ಜಡಭರತರು ಜೀವನವನ್ನು ಸ್ವೀಕರಿಸಿದ ರೀತಿ
ಧಾರವಾಡದ ಮನೋಹರ ಗ್ರಂಥಮಾಲೆ ನಮ್ಮ ನಾಡಿನ ಉತ್ತಮ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. 1933ರ ಆಗಸ್ಟ್ ಹದಿನೈದರಂದು ಹೊಂಬಳದ ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿಯವರ ಪರಿಶ್ರಮದಿಂದ ಪ್ರಾರಂಭವಾದ ಈ ಸಂಸ್ಥೆ ಹಲವಾರು ಪ್ರಸಿದ್ಧ ಸಾಹಿತಿಗಳ ಮತ್ತು ಉದಯೋನ್ಮುಖ ಸಾಹಿತಿಗಳ ಮೌಲಿಕ ಕೃತಿಗಳನ್ನು ಪ್ರಕಟಿಸಿ ಹೆಸರು ಮಾಡಿದೆ. ಜೋಶಿಯವರ ಕಾವ್ಯನಾಮ ಜಡಭರತ. ಸೃಜನಶೀಲ ಸಾಹಿತ್ಯಕ್ಕೆ ಇಂಬುಕೊಟ್ಟ ಜಡಭರತರು ಅನೇಕ ಸಾಹಿತಿಗಳನ್ನೂ, ಲೇಖಕರನ್ನೂ ಸೃಷ್ಟಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಮಿರ್ಜ ಅಣ್ಣಾರಾಯ, ರಾವ್ ಬಹಾದ್ದೂರ್ ಮುಂತಾದ ಲೇಖಕರನ್ನು ಬೆಳಕಿಗೆ ತಂದವರೇ ಅವರು. ಜೋಷಿಯವರು ಸ್ವತಃ ಸಾಹಿತಿಗಳೂ ನಾಟಕಕಾರರೂ ಆಗಿದ್ದರು. ಅವರು ಬರೆದ 'ಧರ್ಮಸೆರೆ' ಕಾದಂಬರಿ ಚಲನಚಿತ್ರವಾಗಿ ಮೂಡಿಬಂತು. ಅವರ 'ಜಡಭರತನ ಕನಸುಗಳು', 'ಜೀವಫಲ' ಇವುಗಳೂ ಸಹ ಪ್ರಸಿದ್ಧವಾದವು. ಮೂಕಬಲಿ ಮತ್ತು ಕದಡಿದ ನೀರು ಅವರು ಬರೆದ ನಾಟಕಗಳಾಗಿವೆ. ಅವರ ಪ್ರಕಟಣೆಯ 'ಸತ್ತವರ ನೆರಳು' ಮತ್ತು 'ನಾನೇ ಬಿಜ್ಜಳ' ಅತಿ ಪ್ರಸಿದ್ಧಿ ಪಡೆದ ನಾಟಕಗಳಾಗಿವೆ. ಅವರು ಅನೇಕ ಪಾಶ್ಚಾತ್ಯ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಜೋಶಿಯವರಿಗಿದ್ದ ಇನ್ನೊಂದು ಗೀಳು ನಾಟಕ ನೋಡುವುದು, ನಾಟಕ ಆಡಿಸುವುದು, ನಾಟಕ ಬರೆಸುವುದು. ನಾಟಕ ನೋಡಲು ದೂರದೂರಿಗೆ ಹೋಗುತ್ತಿದ್ದದೂ ಉಂಟು. ಒಮ್ಮೆ ಮೈಸೂರಿಗೆ ಹೋಗಿದ್ದಾಗ ನಾಟಕವೊಂದನ್ನು ನೋಡಲು ಮೂರು ರುಪಾಯಿಯ ಟಿಕೆಟ್ಟಿಗೆ ಐದು ರುಪಾಯಿ ಕೊಟ್ಟು ನಾನು ಐದು ರುಪಾಯಿಗಿಂತ ಕಡಿಮೆ ಕೊಟ್ಟು ನಾಟಕ ನೋಡುವುದೇ ಇಲ್ಲ ಎಂದ.
ಒಮ್ಮೆ ಬೆಳಗಿನ ಜಾವ ಐದೂಕಾಲು ಗಂಟೆಗೆ ಅಂಚೆಯವನು ಬಾಗಿಲು ಬಡಿದು ಜೋಶಿಯವರನ್ನು ಎಬ್ಬಿಸಿದ. ಅವರು ಎದ್ದು ಹೊರಬಂದ ಕೂಡಲೇ ಅವರ ಕೈಯಲ್ಲೊಂದು ಟೆಲಿಗ್ರಾಂ ಕೊಟ್ಟು ಸಹಿ ಪಡೆದು ಹೋದ. ಟೆಲಿಗ್ರಾಮನ್ನು ಒಡೆದು ಓದುವ ಗೋಜಿಗೆ ಹೋಗದೆ ತಮ್ಮ ತಲೆದಿಂಬಿನಡಿ ಇಟ್ಟುಕೊಂಡು ನಿದ್ದೆ ಹೋದರು. ನಂತರ ಎಷ್ಟೋ ಹೊತ್ತಿನ ಮೇಲೆ ನೆನಪಾಗಿ ಟೆಲಿಗ್ರಾಮನ್ನು ಒಡೆದು ಮಗನ ಕೈಲಿ ಓದಿಸಿದರು. ಅದು ಸರ್ಕಾರ ಅವರಿಗೆ ಕೊಡಮಾಡಿದ್ದ ಪದ್ಮಶ್ರೀ ಪ್ರಶಸ್ತಿ ಸಮಾಚಾರ ಹೊತ್ತು ತಂದಿತ್ತು. ಈ ಪ್ರಶಸ್ತಿ ಜೋಷಿಯವರ ಪ್ರಕಾಶನ ಸೇವೆಗೆ ಮತ್ತು ಸಾಹಿತ್ಯ ರಚನೆಗೆ ನೀಡಿದ್ದಾಗಿತ್ತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

