ಸಂಪಾದಕೀಯ

ಎಡ್ಮಂಡ್ ಹಿಲರಿ ಮತ್ತು ಶೆರ್ಪಾಗಳು

Published On :

ಎಡ್ಮಂಡ್ ಹಿಲರಿ ನಮ್ಮ ಗೌರಿಶಂಕರ ಶಿಖರವನ್ನು ಮೊದಲ ಬಾರಿಗೆ ತೇನ್ ಸಿಂಗ್‌ನ ಜೊತೆ ಏರಿದ ಮಹಾ ಸಾಹಸವಂತ. ನಂತರದ ದಿನಗಳಲ್ಲಿ ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವಪ್ರದೇಶಗಳ ಮೇಲೂ ಕಾಲಿರಿಸಿ ದಾಖಲೆ ಸ್ಥಾಪಿಸಿದ ಸಾಹಸಿ. ಹಿಮಾಲಯ ಚಾರಣಕ್ಕೂ ಮುನ್ನ ನ್ಯೂಜಿಲೆಂಡ್‌ನ ಅತ್ಯಂತ ಎತ್ತರದ ಶಿಖರ ಮೌಂಟ್ ಕುಕ್ ಅನ್ನು, ಆಲ್ಪ್ಸ್ ಪರ್ವತವನ್ನೂ ಆರೋಹಣ ಮಾಡಿ ಅನುಭವ ಗಳಿಸಿದ್ದ. 1953ರಲ್ಲಿ ಮೌಂಟ್ ಎವರೆಸ್ಟ್ ಶಿಖರಾರೋಹಣ ಮಾಡಿ ದಾಖಲೆ ಬರೆದದ್ದು ಅವನ ಜೀವನದ ಒಂದು ಮಹತ್ಸಾಧನೆಯಾಗಿದೆ. ಹಿಲರಿಯ ಪತ್ನಿ ಮತ್ತು ಮಗಳು ವಿಮಾನ ಅಪಘಾತಮೊಂದರಲ್ಲಿ ಮರಣಿಸಿದ್ದರು. ಇನ್ನು ಈ ವೇಳೆಯಲ್ಲೇ ಆತನ ಆತ್ಮೀಯ ಮಿತ್ರ ಪೀಟರ್ ಮಲ್ರ್ಯ್ಗೂ ಸಹ ಸಾವನ್ನಪ್ಪಿದ್ದ. 70 ವರ್ಷದ ಎಡ್ಮಂಡ್ ಹಿಲರಿ ಪೀಟರ್‌ನ ಪತ್ನಿ ಜೂನ್‌ಳನ್ನು ವಿವಾಹವಾದ. ಆತನ ಉದ್ದೇಶ ಆಕೆಯ ಏಕಾಂಗಿತನವನ್ನು ನಿವಾರಣೆ ಮಾಡುವುದೇ ಆಗಿತ್ತು. ಹಿಲರಿಗೆ ಹಿಮಾಲಯ ಮತ್ತು ಶೆರ್ಪಾಗಳೆಂದರೆ(ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಸಿದ್ಧವಾದ ನೆಪಾಳದ ಒಂದು ಜನಾಂಗ) ಅತೀವ ಪ್ರೀತಿಯಿತ್ತು. ತನ್ನ ಸಾಧನೆಗೆ ಕಾರಣರಾದ ಶೆರ್ಪಾಗಳಿಗೆ ಏನಾದರೂ ಒಳ್ಳೆಯದು ಮಾಡಬೇಕೆಂದು ನಿರ್ಧರಿಸಿ, ಹಿಮಾಲಯನ್ ಟ್ರಸ್ಟ್ ಒಂದನ್ನು ರಚಿಸಿದ. ದೇಶ ವಿದೇಶಗಳಿಗೆ ಸಂಚರಿಸಿ ಹಣ ಸಂಗ್ರಹಿಸಿದ. ಅದರಿಂದ ಶೆರ್ಪಾಗಳಿಗಾಗಿ ಇಪ್ಪತ್ತೇಳು ಶಾಲೆಗಳನ್ನೂ, ಎರಡು ಆಸ್ಪತ್ರೆಗಳನ್ನೂ ನಿರ್ಮಿಸಿದ. ಹೀಗಾಗಿ ಇಂದಿಗೂ ಎಲ್ಲರ ಅಭಿಮಾನಕ್ಕೆ ಪಾತ್ರನಾಗಿದ್ದಾನೆ. ಭಾರತದಲ್ಲಿ ನ್ಯೂಜಿಲೆಂಡಿನ ಹೈಕಮೀಷನರ್ ಆಗಿ ಸೇವೆ ಸಲ್ಲಿಸಿದ ಸುಮಾರು ನಾಲ್ಕೂವರೆ ವರ್ಷಗಳು ಅವನ ಜೀವನದ ಮಧುರ ಕ್ಷಣಗಳಾಗಿದ್ದವು. ತನ್ನ ಆತ್ಮಚರಿತ್ರೆ, "ವ್ಯೂ ಫ್ರಂ ದಿ ಸಮ್ಮಿಟ್‌"ನಲ್ಲಿ, ಆತ ಹೇಳುತ್ತಾನೆ- "ಜೀವನದ ಅಂತ್ಯ ಯಾವಾಗ ಆಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ನನ್ನ ಪರ್ವತಾರೋಹಣೆ ಮುಂದೆಯೂ ಸಾಗುತ್ತಿರುತ್ತದೆ".
1990ರಲ್ಲಿ ಹಿಲರಿಯ ಮಗಪೀಟರ್ ಹಿಲರಿ ಸಹ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ನಿರ್ಮಿಸಿದಾಗ ಎಡ್ಮಂಡ್ ಹಿಲರಿಗೆ ಅತೀವ ಸಂತಸವಾಯಿತು. ಒಮ್ಮೆ ಒಬ್ಬರು ಎಡ್ಮಂಡ್ ಹಿಲರಿಯನ್ನು ಪರಿಚಯ ಮಾಡುತ್ತಾ, "ಈತ ಮೌಂಟ್ ಎವರೆಸ್ಟ್ ಅನ್ನು ಜಯಿಸಿದವರು" ಎಂದು ಹೇಳಿದ. ಆದಕ್ಕೆ ಹಿಲರಿ ಸಹಮತ ವ್ಯಕ್ತಪಡಿಸದೆ, "ಮೌಂಟ್ ಎವರೆಸ್ಟನ್ನು ಯಾರಿಂದಲೂ ಜಯಿಸಲು ಸಾಧ್ಯವಿಲ್ಲ, ಹೆಚ್ಚೆಂದರೆ ನೀವು 'ನಿಮ್ಮನ್ನು' ಗೆಲ್ಲಬಹುದಷ್ಟೆ". 2008ರಲ್ಲಿ ನಿಧನರಾದಾಗ ಎಡ್ಮಂಡ್ ಹಿಲರಿಗೆ 88 ವರ್ಷಗಳಾಗಿದ್ದವು. ಇಂದಿಗೂ ಹಿಲರಿ ಹೆಸರಿನ ಶಾಲಾ ಕಾಲೇಜುಗಳು ನ್ಯೂಜಿಲೆಂಡಿನಲ್ಲಿವೆ ಮತ್ತು ಅಲ್ಲಿನ ಸರ್ಕಾರ ಹಿಲರಿ ಭಾವಚಿತ್ರದ ಕರೆನ್ಸಿ ನೋಟುಗಳನ್ನೂ ಮುದ್ರಿಸಿ ಗೌರವ ಸೂಚಿಸಿದೆ.  

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.