ಬಾಣಸಿಗನ ಆತ್ಮಾಭಿಮಾನ
ಹಿಂದೆ ರಾಮಕೃಷ್ಣ ಶಾಸ್ತ್ರಿ ಎಂಬ ಬಾಣಸಿಗ ಇದ್ದ. ಆತ ಪ್ರಖ್ಯಾತ ಆಯುರ್ವೇದ ಪಂಡಿತ. ನಂಜನಗೂಡಿನ ಬಿ.ವಿ.ಪಂಡಿತರ ತಾಯಿ ಕೆಂಚಮ್ಮನವರ ಗಮನ ಸೆಳೆದಿದ್ದ. ಆಕೆ ರಾಮಕೃಷ್ಣ ಶಾಸ್ತ್ರಿಗೆ ಅಡುಗೆಯ ಎಲ್ಲ ಮಜಲುಗಳನ್ನೂ ಕಲಿಸಿ ಅವನನ್ನು ಪರಿಪೂರ್ಣ ಅಡಿಗೆಯವನ ಹಾಗೆ ತಯಾರು ಮಾಡಿದ್ದರು. ಈ ಶಾಸ್ತ್ರಿಯ ಅಡುಗೆ ಕೀರ್ತಿ ಮೈಸೂರು ಅರಮನೆಯವರೆಗೂ ತಲುಪಿತು. ಹೀಗಾಗಿ ಅವನನ್ನು ಅರಮನೆಯ ಬಾಣಸಿಗನನ್ನಾಗಿ ನೇಮಕ ಮಾಡಿದರು. ರುಚಿಕಟ್ಟಾಗಿ ಹಾಗೂ ಅಚ್ಚುಕಟ್ಟಾಗಿ ಮಾಡುತ್ತಿದ್ದ ಅವನ ಅಡುಗೆ ಮಹಾರಾಣಿಯಿಂದಾದಿಯಾಗಿ ಎಲ್ಲರ ಪ್ರೀತಿಗೂ ಪಾತ್ರವಾಗಿತ್ತು. ಒಂದು ದಿನ ಪರಿಚಾರಕಿಯೊಬ್ಬಳು ಶಾಸ್ತ್ರಿಯ ಬಳಿ ಬಂದು ಮಾರನೆಯ ದಿನ ರಾಣಿಗೆ ಬೆಳಗಿನ ಉಪಹಾರಕ್ಕಾಗಿ ವಿಶೇಷ ತಿನಿಸನ್ನು ತಯಾರಿಸಬೇಕೆಂಬ ನಿರೂಪವನ್ನು ತಲುಪಿಸಿದಳು. ಮರುದಿನ ಶಾಸ್ತ್ರಿ ತುಂಬಾ ಕಾಳಜಿಯಿಂದ ಹುರಳೀಕಾಯಿ ಭಾತ್ ತಯಾರಿಸಿ ರಾಣಿಯವರ ಸನ್ನಿಧಾನಕ್ಕೆ ಬೆಳ್ಳಿತಟ್ಟೆಯಲ್ಲಿಟ್ಟು ಕಳುಹಿಸಿದ. ಅದನ್ನು ತಿಂದ ರಾಣಿ ಸಂತೃಪ್ತರಾಗಿ, 'ಶಿಷ್ಯ ತಯಾರಿಸಿದ ತಿನಿಸೇ ಇಷ್ಟು ರುಚಿಯಾಗಿರಬೇಕಾದರೆ, ಇವನಿಗೆ ಕಲಿಸಿದ ಕೆಂಚಮ್ಮ ತಾಯಿಯ ಕೈಯಿಂದ ತಯಾರಾದ ತಿನಿಸು ಅದೆಷ್ಟು ರುಚಿಯಾಗಿರಬೇಕು, ಆಕೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಇರಬೇಕು' ಎಂದು ಉದ್ಗರಿಸಿದ್ದರು. ಒಂದು ದಿನ ಶಾಸ್ತ್ರಿ ಊಟಕ್ಕೆ ಸೋರೇಕಾಯಿ ಮಜ್ಜಿಗೆ ಹುಳಿ, ಹೀರೇಕಾಯಿ ತೊವ್ವೆ ಮತ್ತು ಹೀರೇಕಾಯಿ ಸಿಪ್ಪೆಯ ಚಟ್ನಿ ಮಾಡಿದ್ದ. ಅದನ್ನು ಸವಿದ ಮಹಾರಾಣಿ ಒಂದೊಂದೂ ಪದಾರ್ಥದ ಸವಿಗೆ ಮಾರು ಹೋಗಿದ್ದಳು. ಚಟ್ನಿಗೆ ಹಾಕಿದ ವಸ್ತುವೇನೆಂದು ಕಂಡು ಹಿಡಿಯಲು ತನ್ನ ಪರಿಚಾರಕಿಯರಿಗೆ ತಿಳಿಸಿದರೂ ಅವರು ಅದೇನೆಂದು ಕಂಡುಹಿಡಿಯಲು ವಿಫಲರಾದರು. ಇನ್ನೊಂದು ದಿನ ಅವನು ಮಾಡಿದ ಕಾಯಿ ಒಬ್ಬಟ್ಟು, ತಿಳಿಸಾರು ಎಲ್ಲವೂ ಅರಮನೆಯ ರಾಜಕುಟುಂಬದ ಗಮನ ಸೆಳೆದು ಶಾಸ್ತ್ರಿಯ ಕೀರ್ತಿ ಮುಗಿಲು ಮುಟ್ಟಿತ್ತು. ಇದರಿಂದ ಅಸೂಯೆಗೊಂಡ ಇತರರು ಅಧಿಕಾರಿಗಳೊಡನೆ ಪಿತೂರಿ ನಡೆಸಿ ಶಾಸ್ತ್ರಿಯನ್ನು ಕೆಲಸದಿಂದ ತೆಗೆದು ಹಾಕಿಬಿಟ್ಟರು. ಇದು ರಾಣಿಯ ಗಮನಕ್ಕೆ ಬಂದು ಕೆಲಸದಿಂದ ತೆಗೆದ ಅಧಿಕಾರಿಗೆ ಛೀಮಾರಿ ಹಾಕಿ ಪುನಃ ಶಾಸ್ತ್ರಿಯನ್ನು ಹೆಚ್ಚಿನ ವೇತನ ನೀಡಿ ನೇಮಕ ಮಾಡಿದಳು. ಮುಂದೆ ಮಹಾರಾಣಿಯು ರಾಜ್ಕೋಟ್‌ಗೆ ತೆರಳಿದಾಗಲೂ ಶಾಸ್ತ್ರಿಯನ್ನು ತನ್ನೊಟ್ಟಿಗೆ ಕರೆದೊಯ್ದು ಅಲ್ಲಿಯೂ ಅವನ ಅಡುಗೆಯ ರುಚಿ ಸವಿದಳು. ಅವನು ಮಾಡುತ್ತಿದ್ದ ಮಸಾಲೆ ದೋಸೆ ಚಟ್ನಿಯಂತೂ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತಿತ್ತು. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲಿಗೇ ಸರ್ಕಿಟ್ ಹೋದರೂ ಶಾಸ್ತ್ರಿಯನ್ನು ಮಾತ್ರ ಬಿಟ್ಟು ಹೋಗುತ್ತಿರಲಿಲ್ಲ. ಭದ್ರಾವತಿ ಮತ್ತು ಶಿವಮೊಗ್ಗ ಕ್ಯಾಂಪ್‌ಗಳಲ್ಲಿ ಅವನು ಮಾಡಿದ ಉಂಡೆಹುಳಿ, ನುಚ್ಚಿನುಂಡೆ ಮತ್ತು ತಿಳಿಸಾರು ಸವಿದ ಮಹಾರಾಜರು ಅವನಿಗೆ ಇನಾಂ ನೀಡಿದ್ದರು. ಇವನ ಅಡುಗೆಯ ರುಚಿ ಸವಿದ ಮಿರ್ಜಾ ಇಸ್ಮಾಯಿಲ್, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ, ದಿವಾನ್ ತಂಬು ಚೆಟ್ಟಿ, ದಿವಾನ್ ಮಾಧವರಾವ್ ಮನಸಾರೆ ಹೊಗಳಿದ್ದರು. ಶ್ರೀನಿವಾಸ ಶಾಸ್ತ್ರಿಯವರಂತೂ, ಇಪ್ಪತೈದು ರುಪಾಯಿಗಳ ಬಹುಮಾನವನ್ನು ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ, ಅದನ್ನು ಪಡೆಯಲು ಅರಮನೆಯ ಅನುಮತಿ ಇಲ್ಲವೆಂದರು. ಕೊನೆಗೆ ಶ್ರೀನಿವಾಸ ಶಾಸ್ತ್ರಿಯವರು ಅವನಿಗೆ 'ಪಾಕಶಾಸ್ತ್ರ ಪ್ರವೀಣ' ಎಂಬ ಬಿರುದು ನೀಡಿ ಗೌರವಿಸಿದರು. ತಂಬುಚೆಟ್ಟಿಯವರು ಅವನ ವೇತನವನ್ನು ಇಪ್ಪತ್ತು ರುಪಾಯಿಗೆ ಏರಿಸಿದರು. ಜಯಚಾಮರಾಜ ಒಡೆಯರ್ ಅವರು ಮಹಾರಾಜರಾಗಿದ್ದಾಗಲೂ ಶಾಸ್ತ್ರಿಯ ಅಡಿಗೆ ಕೆಲಸ ಮುಂದುವರೆದಿತ್ತು. ಅಷ್ಟರಲ್ಲಿ ಬಿ.ವಿ.ಪಂಡಿತರ 60ನೇ ಹುಟ್ಟುಹಬ್ಬ ಆಚರಣೆಗೆ ಭಾಗವಹಿಸಲು ಶಾಸ್ತ್ರಿ ರಜೆ ಬೇಡಿದಾಗ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದರು. ಆಗ ಬೇಸರಗೊಂಡ ಶಾಸ್ತ್ರಿ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬರಬೇಕಾಯಿತು. ಮಹಾರಾಣಿ ಮತ್ತಿತರರು ರಾಜಿನಾಮೆ ಹಿಂಪಡೆವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿ ಕೊನೆಗೆ ನಂಜನಗೂಡಿನಲ್ಲಿಯೇ ನೆಲಸಿದ ಶಾಸ್ತ್ರಿ ಆತ್ಮಗೌರವದ ಸಂಕೇತವಾಗಿದ್ದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

