ಸಂಪಾದಕೀಯ

ಹೀಗೊಂದು ಒಳ್ಳೆಯ ಸಂಕೇತ

Published On :

ಭ್ರಷ್ಟಾಚಾರ ಮುಕ್ತ ಹಾಗೂ ಆಮಿಷಗಳಿಂದ ದೂರವಾದ, ಕಾಸು-ಹೆಂಡದ ಪ್ರಭಾವವೇ ಇಲ್ಲದ ಸ್ವಚ್ಛ ರೀತಿಯಲ್ಲಿ ಚುನಾವಣೆಗಳು ನಡೆಯಬೇಕೆನ್ನುವುದು ಎಲ್ಲ ಸಜ್ಜನರ, ಸಂಭಾವಿತರ ಬಯಕೆ. ಅದರಲ್ಲಿ ಅನುಮಾನವೇ ಇಲ್ಲ.
ಅಂತಹ ಬಯಕೆಗೆ ಸಮುದಾಯದ ಸ್ವರೂಪವನ್ನು ಕೊಟ್ಟು, ಅದಕ್ಕೊಂದು ನೈತಿಕ ನೆಲಗಟ್ಟನ್ನು ರೂಪಿಸುವುದು ಧಾರ್ಮಿಕ-ಆಧ್ಯಾತ್ಮಿಕ ಸಂಸ್ಥೆಗಳಿಗೆ ಸಾಧ್ಯವಾಗಬಹುದೆನ್ನುವುದೂ ಅನೇಕರ ನಂಬಿಕೆ.  ಈ ನಂಬಿಕೆಯ ಆಧಾರದ ಮೇಲೆ ತರಳ ಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಚಿಕ್ಕಮಗಳೂರು ಕ್ಷೇತ್ರದಲ್ಲಿನ ಎಲ್ಲ ಸಂಭಾವ್ಯ ಅಭ್ಯರ್ಥಿಗಳ ಜತೆ ವಿಚಾರ ವಿನಿಮಯ ನಡೆಸಿ ಪಾರದರ್ಶಕ ಚುನಾವಣೆ ಕುರಿತಂತೆ ಒಂದು ಉತ್ತಮ ಸಂಕೇತವನ್ನು ಜನರಿಗೆ ಮುಟ್ಟಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಎಲ್ಲ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳೂ ಸಿರಿಗೆರೆ ಸ್ವಾಮಿಗಳನ್ನು ಸಂದರ್ಶಿಸಿ ಅವರ ಸಮ್ಮುಖದಲ್ಲಿ ಭ್ರಷ್ಟಾಚಾರ ರಹಿತ, ಆಮಿಷ ರಹಿತ, ಪಾರದರ್ಶಕ ಚುನಾವಣೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿ, ಒಂದು ಮುಚ್ಚಳಿಕೆಯನ್ನು ಬರೆದು ಕೊಟ್ಟಿದ್ದಾರೆ. ಈ ಮುಚ್ಚಳಿಕೆಗೆ ಹಲವು ಸ್ಥಳೀಯ ಪ್ರಮುಖರು ಸಾಕ್ಷಿಗಳು.
ಐದಂಶದ ಈ ಮುಚ್ಚಳಿಕೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿರುವ ಚುನಾವಣೆಯ ಸಂಹಿತೆ ಹಾಗೂ ಕಾಯಿದೆಯ ವಿಧಿ-ನಿಯಮಗಳಲ್ಲಿ ಅಳವಡಿಸಲಾಗಿರುವ ರೀತಿಯಲ್ಲೇ ವರ್ತಿಸಲು ಸಂಭಾವ್ಯ ಅಭ್ಯರ್ಥಿಗಳು ವಚನ ನೀಡಿರುವುದೇ ನಿಜಕ್ಕೂ ಸಮಾಜಕ್ಕೆ ರವಾನಿಸಿದ ಸಂದೇಶ.
ಸಿರಿಗೆರೆ ಸ್ವಾಮೀಜೀ ಅವರು ಇಂತಹ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹ. ಧಾರ್ಮಿಕ ಸಂಸ್ಥೆಗಳಿಗೆ, ಆ ಕ್ಷೇತ್ರದ ಪ್ರಮುಖರಿಗೆ ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರುವ ಶಕ್ತಿ ಇರುವುದರಿಂದ ಅವರ ಸಮ್ಮುಖದಲ್ಲೇ ಆಗಿರುವ ಈ ಒಪ್ಪಂದವನ್ನು ಮತದಾರರೂ ಒಪ್ಪುವುದು ಸಹಜವೇ. ಆದರೆ ಮತದಾರರಿಗೆ ಸರಿಯಾದ ರೀತಿಯಲ್ಲಿ ಸ್ವಾಮಿಗಳ ಸಂದೇಶ ಮುಟ್ಟಬೇಕು.
ಇಂತಹ ಒಂದು ಚಿಂತನೆಯನ್ನು, ಅಯ್ಯೋ ಇಂತಹ ಎಷ್ಟೋ ಪ್ರಯತ್ನಗಳು ನಿರರ್ಥಕವಾಗಿವೆ, ಇದೂ ಆ ಸಾಲಿನಲ್ಲಿ ಒಂದು ಎನ್ನುವಂತೆ ಸಿನಿಕತನದಿಂದ ತಳ್ಳಿಹಾಕಿ ಮೂದಲಿಸುವುದು ಸುಲಭ. ಆದರೆ ಹಿಂದೆ ಇದ್ದ ಚುನಾವಣೆ ಕಾಯಿದೆಗೂ ಈಗಿನ ಕಾಯಿದೆಗೂ ಇರುವ ಹಲವು ಗಮನಾರ್ಹವಾದ ವ್ಯತ್ಯಾಸಗಳನ್ನು ಅಳವಡಿಸುವುದು ಸಾಧ್ಯವಾಗಿದ್ದು ಜನರ ಒತ್ತಾಯದಿಂದಲೇ. ಆ ಒತ್ತಾಯಕ್ಕೆ ಪ್ರೇರಕ ಶಕ್ತಿ ಎಲ್ಲ ಕಡೆ ಅಂಧಕಾರ ಕವಿದಿದ್ದಾಗ ಅಲ್ಲಿ ಇಲ್ಲಿ ಇಂತಹ ಉತ್ತಮ ಚಿಂತನೆಯ ಹಣತೆಗಳನ್ನು ಹೊತ್ತಿಸಿದ ವ್ಯಕ್ತಿಗಳು. ಅನೇಕ ಕಡೆಗಳಲ್ಲಿ ಹಿಂದೆಯೂ ಇಂತಹ ಪ್ರಯತ್ನ ನಡೆದಿತ್ತು.
ಒಂದು ಕಾಲದಲ್ಲಿ, 1952 ರಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ರಾಜಕೀಯ ಶಕ್ತಿಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಆಯಾ ಪಕ್ಷಗಳ ಪ್ರಣಾಳಿಕೆಯ ವಿವರಗಳನ್ನು ಮಂಡಿಸುವ ಅವಕಾಶವನ್ನು ಒದಗಿಸಲು ಅನೇಕ ಸಂಸ್ಥೆಗಳು ಪ್ರಯತ್ನಿಸಿದ್ದವು. ಆ ಚರ್ಚಾ ಕೂಟಗಳಲ್ಲಿ ಪಕ್ಷಗಳ ಪ್ರತಿನಿಧಿಗಳು ತುಂಬಾ ಗಂಭೀರವಾಗಿ ವರ್ತಿಸುತ್ತಿದ್ದರು. ಈಗ ಟಿ.ವಿ. ವಾಹಿನಿಗಳಲ್ಲಿ ಚರ್ಚೆ ಎಂದರೆ ಜಗಳವೇ ಎನ್ನುವ ಪರಿಸ್ಥಿತಿ ಇದೆ. ಪರಸ್ಪರ ಅಸಹನೆ ಹೆಚ್ಚುತ್ತಿರುವುದಕ್ಕೆ ಈ ಪ್ರವೃತ್ತಿಯೇ ಸಾಕ್ಷಿ.
ಚುನಾವಣೆಗೆ ಮುನ್ನ ಅನೌಪಚಾರಿಕವಾಗಿ ಎಲ್ಲ ಅಭ್ಯರ್ಥಿಗಳೂ ಸೇರಿ ಸಂಯಮದ ಪಾರದರ್ಶಕ ಸಂದೇಶವನ್ನು ಮತದಾರರಿಗೆ ರವಾನಿಸಿದರೆ ಒಂದು ಒಳ್ಳೆಯ ವಾತಾವರಣ ಸೃಷ್ಟಿಯಾಗಬಹುದು. ಒಂದೇ ಬಾರಿಗೆ ಎಲ್ಲ ಕಡೆ ಸ್ವಯಂ ಪ್ರೇರಣೆಯಿಂದ ಸದಾಚಾರ ಸಂಹಿತೆ ಜಾರಿಗೆ ಬರುವುದೆನ್ನುವ ಭ್ರಮೆ ಯಾರಿಗೂ ಇಲ್ಲ. ಆದರೂ ಇಂತಹ ಚಿಂತನೆಯೇ ವ್ಯರ್ಥಾಲಾಪವೆನ್ನುವ ಮಾತೂ ಸರಿಯಲ್ಲ. ಎಂದಾದರೊಂದು ದಿನ ಬಹುಜನರು ಆಚಾರ ಸಂಹಿತೆಯನ್ನು ಒಪ್ಪಲೂ ಬಹುದು. ಪ್ರಯತ್ನವಂತೂ ನಡೆಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.