ಸಿಟ್ಟಿನಿಂದೆಸೆದ ಪುಸ್ತಕ ಹೆಸರು ತಂದಿತು
ಸ್ಟೀಫನ್ ಕಿಂಗ್ ಒಬ್ಬ ವಿಶಿಷ್ಟ ವ್ಯಕ್ತಿತ್ವದ ಅಮೆರಿಕದ ಖ್ಯಾತ ಕಾದಂಬರಿಕಾರ. ಅವನ ಕೃತಿಗಳಿಗೀಗ ಸಾಹಿತ್ಯ ಲೋಕದಲ್ಲಿ ಅತಿಯಾದ ಬೇಡಿಕೆ ಇದೆ. ಇದುವರೆಗೆ ಅವನ ಕೃತಿಗಳು 350 ಮಿಲಿಯನ್ನಷ್ಟು ಬಿಕರಿಯಾಗಿವೆ ಎಂದರೆ ಅವನ ಬರಹಕ್ಕೆ ಎಂತಹ ಸ್ಥಾನವಿದೆ ಎಂದು ತಿಳಿದೀತು. ಕಾದಂಬರಿಯ ಜೊತೆ ಸಣ್ಣಕಥೆಗಳ ಲೇಖಕನಾಗಿ, ಅಂಕಣಕಾರನಾಗಿ, ನಟನಾಗಿ, ಚಿತ್ರಕಥೆ ಬರಹಗಾರನಾಗಿ, ದೂರದರ್ಶನ ನಿರ್ಮಾಪಕನಾಗಿ, ಚಿತ್ರ ನಿರ್ದೇಶಕನಾಗಿ ಬಹುಮುಖ ಪ್ರತಿಭೆಯನ್ನು ಮೆರೆದಿರುವುದು ಗಮನಾರ್ಹವಾಗಿದೆ. ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸನ್ನು ಗಳಿಸಿರುವುದು ಈತನ ಹೆಗ್ಗಳಿಕೆ.
1973 ರಲ್ಲಿ ಬರೆದ ಒಂದು ಕಾದಂಬರಿ 'ಕ್ಯಾರಿ' ಸ್ಟೀಫನ್‌ನ ಮೊದಲು ಕೃತಿ. ಅದನ್ನು ಪ್ರಕಟಿಸಲು ಅವನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವನು ಅಲೆಯದ ಸ್ಥಳವಿಲ್ಲ, ಕದ ತಟ್ಟದ ಪ್ರಕಾಶನ ಸಂಸ್ಥೆಯಿಲ್ಲ. ಯಾರೊಬ್ಬರೂ ಅವನ ಈ ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬಾರದಿದ್ದಾಗ ಅವನಿಗಾದ ನಿರಾಶೆ ಅಷ್ಟಿಷ್ಟಲ್ಲ. ಕೊನೆಗೆ ಸಿಟ್ಟುಗೊಂಡು, ಇನ್ನು ಮುಂದೆ ಬರೆಯುವ ಸಾಹಸ ಮಾಡುವುದಿಲ್ಲವೆಂದು ನಿರ್ಧರಿಸಿ ಕಸದ ಬುಟ್ಟಿಗೆ ಎಸೆದುಬಿಟ್ಟ. ಬರೆಯುವ ಕೆಲಸ ಬಿಟ್ಟು ಬೇರೆ ಇನ್ನು ಯಾವುದಾದರೂ ಉದ್ಯೋಗ ಅರಸುವತ್ತ ಯೋಚಿಸಿದ. ಆದರೆ ಅವನ ಪತ್ನಿ ಹೀಗೆ ಎಸೆದ ಕಾದಂಬರಿಯನ್ನು ಕೊನೆಯ ಬಾರಿಗೆ ಒಂದು ಪ್ರಕಾಶನ ಸಂಸ್ಥೆಗೆ ಕಳುಹಿಸಿ ಪ್ರಯತ್ನಿಸಲು ಸಲಹೆ ನೀಡಿದಳು. ಅವಳ ಸಲಹೆಯ ಮೇರೆಗೆ 'ಡಬಲ್ ಡೇ' ಪ್ರಕಾಶನ ಸಂಸ್ಥೆಗೆ ಅದನ್ನು ನೀಡಿದಾಗ ಒಲ್ಲದ ಮನಸ್ಸಿನಿಂದ ಅದನ್ನು ಪ್ರಕಟಿಸಲು ಒಪ್ಪಿ 2500 ಡಾಲರನ್ನು ನೀಡಿ ಅದರ ಹಕ್ಕುಗಳನ್ನು ಪಡೆದುಕೊಂಡಿತು. ಆದರೆ ಅದು ಪ್ರಕಟವಾಗಿ ಕೆಲವೇ ದಿನಗಳಲ್ಲಿ ತುಂಬ ಜನಪ್ರಿಯವಾಗಿ 4ಲಕ್ಷ ಡಾಲರ್ ಆದಾಯವನ್ನು ತಂದು ಕೊಟ್ಟಿತು. ನಂತರ ಸ್ಟೀಫನ್ ಹಿಂತಿರುಗಿ ನೋಡಲಿಲ್ಲ. ನಂತರದ ದಿನಗಳಲ್ಲಿ ಅವನ ಕೃತಿಗಳಿಗಾಗಿ ಜನ ಕಾತರದಿಂದ ಕಾಯುವಂತಾಯಿತು. ಮತ್ತು ಪ್ರಕಾಶಕರು ಅವನಿಗೆ ದುಂಬಾಲು ಬೀಳತೊಡಗಿದರು. ಅಮೇರಿಕದ ಈ ಕಾದಂಬರಿಕಾರ ಇದುವರೆಗೂ 50 ಕಾದಂಬರಿಗಳನ್ನೂ, 200ಕ್ಕೂ ಹೆಚ್ಚು ಸಣ್ಣಕಥೆಗಳನ್ನೂ ರಚಿಸಿ ವಿಶ್ವಾದ್ಯಂತ ಹೆಸರು ಗಳಿಸಿದ್ದಾರೆ 1999ರಲ್ಲಿ ನಡೆದ ಅಪಘಾತದಲ್ಲಿ ಕುಳಿತು ಬರೆಯುವ ಸಮರ್ಥ್ಯವನ್ನು ಕಳೆದುಕೊಂಡು ಇನ್ನೇನು ಬರೆಯುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದಾಗ ಆತನ ಅಭಿಮಾನಿಗಳ ಒತ್ತಾಸೆಯಿಂದ ತನ್ನ ಬರವಣಿಗೆಯನ್ನು ಮುಂದುವರೆಸಿದ್ದಾನೆ. ಇದೀಗ ಸೆಪ್ಟಂಬರ್ 2013 ಕ್ಕೆ ಅವನ ಡಾಕ್ಟರ್ಸ್ ಸ್ಲೀಪ್ ಬಿಡುಗಡೆಯಾಗಲಿದ್ದು, ಜನ ಅದರ ಬಿಡುಗಡೆಗಾಗಿ ಕಾತರದಿಂದ ಕಾದಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

