ಸಂಪಾದಕೀಯ

ಇಂತಹ ಸಚಿವರೂ ಇದ್ದರು

Published On :

ಉತ್ತರ ಭಾರತದ ಒಂದು ದೊಡ್ಡ ಪ್ರಾಂತ್ಯದ ಸಚಿವರಾಗಿ, ಕೇಂದ್ರ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ, ಸೇವೆ ಸಲ್ಲಿಸಿ ತಮ್ಮ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅಪಾರ ಹೆಸರು ಗಳಿಸಿದವರೆಂದರೆ ರಫಿ ಅಹಮದ್ ಕಿದ್ವಾಯಿಯವರು. ತಮ್ಮ ಕಾರ್ಯ ವೈಖರಿ ಮತ್ತು ನಿಸ್ವಾರ್ಥಗುಣದಿಂದ ಲಾಲ್‌ಬಹಾದ್ದೂರ್ ಅವರ ಸಾಲಿಗೆ ಸೇರುವ ಕಿದ್ವಾಯಿಯವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಅನುಯಾಯಿ ಮತ್ತು ಪ್ರಬಲ ದೇಶಭಕ್ತರಾಗಿದ್ದರು. ಮೊದಲಬಾರಿಗೆ ರಾತ್ರಿ ವಿಮಾನ ಅಂಚೆ ಸೇವೆ, ಸ್ವಂತ ದೂರವಾಣಿಯ ಯೋಜನೆ, ಮೊಬೈಲ್ ಅಂಚೆ ಕಚೇರಿ ಮತ್ತು ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿದ್ದೆಲ್ಲ ಕಿದ್ವಾಯಿಯವರ ಸಾರ್ಥಕ ಕಾರ್ಯಗಳಾಗಿವೆ. ನೆಹರೂ ಸಂಪುಟದಲ್ಲಿ ಸಂಪರ್ಕ ಖಾತೆಯ ಸಚಿವರಾಗಿ, ಆಹಾರ ಮತ್ತು ಕೃಷಿ ಸಚಿವರಾಗಿ ಅಪಾರ ಹೆಸರು ಗಳಿಸಿದ್ದರು. ವಿನಯಶಾಲಿಗಳಾಗಿದ್ದ ಕಿದ್ವಾಯಿಯವರು ತಮ್ಮನ್ನು ಭೇಟಿ ಮಾಡಲು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅವರಿಗೆ ಹಣದ ಮೇಲೆ ವ್ಯಾಮೋಹವಿರಲಿಲ್ಲ. ಹೀಗಾಗಿ ತಾವು ಗಳಿಸಿದ ಹಣವನ್ನು ಜನಸಾಮಾನ್ಯರ ಕಷ್ಟಗಳಿಗಾಗಿ ವಿನಿಯೋಗಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರವೂ ಸಹ ಅನೇಕ ಹುದ್ದೆಗಳನ್ನುನಿರ್ವಹಿಸಿದ್ದರೂ ಅವರು ಗತಿಸಿದಾಗ ಒಂದು ಲಕ್ಷ ರುಪಾಯಿ ಸಾಲ ಮತ್ತು ಪಿತ್ರಾರ್ಜಿತವಾಗಿ ಬಂದ ಒಂದು ಹಳೇ ಮನೆಯನ್ನು ಬಿಟ್ಟುಹೋಗಿದ್ದರು. ಸಂಪರ್ಕ ಖಾತೆ ಸಚಿವರಾಗಿದ್ದ ಒಮ್ಮೆ ಅವರು ವೇಷಮರೆಸಿಕೊಂಡು ಹೋಗಿ ಮುಂಬೈನ ಅಂಚೆ ಕಚೇರಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಅಲ್ಲಿ ನಡೆಯುತ್ತಿದ್ದ ಚಟುವಟಿಕೆಯನ್ನು ಅವಲೋಕಿಸಿದರು. ಅಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಕೆಲವರನ್ನು ಅಮಾನತ್ತಿನಲ್ಲಿರಿಸಿ, ಇತರರು ಭಯ-ಭಕ್ತಿಯಿಂದ ಸೇವೆ ಸಲ್ಲಿಸಲು ಕಾರಣರಾದರು. ತಮ್ಮ 34 ವರ್ಷದ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಕಪ್ಪು ಚುಕ್ಕೆ ಗಳಿಸದೆ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದರು. ಅವರಿಗಿದ್ದ ಒಂದೇ ಒಂದು ಕೆಟ್ಟ ಹವ್ಯಾಸವೆಂದರೆ ಸಿಗರೇಟು ಸೇವನೆ. ಅದನ್ನೂ ಸಹ ಅವರು ಏಕಾಂತದಲ್ಲಿ ಯಾರಿಗೂ ತಿಳಿಯದಂತೆ ಮಾಡಿ ಬರುತ್ತಿದ್ದರು. 1956ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕಿದ್ವಾಯಿ ಅವರ ಹೆಸರಿನಲ್ಲಿ ಕೃಷಿಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ಮತ್ತು ಮೂರು ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ. 2011ರಲ್ಲಿ ಅಂಚೆ ಸಿಬ್ಬಂದಿ ಕಾಲೇಜನ್ನು ಕಿದ್ವಾಯಿ ಪೋಸ್ಟಲ್ ಅಕಾಡೆಮಿ ಎಂದು ನಾಮಕರಣ ಮಾಡಿ ಕಿದ್ವಾಯಿ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಲಾಗಿದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.