ಸಂಪಾದಕೀಯ

ಆ ಹಣವನ್ನೂ ಪುಸ್ತಕ ಪ್ರಕಟಣೆಗೆ ನೀಡು

Published On :

ಬಂಗಾಳದ ಬಾಬು ಪ್ರತಾಪಚಂದ್ರ ರಾಯ್ ಒಬ್ಬ ಪುಸ್ತಕ ವ್ಯಾಪಾರಿ. ಅವರಿಗೆ ವ್ಯಾಸ ಮಹಾಭಾರತವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಅವರ ಉದ್ದೇಶ ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಪಾಶ್ಚಾತ್ಯರಿಗೆ ಪರಿಚಯಿಸುವುದೇ ಆಗಿತ್ತು. ಅದಕ್ಕಾಗಿ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಪಾಂಡಿತ್ಯ ಹೊಂದಿದ ಕಿಶೋರಿ ಮೋಹನ್ ಗಂಗೂಲಿ ಎಂಬ ವಿದ್ವಾಂಸನನ್ನು ಹುಡುಕಿ ಅವರಿಗೆ ಈ ಕೆಲಸವನ್ನು ಒಪ್ಪಿಸಿದರು.
ಒಟ್ಟು ಹನ್ನೊಂದು ಸಂಪುಟದಲ್ಲಿ ಪ್ರಕಟವಾಗಬೇಕಿದ್ದ ಕೃತಿಯೊಂದಕ್ಕೆ ಹಣದ ಅವಶ್ಯಕತೆ ತುಂಬಾ ಇತ್ತು.  17 ವರ್ಷಗಳು ಈ ಕೃತಿಯ ಪ್ರಕಟಣೆಗೆ ತುಂಬಾ ಪರಿಶ್ರಮವಹಿಸಿದರು. ಪಂಡಿತರಿಂದ ಪಾಮರರವರೆಗೆ, ರಾಜನಿಂದ ಹಿಡಿದು ರೈತನವರೆಗೆ ಈ ಕಾರ್ಯಕ್ಕಾಗಿ ಹಣ ಸಂಗ್ರಹಿಸಿದರು. ಕೆಲ ಇಂಗ್ಲಿಷ್ ಅಧಿಕಾರಿಗಳು ಸಹ ಇವರ ಕಾರ್ಯಕ್ಕೆ ಕೈ ಜೋಡಿಸಿದರು. ಬ್ರಿಟಿಷ್ ಸರ್ಕಾರ ಕೂಡ ಸಹಕಾರ ನೀಡಿತು. ಇಷ್ಟಾದರೂ ಪ್ರಕಟಣೆಗೆ ಬೇಕಾದಷ್ಟು ಹಣ ಸಂಗ್ರಹವಾಗಲಿಲ್ಲ. ಆಗ ಪ್ರತಾಪ ಚಂದ್ರ ತಮ್ಮೆಲ್ಲ ಸಂಪತ್ತನ್ನೂ ವಿನಿಯೋಗಿಸಿದರು. ಈ ಅನುವಾದ ಕಾರ್ಯ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಅಂದರೆ ಹನ್ನೊಂದನೇ ಸಂಪುಟ ಪ್ರಕಟಣೆಗೆ ಮೊದಲೇ ಖಾಯಿಲೆ ಬಿದ್ದು 1895 ರಲ್ಲಿ ಮರಣಿಸಿದರು. ಸಾಯುವ ಮುನ್ನವೂ ಅವರಿಗೆ ಮಹಾಭಾರತದ ಬಗ್ಗೆಯೇ ಚಿಂತೆ. ತಮ್ಮ ಪತ್ನಿಯನ್ನು ಕರೆದು "ಮಹಾಭಾರತ ಪ್ರಕಟಣೆ ಮುಕ್ತಾಯವಾಗಲೇಬೇಕು, ನನ್ನ ಅಪರ ಕರ್ಮಕ್ಕೆ ಉಪಯೋಗಿಸಬೇಕಾದ ಹಣವನ್ನೂ ಸಹ ಪ್ರಕಟಣಾ ಕಾರ್ಯಕ್ಕೆ ವಿನಿಯೋಗಿಸಿ" ಎಂದು ತಿಳಿಸಿ ಕಣ್ಣುಮುಚ್ಚಿದರು. ಅವರು ಬರೆದ ಉಯಿಲಲ್ಲಿ, ತಮ್ಮ ಆಸ್ತಿಯನ್ನು ಮಾರಿ ಬಂದ ಹಣದ ಮೂರನೆಯ ಒಂದು ಪಾಲಿನಷ್ಟು ಹಣವನ್ನು ಮಹಾಭಾರತದ ಪ್ರಕಟಣೆಗಾಗಿ, ಇನ್ನೊಂದು ಪಾಲನ್ನು ತಮ್ಮ ಗ್ರಾಮದಲ್ಲಿ ಶಿವನ ದೇವಾಲಯ ನಿರ್ಮಿಸಲು ಮತ್ತು ಮತ್ತೊಂದು ಪಾಲನ್ನು ಗ್ರಾಮದವರ ಅಭ್ಯುದಯಕ್ಕೆ ವಿನಿಯೋಗಿಸಬೇಕೆಂದು ಇಚ್ಛಿಸಿದ್ದರು. ಅವರ ಅಶಯದಂತೆ 1896ರಲ್ಲಿ ಕೊನೆಯ ಸಂಪುಟ ಪ್ರಕಟವಾದಾಗ ಅದಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ದೊರೆಯಿತು.

ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.