ಆದರ್ಶ ರಾಜಕಾರಣಿ ಮಠಾಧಿಪತಿಯಾದದ್ದು
ಹೆಬ್ಬಣಿ ಭೀಮಾಚಾರ್ಯರು ಅಪ್ಪಟ ಕಾಂಗ್ರೆಸಿಗರಾಗಿ ರಾಜಕಾರಣದಲ್ಲಿ ವಿಶೇಷ ಗಮನ ಸೆಳೆದಿದ್ದರು. ಮುಳುಬಾಗಿಲಿನ ಜನರಿಗೆ ಅವರು ಅಚ್ಚುಮೆಚ್ಚು. ಧಾರ್ಮಿಕ ಐಕ್ಯಮತ್ಯ ಮತ್ತು ಸಮಾಜ ಸಾಮರಸ್ಯ ಸಾಧಿಸುವಲ್ಲಿ ಅವರ ಶ್ರಮ ಹೆಚ್ಚು. ಮುಸ್ಲಿಂ ಜನಾಂಗದ ಮುಖಂಡ ರಫೀಕ್ ಅಹಮದ್‌ರವರು ಪ್ರತಿವರ್ಷ ತಿರುಪತಿಯ ಕಲ್ಯಾಣೋತ್ಸವಕ್ಕೆ ಹೋಗಿ ಬರುವ ಸಂಪ್ರದಾಯವನ್ನು ಅನುಸರಿಸುತ್ತಿದ್ದುದು ಭೀಮಾಚಾರ್ಯರ ಪ್ರಭಾವದಿಂದ. ಮುಳುಬಾಗಿಲು ಪುರಸಭೆಯ ಅಧ್ಯಕ್ಷರಾಗಿದ್ದಾಗ 1980ರಲ್ಲಿ ಉತ್ತಮ ಆಡಳಿತಕ್ಕಾಗಿ ರಾಜ್ಯ ಪ್ರಶಸ್ತಿ ಬಂದಿತ್ತು. ಅವರ ಪ್ರಕಾರ ಪ್ರಾಮಾಣಿಕ ಮತ್ತು ತತ್ವಬದ್ಧ ರಾಜಕಾರಣಿ ಮುಂದಿನ ತಲೆಮಾರಿನ ಭವಿತವ್ಯ ಕುರಿತು ಸದಾ ಚಿಂತಿಸುತ್ತಾನೆ ಅವನಿಗೆ ಮುಂದಿನ ಚುನಾವಣೆ ದೊಡ್ಡದೆನಿಸುವುದೇ ಇಲ್ಲ. ಅವರಿಗೆ ನಿಟ್ಟೂರು ಶ್ರೀನಿವಾಸರಾಯರು. ಡಿ.ವಿ.ಜಿ, ವಿ.ಸೀ, ಎಲ್ ಗುಂಡಪ್ಪ, ತಿ.ತಾ.ಶರ್ಮ, ಗೊರೂರರು ಮುಂತಾದ ದಿಗ್ಗಜರೊಡನೆ ನಿಕಟ ಸಂಪರ್ಕವಿತ್ತು.
ಮೊದಲ ಬಾರಿಗೆ 1958-59ರಲ್ಲಿ ಮುಳುಬಾಗಿಲಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿತು. ಆಗ ಸರ್ಕಾರದೊಡನೆ ಪತ್ರವ್ಯವಹಾರ ನಡೆಸಿ ಕೊನೆಗೂ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ಅನುಮೋದನೆ ಪಡೆಯಲಾಯಿತು. ಆದರೆ ನೀರಿನ ಶೇಖರಣೆಗೆ ಮುಳುಬಾಗಿಲಿನಲ್ಲಿ ಯೋಗ್ಯ ನಿವೇಶನ ದೊರೆಯದೆ ಅನುದಾನ ವಾಪಸ್ಸು ಹೋಗುವ ಸ್ಥಿತಿ ಮುಟ್ಟಿತು. ಆಗ ಭೀಮಾಚಾರ್ಯರು ತಮ್ಮ ಮನೆಯ ಹಿಂಭಾಗದ ವಿಶಾಲ ಜಾಗವನ್ನೇ ಈ ಕಾರ್ಯಯೋಜನೆಗೆ ಬಿಟ್ಟು ಕೊಟ್ಟು, ನೀರಿನ ಯೋಜನೆ ಜಾರಿಯಾಗಲು ಕಾರಣರಾದರು. ಮುಳುಬಾಗಿಲಿಗೆ ಸರ್ಕಾರಿ ಕಾಲೇಜು ಸ್ಥಾಪನೆಗೂ ಮೂಲ ಕಾರಣರಾಗಿ, ಬಸ್ ನಿಲ್ದಾಣಕ್ಕೆ, ಶ್ರೀಪಾದರಾಜ ಮಠದ ಜಮೀನು ಬಿಟ್ಟುಕೊಟ್ಟಿದ್ದು ಹೀಗೆ ನೂರಾರು ಕಾಮಗಾರಿ ಮತ್ತು ನಿರ್ಮಾಣ ಕಾರ್ಯಗಳನ್ನು ಆಚಾರ್ಯರು ಮಾಡಿಕೊಟ್ಟಿದ್ದಾರೆ. ಇಂತಹ ಪರಿಶುದ್ಧ ಮತ್ತು ಪ್ರಾಮಾಣಿಕರಾದ ಆಚಾರ್ಯರ ಮೇಲೆ ದುರಾತ್ಮರು ಸರ್ಕಾರಕ್ಕೆ ಮೂಕರ್ಜಿ ಬರೆದು ಪುರಸಭಾಧ್ಯಕ್ಷರಾಗಿದ್ದ ಆಚಾರ್ಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಇದರಂತೆ ಸರ್ಕಾರದ ತಪಾಸಣಾ ತಂಡ ಮುಳುಬಾಗಿಲಿಗೆ ಆಗಮಿಸಿ ಎಲ್ಲ ಲೆಕ್ಕಪತ್ರಗಳನ್ನೂ, ಆಚಾರ್ಯರು ಮಾಡಿಸಿದ ಕಾಮಗಾರಿಗಳನ್ನೂ ಪರಿಶೀಲಿಸಿ ನೋಡಿದಾಗ ಪ್ರತಿಯೊಂದು ಕೆಲಸದಲ್ಲಿಯೂ ಅವರ ಪ್ರಾಮಾಣಿಕತೆಯನ್ನು ಕಂಡು ಆಚಾರ್ಯರಿಗೆ ಸಾಷ್ಟಾಂಗ ನಮಸ್ಕರಿಸಿ ತಮ್ಮನ್ನು ಕ್ಷಮಿಸಲು ಕೇಳಿಕೊಂಡರು. ಮುಂದೆ ಭೀಮಾಚಾರ್ಯರು ಶ್ರೀಪಾದರಾಜ ಮಠದ ಮಠಾಧೀಶರಾಗಿ ಶ್ರೀ ವಿಜ್ಞಾನನಿಧಿ ತೀರ್ಥರೆಂಬ ನಾಮಾಂಕಿತದೊಡನೆ ಸುಮಾರು ಹದಿಮೂರು ವರ್ಷ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಸಾಮಾನ್ಯ ಜನರಿಗೆ ಭೀಮಪ್ಪ ಸ್ವಾಮಿಗಳಾಗಿ ರಂಗವಿಠಲ ಪತ್ರಿಕೆಯ ಸಂಪಾದಕರಾಗಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಸ್ಥಾಪಕರಾಗಿ, ಹಿಂದೂ-ಮುಸ್ಲಿಂ ಐಕ್ಯತೆಯ ಕೊಂಡಿಯಾಗಿ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ವಿಜ್ಞಾನನಿಧಿ ತೀರ್ಥರು ಯತಿಗಳಾಗುವ ಬದಲಿಗೆ ರಾಜಕೀಯ ವ್ಯಕ್ತಿಯಾಗಿದ್ದರೆ ಮುಳಬಾಗಿಲಿನ ಇತಿಹಾಸವೇ ಬದಲಾಗುತ್ತಿತ್ತು ಎಂದು ಹಿಂದಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಹೇಳುತ್ತಿದ್ದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

