ಸಂಪಾದಕೀಯ

ಈ ವಕೀಲರು ಯಾರು ಗೊತ್ತೇ?

Published On :

1880ರ ಸಮಯದಲ್ಲಿ ಸವಣೂರಿನಲ್ಲಿ ಕೃಷ್ಣರಾವ್ ಎಂಬ ವಕೀಲರಿದ್ದರು. ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಗಣ್ಯರು. ಅವರು ಬ್ಯಾರಿಸ್ಟರ್ ಪದವಿ ಪಡೆಯದೇ ಇದ್ದರೂ ಕಾನೂನನ್ನು ಚೆನ್ನಾಗಿ ಓದಿ ತಿಳಿದಿದ್ದರು. ಅಲ್ಲದೆ ವಕೀಲ ವೃತ್ತಿಯನ್ನು ಕೈಗೊಂಡು ಅದರಲ್ಲಿ ಹೆಸರು ಮಾಡಿದ್ದರು. ಹೀಗಾಗಿ ಸವಣೂರಿನ ಜನ ಅವರ ಬಳಿ ವಕಾಲತ್ತು ನೀಡಲು ಅವರ ಮನೆಗೆ ಬರುತ್ತಿದ್ದುದುಂಟು. ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಕೃಷ್ಣರಾವ್ ನ್ಯಾಯವಾಗಿದ್ದ ಮೊಕದ್ದಮೆಗಳನ್ನು ಮಾತ್ರ ತೆಗೆದುಕೊಂಡು ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದುದರಿಂದ ನ್ಯಾಯಾಧೀಶರುಗಳಿಗೂ ಅವರ ಬಗ್ಗೆ ಗೌರವವಿತ್ತು. ತಮ್ಮ ವೃತ್ತಿಯಲ್ಲಿ ಹಣಕ್ಕೆ ಅವರು ಹೆಚ್ಚಿನ ಮಹತ್ವ ನೀಡದೇ ಇದ್ದುದರಿಂದ ಮತ್ತು ತಮ್ಮಲ್ಲಿಗೆ ಬರುವವರು ಬಡ ಕಕ್ಷಿದಾರರಾಗಿದ್ದುದರಿಂದ ಅವರಿಗೆ ಅದರಿಂದ ಸಾಕಷ್ಟು ಸಂಪಾದನೆಯಾಗದೆ ಅವರು ಬಡವರಾಗಿಯೇ ಉಳಿದಿದ್ದರು.
ಒಮ್ಮೆ ಒಬ್ಬ ಬಡಪಾಯಿ ಮನೆಯಾಳಿಗೆ ಯಾವ ತಪ್ಪು ಇಲ್ಲದಿದ್ದರೂ ಶ್ರೀಮಂತನೊಬ್ಬ ಪಾದರಕ್ಷೆಯಿಂದ ಚೆನ್ನಾಗಿ ಥಳಿಸಿದ. ಇದರಿಂದ ಮನನೊಂದ ಆ ಆಳು ಕೃಷ್ಣರಾವ್‌ರ ಬಳಿ ಬಂದು ಅವರ ಸಲಹೆಯ ಮೇರೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ. ಶ್ರೀಮಂತನಿಗೆ ದಿಕ್ಕುತೋಚದಾಯಿತು. ಕೃಷ್ಣರಾಯರು ಖಂಡಿತಾ ತನ್ನನ್ನು ತಪ್ಪಿತಸ್ಥ ಎಂದು ಸಾಬೀತುಮಾಡಿ ಶಿಕ್ಷೆ ಕೊಡಿಸುತ್ತಾರೆಂದು ಭಯಪಟ್ಟ. ನ್ಯಾಯಾಲಯದಲ್ಲಿಯೂ ಶ್ರೀಮಂತನಿಗೆ ಶಿಕ್ಷೆ ವಿಧಿಸುವ ಲಕ್ಷಣ ಗೋಚರಿಸಿದಾಗ ವಕೀಲರನ್ನು ಓಲೈಸಲು ತನ್ನ ಗೆಳೆಯನೊಬ್ಬನ ಮೂಲಕ ಒಂದು ಸಾವಿರ ರುಪಾಯಿಗಳನ್ನು ಕಳುಹಿಸಿಕೊಟ್ಟ. ಆಗಿನ ಕಾಲದಲ್ಲಿ ಒಂದು ಸಾವಿರ ಕಡಿಮೆ ಮೊತ್ತದ್ದಾಗಿರಲಿಲ್ಲ. ತಮಗೆ ಅನಾಯಾಸವಾಗಿ ಬಂದ ಆ ಭಾರೀ ಮೊತ್ತವನ್ನು ಕಣ್ಣೆತ್ತಿ ನೋಡದೇ ತಂದುಕೊಟ್ಟವನ ಮುಖಕ್ಕೇ ಎಸೆದರು. ಅದರಿಂದ ಭಯಭೀತನಾದ ಆ ಶ್ರೀಮಂತ ತಾನೇ ಕೃಷ್ಣರಾಯರ ಬಳಿಬಂದು ತನ್ನಿಂದ ತಪ್ಪಾಗಿದೆಯೆಂದೂ ಅದಕ್ಕಾಗಿ ತಾನು ಪಶ್ಚಾತ್ತಾಪ ಪಟ್ಟಿರುವುದಾಗಿ ನುಡಿದು, ಕೃಷ್ಣರಾವ್‌ರ ಸಲಹೆಯ ಮೇರೆಗೆ ಸಾರ್ವಜನಿಕವಾಗಿ ಆ ಬಡ ಆಳಿನ ಕ್ಷಮೆಯಾಚಿಸಿದ. ಇದರಿಂದ ಸಂತುಷ್ಟರಾದ ಕೃಷ್ಣರಾವ್ ತಾವು ಹೂಡಿದ್ದ ಮೊಕದ್ದಮೆಯನ್ನು ವಾಪಸ್ಸು ತೆಗೆದುಕೊಂಡು ತಮಗೆ ಕೊಡಮಾಡಿದ್ದ ಒಂದು ಸಾವಿರ ರುಪಾಯಿಗಳಲ್ಲಿ ಅರ್ಧದಷ್ಟು ಪರಿಹಾರರೂಪವಾಗಿ ಆ ಆಳಿಗೂ, ಇನ್ನರ್ಧವನ್ನು ಆ ಗ್ರಾಮದ ಬಸವಣ್ಣನ ದೇವಾಲಯಕ್ಕೂ ಕೊಡಿಸಿದರು. ಹೀಗೆ ಹಣದ ವ್ಯಾಮೋಹಕ್ಕೆ ಬಲಿಯಾಗದ ಆ ವಕೀಲ ಕೃಷ್ಣರಾವ್ ಬೇರೆ ಯಾರೂ ಅಲ್ಲ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ವಿ,ಕೃ.ಗೋಕಾಕರ ತಂದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.