ಕನ್ನಡದಲ್ಲಿ ಸಹಿ ಮಾಡಿದ ಗಾಂಧೀಜಿ
ನಮಗೆ ನಮ್ಮ ಮಾತೃಭಾಷೆಯ ಬಗ್ಗೆ ಇರುವ ಆಸಡ್ಡೆ, ಶತಾಯಗತಾಯ ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿಯೇ ಕಲಿಯಬೇಕೆಂಬ ಹಠ, ಇವೆಲ್ಲಾ ನಮ್ಮ ಭಾಷೆಯ ಬಗೆಗಿನ ನಮ್ಮ ಅಲಕ್ಷ್ಯವನ್ನು ಸೂಚಿಸುತ್ತವೆ. ಹಾಗಾಗಿಯೇ ಕನ್ನಡಿಗರನ್ನು ಎಲ್ಲರೂ ನಿರಭಿಮಾನಿಗಳು ಎಂಬ ಹಣೆಪಟ್ಟಿ ಕಟ್ಟಿ ಹಂಗಿಸುವುದು. ಆದರೆ ಮಹಾತ್ಮ ಗಾಂಧಿಯವರಿಗೆ ಮಾತೃಭಾಷೆಯಷ್ಟೇ ಅಲ್ಲ, ತಮ್ಮ ದೇಶಭಾಷೆಗಳೆಂದರೆ ಅದೆಷ್ಟು ಮಮತೆ ಇತ್ತು ಎಂಬುದಕ್ಕೊಂದು ನಿದರ್ಶನ ಇಲ್ಲಿದೆ.
ವಸುದೇವ ಭೂಪಾಲಂ ಶಿವಮೊಗ್ಗದ ಶ್ರೀಮಂತ ಮನೆತನಕ್ಕೆ ಸೇರಿದ ವ್ಯಕ್ತಿ. ಕವಿ, ಸಾಹಿತಿ ಮತ್ತು ನಾಟಕಕಾರರಾಗಿದ್ದ ಅವರು ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. 1946 ರಲ್ಲಿಯೇ ಅವರು 'ರಂಜನ' ಎಂಬ ಕವನ ಸಂಕಲನನ್ನು ಪ್ರಕಟಿಸಿದ್ದರು. ಅಲ್ಲದೆ ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ನಾಟಕ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದರು. ಅವರ 'ದೇವರು ಸತ್ತ' ಎಂಬ ಕೃತಿಯಲ್ಲಿ ಹಲವು ಮೂಲಗಳಿಂದ ಸಂಗ್ರಹಿಸಿದ ವಿಷಯಗಳನ್ನು ರೋಚಕವಾಗಿ ನಿರೂಪಿಸಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾರೂ ನೀಡದಷ್ಟು ಬಹುದೊಡ್ಡ ದತ್ತಿಯನ್ನೂ ಸಹ ನೀಡಿದ್ದಾರೆ. ಅವರೊಮ್ಮೆ ಗಾಂಧೀಜಿಯವರನ್ನು ಭೇಟಿಮಾಡಿದರು. ತಮಗೆ ಅವರ ಹಸ್ತಾಕ್ಷರ ಪಡೆಯುವ ಆಸೆಯಿದೆಯೆಂದೂ ದಯಮಾಡಿ ಇಂಗ್ಲೀಷಿನಲ್ಲಿ ಹಸ್ತಾಕ್ಷರ ನೀಡುವಂತೆ ಕೇಳಿಕೊಂಡರು. ಆದರೆ ಇಂಗ್ಲಿಷಿನಲ್ಲಿ ಹಸ್ತಾಕ್ಷರ ನೀಡಲು ಇಷ್ಟವಿಲ್ಲದ ಗಾಂಧೀಜಿ ತಮಿಳಿನಲ್ಲಿ ಹಸ್ತಾಕ್ಷರಹಾಕಿ ಕೊಡಲೆ ಎಂದು ಕೇಳಿದರು. ಆಗ ಭೂಪಾಲಂ ಕನ್ನಡದಲ್ಲಿ ಕೊಡಿ ಎಂದು ಬಿಟ್ಟರು. ಗಾಂಧೀಜಿ ಸ್ವತ- ತಾವೇ ದೇವನಾಗರಿ ಸಹಾಯದಿಂದ ಲಿಪಿಪಟದಲ್ಲಿ ಕನ್ನಡ ಅಕ್ಷರಗಳನ್ನು ಗುರುತಿಸಿ, ವಸುದೇವ ಭೂಪಾಲಂ ಅವರ ನೆರವಿನಿಂದ ಒಂದೊಂದೇ ಅಕ್ಷರವನ್ನು ಬರೆಯಲು ಉಪಕ್ರಮಿಸಿದರು. ಮೊದಲ ಬಾರಿಗೆ 'ಮೋ' ಅಕ್ಷರವನ್ನು ಬರೆದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಒಂದು ಕಾಗದದ ಚೂರಿನ ಮೇಲೆ ಮೋ.ಕ.ಗಾಂಧಿ ಎಂದು ಬರೆದು ಸಂಭ್ರಮಿಸಿದರು. ನೀವೂ ಒಮ್ಮೆ ಬರೆಯಿರಿ ಎಂದು ಭೂಪಾಲಂ ಅವರಿಗೆ ಸೂಚಿಸಿದರು. ನಂತರ ಗಾಂಧೀಜಿ, ವಸುದೇವ ಭೂಪಾಲಂ ಅವರ ಕೈಯಲ್ಲಿದ್ದ ತಮ್ಮ ಭಾವಚಿತ್ರವನ್ನು ತೆಗೆದುಕೊಂಡು ಅದರಲ್ಲಿ ಕನ್ನಡದಲ್ಲಿ ಸಹಿ ಮಾಡಿ, ತಾರೀಖು ಹಾಕಿಕೊಟ್ಟರು. ಅದನ್ನು ಕೊನೆಯವರೆಗೂ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡವರು ಭೂಪಾಲಂ. ಆ ಸಂದರ್ಭದಲ್ಲಿ ಪುತಿನ ಅವರು ಲೇಖನವೊಂದರಲ್ಲಿ, 'ಆಗಂತುಕನು ಕನ್ನಡದವನೆಂದು ತಿಳಿದು ಹಸ್ತಾಕ್ಷರವನ್ನು ಕನ್ನಡದಲ್ಲಿಯೇ ಬರೆದುಕೊಡಬೇಕೆಂದು ಮನಸ್ಸು ಮಾಡಿ, ಲಿಪಿಗಳ ಪಟದಲ್ಲಿ ಕನ್ನಡದ ಅಕ್ಷರಗಳನ್ನು ಹುಡುಕುತ್ತಾ ಅಭ್ಯರ್ಥಿಯನ್ನೇ ಕಾಗುಣಿತವನ್ನು ಕಲಿಸಿಕೊಡೆಂದು ಬೇಡುತ್ತಿರುವ ಆ ಮಹಾತ್ಮನ ರೂಪು ನಮ್ಮ ಕಣ್ಣುಗಳನ್ನು ತೋಯಿಸುತ್ತದೆ' ಎಂದು ಬರೆದಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

