ಸ್ವಾತಂತ್ರ್ಯ ಜ್ಯೋತಿ ರಾಸ್ ಬಿಹಾರಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು, ಹಲವಾರು ರೀತಿಯಲ್ಲಿ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನೆರವಾಗಿದ್ದಾರೆ. ಅಂತಹ ಪ್ರಮುಖರಲ್ಲಿ ಒಬ್ಬರು ರಾಸ್ ಬಿಹಾರಿ ಬೋಸ್. ಅವರ ಹೆಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು. ವಿದೇಶಿ ನೆಲದಲ್ಲಿ ನೆಲಸಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಾಗಿದ್ದರು. ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜ್‌ನನ್ನು ಕೊಲೆ ಸಂಚಿನಲ್ಲಿ ಬೋಸ್ ಪಾತ್ರ ಹಿರಿದಾಗಿತ್ತು. ಹೀಗಾಗಿ ಅವರನ್ನು ಬಂಧಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಾಗ ಭಾರತದಿಂದ ತಪ್ಪಿಸಿಕೊಂಡು 1915ರಲ್ಲಿ ಜಪಾನಿಗೆ ಬಂದರು. ಅಲ್ಲಿ ಅವರಿಗೆ ಲಾಲಾ ಲಜಪತರಾಯ್ ಮತ್ತು ಸನ್ಯೆತ್ ಸೇನರ ಪರಿಚಯವಾಯಿತು. ಜಪಾನಿ ಭಾಷೆಯನ್ನು ಕಲಿತು ಆ ಭಾಷೆಯಲ್ಲಿ ಅತ್ಯುತ್ತಮವಾಗಿ ಭಾಷಣ ಮಾಡತೊಡಗಿದರು. ಅಲ್ಲಿಯ ತರುಣಿಯನ್ನೂ ವಿವಾಹವಾಗಿ, ಜಪಾನಿನ ಪೌರತ್ವನ್ನು ಪಡೆದರು. ಥಾಯ್‌ಲ್ಯಾಂಡ್, ಬರ್ಮಾ, ಮಲಯ, ಹಾಂಗ್‌ಕಾಂಗ್, ಷಾಂಗಾಯ್ ಮತ್ತಿತರ ಕಡೆಗಳಲ್ಲಿ ಸುತ್ತಿ, ಭಾರತದ ಸ್ವಾತಂತ್ರ್ಯಕ್ಕಾಗಿ ಜನ ಸಂಘಟನೆಯನ್ನು ಮಾಡಿದರು. ಅದಕ್ಕಾಗಿ ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಸ್ಥಾಪಿಸಿದರು. ಟೋಕಿಯೋದಲ್ಲಿ ಭಾರತ ಸ್ವಾತಂತ್ರ್ಯ ಒಕ್ಕೂಟವೊಂದನ್ನು ಸ್ಥಾಪಿಸಿದರು. ಇದರ ಮೂಲಕ ಭಾರತೀಯರಿಗೆ ಸ್ವಾತಂತ್ರ್ಯ ಗಳಿಸಲು ನೆರವು ನೀಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲರೂ ಭಾಗವಹಿಸಲು ಉತ್ತೇಜನ ನೀಡಿದರು. ನಂತರ ಇಂಡಿಯನ್ ನ್ಯಾಷನಲ್ ಆರ್ಮಿ ಐ.ಎನ್.ಎ.ಯನ್ನು ಸ್ಥಾಪಿಸಿದರು. ಜರ್ಮನಿಯಲ್ಲಿದ್ದ ಸುಭಾಷ್‌ಚಂದ್ರ ಬೋಸರನ್ನು ಸಂಪರ್ಕಿಸಿ, ಅವರನ್ನು ಸಿಂಗಪುರಕ್ಕೆ ಬರಲು ಆಹ್ವಾನಿಸಿದರು. ಸಿಂಗಪುರದಲ್ಲಿ ಸಭೆಯೊಂದನ್ನು ಏರ್ಪಡಿಸಿ, ಅಲ್ಲಿನ ಎಲ್ಲ ಭಾರತೀಯರನ್ನೂ ಆಹ್ವಾನಿಸಿದರು. ಅಲ್ಲದೆ ಹೊರ ದೇಶಗಳ 120 ಭಾರತೀಯ ಪ್ರತಿನಿಧಿಗಳೂ ಭಾಗವಹಿಸಿದ್ದರು. ಈ ಬೃಹತ್ ಸಭೆಯಲ್ಲಿ ಮಾತನಾಡುತ್ತಾ "ಸುಭಾಷ್ ನಿಮಗೆ ನಾನೊಂದು ಮುಖ್ಯವಾದ ಮತ್ತು ಅಮೂಲ್ಯವಾದ ಉಡುಗೊರೆಯೊಂದನ್ನು ತಂದಿದ್ದೇನೆ" ಎಂದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಸುಭಾಷ್ ಚಂದ್ರಬೋಸರ ಕಡೆ ಬೆರಳು ತೋರಿಸುತ್ತಾ ಹೇಳಿದಾಗ ಸಭೆಯಲ್ಲಿ ರೋಮಾಂಚನ ಉಂಟಾಯಿತು. ಎಲ್ಲರೂ ಚಪ್ಪಾಳೆ ತಟ್ಟಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಅನಂತರ ತಾವು ಕಟ್ಟಿ ಬೆಳೆಸಿದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮತ್ತು ಐ.ಎನ್.ಎ.ದ ಜವಾಬ್ದಾರಿಯನ್ನು ಸುಭಾಷರಿಗೆ ಸಂತೋಷದಿಂದ ವಹಿಸಿ, ಟೋಕಿಯೋಗೆ ಹಿಂತಿರುಗಿದರು. ನಂತರ ಕೆಲ ಸಮಯದ ನಂತರ ರಾಸ್‌ಬಿಹಾರಿಯವರಿಗೆ, ಜಪಾನಿನ ಚಕ್ರವರ್ತಿಯು "ದಿ ಸೆಕೆಂಡ್ ಆರ್ಡರ್ ಆಫ್ ಮೆರಿಟ್ ಆಫ್ ದಿ ರೈಸಿಂಗ್ ಸನ್" ಪ್ರಶಸ್ತಿ ನೀಡಿ ಗೌರವಿಸಿದರು. ಹೀಗೆ ವಿದೇಶದಲ್ಲಿದ್ದರೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಾಸ್ ಬಿಹಾರಿ ಬೋಸ್ ಪ್ರಾತಃಸ್ಮರಣೀಯರಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

