ರಾಣಿ ಪಾತ್ರದ ರಂಗಪ್ಪ ಅರಮನೆಯ ಹೊಕ್ಕಾಗ!
ಅಭಿನಯದಲ್ಲಿ ಪರಿಣತಿಯಿಲ್ಲದ, ಕಲಾ ಕುಟುಂಬದ ಹಿನ್ನಲೆಯಿಲ್ಲದೇ ರಂಗಭೂಮಿಯಲ್ಲಿ ಪ್ರಸಿದ್ಧರಾದ ಕೆಲವು ವ್ಯಕ್ತಿಗಳಲ್ಲಿ ಎದ್ದು ಕಾಣುವ ಪ್ರತಿಭೆಯೆಂದರೆ ರಂಗಪ್ಪನವರದ್ದು. ನಲವತ್ತರ ದಶಕದಲ್ಲಿ ನಾಟಕದಲ್ಲಿ ಪುರುಷರೇ ಸ್ತ್ರೀ ಪಾತ್ರ ಮಾಡುತ್ತಿದ್ದ ಸಮಯದಲ್ಲಿ ತಮ್ಮ ಅಮೋಘ ಅಭಿನಯ, ಹಾವಭಾವಗಳಿಂದ ರಸಿಕರನ್ನು ಚುಂಬಕದಂತೆ ಆಕರ್ಷಿಸುತ್ತಿದ್ದರು ರಂಗಪ್ಪನವರು. ತಮ್ಮ ಊರು ಚಿಕ್ಕನಾಯಕನಹಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದ ಸಿ.ಬಿ.ಮಲ್ಲಪ್ಪನವರ "ಶ್ರೀ ಚಂದ್ರಮೌಳೇಶ್ವರ ಕೃಪಾ ಪೋಷಿತ ನಾಟಕ ಸಂಸ್ಥೆ"ಯ ನಾಟಕಗಳನ್ನು ಬಹು ಆಸ್ಥೆಯಿಂದ ನೋಡುತ್ತಿದ್ದ ಬಾಲಕ ರಂಗಪ್ಪನಿಗೆ ತನಗೂ ನಾಟಕಗಳಲ್ಲಿ ಅಭಿನಯಿಸಬೇಕೆಂಬ ಗೀಳು ಬೆಳೆಯಿತು. ಒಂದು ದಿನ ಮಲ್ಲಪ್ಪನವರನ್ನು ಭೇಟಿಯಾಗಿ ತನ್ನ ಮನದಾಳದ ಹಂಬಲವನ್ನು ತೋಡಿಕೊಂಡಾಗ ಮಲ್ಲಪ್ಪನವರು ಆ ಹುಡುಗನನ್ನು ತಮ್ಮ ಕಂಪನಿಗೆ ಸೇರಿಸಿಕೊಂಡರು. ಸಂಗೀತದಲ್ಲಿ ತರಬೇತಿ ಕೊಡಿಸಿದರು. ಆಕರ್ಷಕ ಮೈಕಟ್ಟು ಮತ್ತು ಅಭಿನಯ ಕೌಶಲ್ಯ ಹೊಂದಿದ್ದ ರಂಗಪ್ಪ ಮುಂದೆ ಕಂಪನಿಯ ನಾಟಕಗಳಲ್ಲಿ ಮಹಿಳಾ ಪಾತ್ರ ಮಾಡಲು ಉಪಕ್ರಮಿಸಿದರು. ಹೆಚ್ಚಾಗಿ ರಾಣಿ ಪಾತ್ರಗಳು ಸಿಗುತ್ತಿದ್ದರಿಂದ ಜನ ಅವರನ್ನು ರಾಣಿಪಾತ್ರದ ರಂಗಪ್ಪ ಎಂದೇ ಕರೆಯುತ್ತಿದ್ದರು. ಒಮ್ಮೆ ದಸರಾ ಸಮಯದಲ್ಲಿ ಮೈಸೂರಿನಲ್ಲಿ ಮೊಕ್ಕಾಂ ಹೂಡಿದ್ದ ನಾಟಕ ಕಂಪನಿಯ ನಾಟಕ ನೋಡಲು ಆಗಮಿಸಿದ್ದ ಒಬ್ಬ ಪ್ರೇಕ್ಷಕ ರಂಗಪ್ಪನವರ ಅಭಿನಯಕ್ಕೆ ಮನಸೋತು, ಮಲ್ಲಪ್ಪನವರಿಗೆ ಸವಾಲೊಂದನ್ನೆಸೆದ. ಅದೆಂದರೆ, ರಂಗಪ್ಪನವರು ಅರಮನೆಗೆ ಸ್ತ್ರೀ ವೇಷ ಧರಿಸಿ ಹೋಗಿ, ಗೌರಿ ಪೂಜೆಯಲ್ಲಿ ಭಾಗವಹಿಸಿ, ಮಹಿಳೆಯರಿಗೆ ಮಾತ್ರ ನೀಡುತ್ತಿದ್ದ ತಾಂಬೂಲವನ್ನು ಪಡೆದು ಬರಬೇಕೆಂಬುದು! ಸವಾಲು ಸ್ವೀಕರಿಸಿದ ರಂಗಪ್ಪನವರು ಸಾಮಾನ್ಯ ಮಹಿಳೆಯಂತೆ ವೇಷಧರಿಸಿ, ಅರಮನೆಗೆ ಹೋಗಿ, ಗೌರಿಪೂಜೆಯಲ್ಲಿ ಪಾಲ್ಗೊಂಡರು. ಇವರ ಗುಂಡು ಮುಖ, ಬಳಕು ನಡೆ, ಒನಪು ವೈಯಾರ ಇವುಗಳನ್ನು ನೋಡಿದ ಅರಮನೆಯ ಸಿಬ್ಬಂದಿಗೆ ಯಾವ ಅನುಮಾನವೂ ಬರಲಿಲ್ಲ. ಅರಸರ ದರ್ಬಾರಿನಲ್ಲಿ ಸ್ತ್ರೀಯರೊಡಗೂಡಿ ಕುಳಿತು, ತಾಂಬೂಲ ಪಡೆದು, ಮಲ್ಲಿಗೆ ಹೂದಂಡೆಯನ್ನು ಸ್ವೀಕರಿಸಿ ಮುಡಿದುಕೊಂಡು, ಮಹಾರಾಜರಿಗೆ ನಮಿಸಿ ದರ್ಬಾರಿನಿಂದ ಹೊರ ಬಂದರು. ಇವೆಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ ಸವಾಲೆಸೆದ ವ್ಯಕ್ತಿ, ಅತ್ಯಂತ ಸಂತೋಷದಿಂದ ತಾನು ಮೊದಲೇ ತಿಳಿಸಿದಂತೆ ನಗದು ಬಹುಮಾನ ನೀಡಿ ಅಭಿನಂದಿಸಿದ. ಇದು ರಂಗಪ್ಪನವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ನಂತರ ಗುಬ್ಬಿ ಕಂಪನಿ, ಶ್ರೀ ಚಾಮುಂಡೇಶ್ವರಿ ನಾಟಕ ಕಂಪನಿ, ಎಂ.ವಿ.ಸುಬ್ಬಯ್ಯನಾಯ್ಡು ನಾಟಕ ಕಂಪನಿ, ಎಂ.ಎನ್.ಗಂಗಾಧರ ರಾಯರ ನಾಟಕ ಕಂಪನಿಗಳಲ್ಲೂ ಸೇವೆ ಸಲ್ಲಿಸಿ, ಮೂರು ದಶಕಗಳ ಕಾಲ ನಾಡಿನ ನಾಟಕ ಪ್ರಿಯರಿಗೆ ಮನರಂಜನೆಯನ್ನೊದಗಿಸಿಕೊಟ್ಟರು. ಈ ಅವಧಿಯಲ್ಲಿ ಸ್ತ್ರೀ ಪಾತ್ರವಲ್ಲದೇ, ಪುರುಷ ಪಾತ್ರದಲ್ಲಿ ಅಭಿನಯಿಸಿದರೂ ಕೂಡ ಅವರಿಗಿದ್ದ 'ರಾಣಿ ಪಾತ್ರದ ರಂಗಪ್ಪ' ಎಂಬ ಹೆಸರು ಮಾತ್ರ ಹಾಗೆಯೇ ಉಳಿಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

