ನನಗೆ ಬೇಕಿರುವುದು ಅರ್ಹತಾ ಪತ್ರ, ಶಿಫಾರಸಲ್ಲ
1977 ರಿಂದ 1979ರವರೆಗೆ ಭಾರತದ ಪ್ರಧಾನಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರು ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದ ಹಿರಿಮೆಗೆ ಪಾತ್ರರಾದವರು. ಅಪ್ಪಟ ಗಾಂಧೀವಾದಿಗಳಾಗಿದ್ದ ದೇಸಾಯಿಯವರು ಮೊದಲ ಬಾರಿಗೆ ಜನತಾ ಪಕ್ಷದ ಸರ್ಕಾರ ಬಂದಾಗ ಪ್ರಧಾನಮಂತ್ರಿಗಳಾದರು. ಅದಕ್ಕೂ ಮುನ್ನ ಕೇಂದ್ರ ಸರ್ಕಾರದಲ್ಲಿ ವಿತ್ತಸಚಿವರಾಗಿ, ಗೃಹ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಕೆಲಕಾಲ ಮುಂಬೈನ ಮುಖ್ಯಮಂತ್ರಿಯಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. ಶಿಸ್ತು, ದಕ್ಷತೆ, ಧೈರ್ಯ, ಸ್ವಾಭಿಮಾನ ಮತ್ತು ಸರಳತೆಗೆ ಹೆಸರಾಗಿದ್ದರು ಮೋರಾರ್ಜಿ. ಅವರು ತಮ್ಮ 22ನೆಯ ವಯಸ್ಸಿಗೇ ಕೈರ ಜಿಲ್ಲೆಯ ಕಲೆಕ್ಟರ್ ಆಗಿ ದಕ್ಷ ಆಡಳಿತ ನೀಡುತ್ತಿರುವಾಗಲೇ ಗಾಂಧೀಜಿಯವರ ಕರೆಗೆ ಓಗೊಟ್ಟು, ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.
ಅದಕ್ಕಾಗಿ ಅನೇಕ ಬಾರಿ ಜೈಲು ಶಿಕ್ಷೆಯನ್ನು ಸಹ ಅನುಭವಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾಭಿಮಾನ ಬೆಳೆಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಒಮ್ಮೆ ಅವರು ಬೊಂಬಾಯಿಯ ವಿಲ್ಸನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಬೈಬಲ್ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿತ್ತು. ಆದರೆ ಮೊರಾರ್ಜಿ ಮಾತ್ರ ಬೈಬಲ್ ಕ್ಲಾಸನ್ನು ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಪ್ರಾಚಾರ್ಯ ಡಾ.ಸ್ಕಾಟ್, ಮೋರಾರ್ಜಿಯವರ ಮೇಲೆ ಅಸಮಾಧಾನಗೊಂಡರು. ಮುಂದೆ ಪದವಿ ಪರೀಕ್ಷೆ ಮುಗಿದು, ಸರ್ಕಾರಿ ನೌಕರಿಗೆ ಸೇರಲು ಬಯಸಿದ ಮೊರಾರ್ಜಿ ಕಾಲೇಜಿನಿಂದ ಅರ್ಹತಾ ಪ್ರಮಾಣಪತ್ರ ಪಡೆಯಲು ಪ್ರಿನ್ಸಿಪಾಲರ ಬಳಿ ಹೋದರು. ಆದರೆ ಪ್ರಿನ್ಸಿಪಾಲರು ಅರ್ಹತಾ ಪತ್ರ ನೀಡಲು ನಿರಾಕರಿಸಿದ್ದೇ ಅಲ್ಲದೆ, ಅವರನ್ನು ಹೀಯಾಳಿಸಿದರು. ಮೊದಲೇ ಸ್ವಾಭಿಮಾನದ ಖನಿಯಾಗಿದ್ದ ಮೊರಾರ್ಜಿಯವರು ಪ್ರಿನ್ಸಿಪಾಲರ ಕಣ್ಣುತಪ್ಪಿಸಿ ತಿರುಗಾಡಲು ಪ್ರಾರಂಭಿಸಿದರು. ಒಂದು ಸಾರಿ ಸ್ಕಾಟ್‌ರು ಎದುರಿಗೇ ಸಿಕ್ಕು, ಮೊರಾರ್ಜಿಯವರ ವಿಚಿತ್ರ ವರ್ತನೆಗೆ ಕಾರಣ ಕೇಳಿದರು. ತಮ್ಮನ್ನು ಒಳ್ಳೆಯ ವ್ಯಕ್ತಿಯಲ್ಲವೆಂದು ಪ್ರಿನ್ಸಿಪಾಲರು ಭಾವಿಸಿದಾಗ ತಾನೇಕೆ ಅವರ ಮೇಲೆ ತನ್ನ ನೆರಳು ಬೀಳಿಸಬೇಕು ಎಂದು ಪ್ರಶ್ನಿಸಿದರು ಮೊರಾರ್ಜಿ. ಅಷ್ಟರಲ್ಲಿ ಪ್ರಿನ್ಸಿಪಾಲರ ಸಿಟ್ಟು ಕರಗಿತ್ತು. ಮೊರಾರ್ಜಿಯವರ ಸ್ವಾಭಿಮಾನದ ಮಾತುಗಳನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದೇ ಅಲ್ಲದೆ, ಒಂದು ಶಿಫಾರಸು ಪತ್ರವನ್ನು ವೈಸ್‌ರಾಯ್ ಕೌನ್ಸಿಲ್ಲಿನ ಒಬ್ಬ ಸದಸ್ಯರಿಗೆ ಬರೆದು ಕೊಡುವುದಾಗಿಯೂ, ಅದರಿಂದ ಒಳ್ಳೆಯದಾಗುವುದಾಗಿಯೂ ತಿಳಿಸಿದರು. ಆದರೆ ಮೊರಾರ್ಜಿಯವರು ತಮಗೆ ಶಿಫಾರಸು ಪತ್ರದ ಅವಶ್ಯಕತೆಯಿಲ್ಲವೆಂದೂ, ಅರ್ಹತಾ ಪತ್ರ ಕೊಟ್ಟರೆ ಸಾಕೆಂದು ವಿನಯದಿಂದಲೇ ಕೇಳಿಕೊಂಡರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

