ಕೋಪದಲ್ಲೆಸೆದ ಸವಾಲು ಜೀವನಗತಿಯನ್ನೇ ಬದಲಿಸಿತು
ಮಾಲತಿ ವಿಶ್ರಾಮ್ ಬೇಡೇಕರ್ ಮರಾಠಿಯ ಪ್ರಸಿದ್ದ ಸಾಹಿತಿಯಾಗಿದ್ದವರು. ಖರೇಮಾಸ್ಟರ್, ಶರಾಬಿ, ಪರದಾ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ನೀಡಿದವರು. ಸಾಹಿತ್ಯ ಸೇವೆ ಮಾಡಲು ತಮ್ಮ ಸರ್ಕಾರಿ ನೌಕರಿಯನ್ನು ಬಿಟ್ಟು ಮರಾಠಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಒಮ್ಮೆ ಅವರ ಪತಿ ವಿಶ್ರಾಮ್ ಬೇಡೇಕರ್ ತಮ್ಮ ಪತ್ನಿಯ ಜೊತೆ ಮಾತನಾಡುತ್ತಿದ್ದಾಗ ಅದೇ ತಾನೇ ಬಿಡುಗಡೆಯಗಿದ್ದ ಪತ್ನಿಯ ಕೃತಿಯೊಂದನ್ನು ಕುರಿತು ಅದರ ಗುಣಾವಗುಣಗಳನ್ನು ವಿಮರ್ಶೆ ಮಾಡಿ ಟೀಕಿಸಿದರು. ಆದರೆ ವಿಮರ್ಶೆಯನ್ನು ಅವರ ಪತ್ನಿ ಸಕಾರಾತ್ಮಕವಾಗಿ ತೆಗೆದುಕೊಳ್ಳದೆ, ಟೀಕಿಸಿದ ಪತಿಯ ಮೇಲೆ ಕೋಪಗೊಂಡರು. ಸಿಟ್ಟಿನ ಭರದಲ್ಲಿ ಪತ್ನಿ ಮಾಲತಿಯವರು ನೀವೂ ಒಂದು ಕೃತಿ ರಚಿಸಿ, ನಿಮ್ಮ ಪ್ರತಿಭೆ ತೋರಿಸಿ ಎಂದು ಸವಾಲೆಸೆದರು. ತಮ್ಮ ಪತ್ನಿಯು ಕೋಪದಿಂದ ಈ ರೀತಿ ಮಾತನಾಡಿದರೂ ಅದನ್ನು ಸವಾಲಾಗಿ ಸ್ವೀಕರಿಸಿದ ವಿಶ್ರಾಮ್ ತಮ್ಮ ಅನುಭವದಿಂದ ಕೂಡಿದ ಪ್ರತಿಭೆಯನ್ನು ಓರೆಹಚ್ಚಿ ಒಂದು ಕಾದಂಬರಿ ಬರೆಯ ತೊಡಗಿದರು. ಅವರು ಅದೇತಾನೆ ಇಂಗ್ಲೆಂಡಿನಿಂದ ಬಂದಿದ್ದರು. ಅವರು ಎರಡನೇ ಮಹಾಯುದ್ಧದ ಹಿನ್ನಲೆಯಲ್ಲಿ ಭಾರತದ ಯುವಕ ಮತ್ತು ಇಂಗ್ಲಿಷ್ ಯುವತಿಯ ಪ್ರೇಮ ಕಥೆಯ ಕುರಿತು 'ರಣಾಂಗನ್' ಎಂಬ 128 ಪುಟಗಳ ಪುಟ್ಟ ಕಾದಂಬರಿಯನ್ನು ಬರೆದರು. ತುಂಬಾ ಅಳುಕಿನಿಂದ ಪುಸ್ತಕವನ್ನು ಪ್ರಕಟಿಸಿಯೂ ಬಿಟ್ಟರು. ಆದರೆ ಅದರಲ್ಲಿ ಅವರ ಹೆಸರನ್ನು ಹಾಕಿರಲಿಲ್ಲ. ಈ ಕಾದಂಬರಿ ಆಗಿನ ಕಾಲದಲ್ಲಿ ಸಾಹಿತ್ಯ ಪ್ರಪಂಚದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಅದನ್ನು ಓದಿದವರೆಲ್ಲಾ ಲೇಖಕನ ಭಾಷಾಶೈಲಿ ಮತ್ತು ಸತ್ವದ ಕುರಿತು ತುಂಬಾ ಶ್ಲಾಘಿಸಿದರು. 1939ರಲ್ಲಿ ಪ್ರಕಟವಾದ ಈ ಕಾದಂಬರಿ ಇದುವರೆಗೆ ಹಲವಾರು ಆವೃತ್ತಿಗಳನ್ನು ಕಂಡಿದೆ. ಆ ಪುಸ್ತಕವನ್ನು ಮಾಲತಿಯವರು ಕೈಲಿ ಹಿಡಿದು ತಮ್ಮ ಪತಿಗೆ ತೋರಿಸುತ್ತಾ 'ಈ ಸೊಗಸಾದ ಕಾದಂಬರಿಯನ್ನು ಓದಿದ್ದೀರಾ?' ಎಂದು ಕೇಳಿದರು. ಅದನ್ನು ಕೇಳಿ ನಸುನಕ್ಕ ವಿಶ್ರಾಮ್ ಅವರು ಏನೂ ಮಾತನಾಡದೆ ಮೌನವಾದರು. ನಂತರ ಸದರಿ ಕಾದಂಬರಿಯನ್ನು ತಮ್ಮ ಪತಿಯೇ ಬರೆದಿದ್ದು ಎಂದು ತಿಳಿದು ಅಭಿನಂದಿಸಿದಾಗ ಇದಕ್ಕೆ ಮೂಲ ಪ್ರೇರಣೆ ತನ್ನ ಪತ್ನಿಯೇ ಎಂದೂ, ಅಂದು ಪತ್ನಿ ಸವಾಲು ಹಾಕದಿದ್ದರೆ ತಾನು ಕಾದಂಬರಿ ಬರೆಯಲು ಸಾಧ್ಯವಾಗುತ್ತಿರಲಿಲ್ಲವೆಂದೂ ಬೇಡೇಕರ್ ತಿಳಿಸಿದರು. ನಂತರ ವಿಶ್ರಾಮ್ ಅವರು ಬ್ರಹ್ಮಕುಮಾರಿ, ತಿಳಕ್ ಅಣಿ ಅಗರ್ಕರ್ ಮುಂತಾದ ನಾಟಕಗಳನ್ನೂ ಬರೆದು ಪ್ರಸಿದ್ಧರಾದರು. ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನೂ ಪಡೆದರು. ಅಲ್ಲದೆ ಮರಾಠಿ ಸಾಹಿತ್ಯ ಸಮ್ಮೇಳನದ ವಜ್ರಮಹೋತ್ಸವಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಚಲನಚಿತ್ರ ಪ್ರಪಂಚದಲ್ಲಿಯೂ ಬೇಡೇಕರ್ ಹೆಸರು ಮಾಡಿದ್ದಾರೆ. ಅನೇಕ ಸಿನಮಾಗಳಿಗೆ ಚಿತ್ರಕಥೆ ಬರೆದದ್ದಷ್ಟೇ ಅಲ್ಲದೆ, ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

