ್ಬನನ್ನು ಕರೆದು, ಆಂಗ್ಲ ಭಾಷೆಯಲ್ಲಿ ಕಂದಾಯ ಕೊಟ್ಟಿದ್ದೀಯಾ ರಸೀತಿ ಎಲ್ಲಿ ರೂಲ್ಸ್ ಗೊತ್ತಿದೆಯಾ ಎಂದೆಲ್ಲ ದಬಾಯಿಸಿದರು. ಭಾಷೆ ಗೊತ್ತಿಲ್ಲದ ರೈತ ಕಂಗಾಲಾದ. ಮಾಸ್ತಿಯವರಿಗೂ ಪಶ್ಚಾತ್ತಾಪವಾಗಿ, ಅನ್ನಿಸಿತು, ಇನ್ನು ಮುಂದೆ ಕನ್ನಡ ತಮ್ಮ ಉಸಿರಾಗಬೇಕೆಂದು. ಅದುವರೆಗೆ ಇಂಗ್ಲಿಷಿನಲ್ಲಿ ಬರೆಯುತ್ತಿದ್ದ ಮಾಸ್ತಿಯವರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಅವರ ತಾತ ಹಾಸಿಗೆ ಹಿಡಿದಾಗ ಅವರ ಶುಶ್ರೂಷೆಯಲ್ಲಿ ತೊಡಗಿದ್ದ ಮಾಸ್ತಿಯವರು ಬೇಸರ ಕಳೆಯಲು ಬರೆದ ಮೊದಲ ಕಥೆ 'ರಂಗನ ಮದುವೆ'  ಮಧುರವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಸ್ಟ್ರಾಂಡ್ ಎಂಬ ಆಂಗ್ಲ ಪತ್ರಿಕೆಯುಲ್ಲಿ ಪ್ರಕಟವಾಗುತ್ತಿದ್ದ ಸಣ್ಣ ಕಥೆಗಳು ಇವರಿಗೆ ಕನ್ನಡದಲ್ಲಿಯೂ ಸಣ್ಣ ಕಥೆಗಳನ್ನು ಬರೆಯಲು ಪ್ರೇರೇಪಣೆ ನೀಡಿದವು. ನಂತರ 'ರಂಗಣ್ಣನ ಕೋಟು' ಪ್ರಕಟವಾಯಿತು. ಆಗಿನ್ನೂ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳು ಅಷ್ಟಾಗಿ ಬರುತ್ತಿರಲಿಲ್ಲ. ಹೀಗಾಗಿ ಇವರ ಕಥೆಗಳನ್ನು ಕೆಲವರು ಸಣ್ಣಕತ್ತೆ ಎಂದು ಟೀಕಿಸಿದ್ದೂ ಇದೆ. ಆದರೆ ಯಾವ ಟೀಕೆಗೂ ಸೊಪ್ಪುಹಾಕದ ಮಾಸ್ತಿ ಸಣ್ಣ ಕಥೆಗಳಿಗೆ ಜೀವ ತುಂಬಿದರು ಮತ್ತು ಸಣ್ಣ ಕಥೆಗಳು ಹೆಚ್ಚು ಹೆಚ್ಚು ಜನಪ್ರಿಯವಾಗಲು ನೆರವಾದರು. ಹೀಗಾಗಿ ಅವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತಾರೆ. ಜೀವನ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದ ಮಾಸ್ತಿಯವರು ಸಣ್ಣ ಕಥೆಗಳಿಗೆ ಒಂದು ಹೊಸ ಆಯಾಮ ನೀಡಿದರು. 125 ಕೃತಿಗಳನ್ನು ರಚಿಸಿ, ತಮ್ಮ ಚಿಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿಯನ್ನೂ ತಂದು ಕೊಟ್ಟರು. ಸಣ್ಣ ಕಥೆಗಳೇ ಅಲ್ಲದೆ ಕವಿತೆ, ನಾಟಕ, ಕಾದಂಬರಿ, ಅನುವಾದ, ಪ್ರಬಂಧ, ವಿಮರ್ಶೆ, ಜೀವನ ಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿಯೂ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಅವರು ಒಳ್ಳೆಯ ಬರಹಗಾರರಾಗಿದ್ದಂತೆ ಉತ್ತಮ ವಾಗ್ಮಿಗಳೂ ಆಗಿದ್ದರು.



 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.