ಹಿಂದೆ ಜನ ಹೀಗಿದ್ದರು!
1917ರ ಒಂದು ಭಾನುವಾರ. ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಭೇಟಿಗಾಗಿ ಒಬ್ಬ ವ್ಯೆದಿಕ ಬ್ರಾಹ್ಮಣರು ಬಂದಿದ್ದರು. ಅವರನ್ನು ನೋಡಿದರೆ ಸರ್ಕಾರದಿಂದ ಏನಾದರೂ ಸಹಾಯ ಬೇಡಲೆಂದೇ ಬಂದಿರಬಹುದೆಂದು ಭಾವಿಸಿ ಭೇಟಿಯನ್ನು ನಿರಾಕರಿಸಲಾಯ್ತು. ಆದರೆ ಅವರು ಬಿಟ್ಟರೆ ತಾನೆ. ತಮ್ಮ ಸಂಪಾದನೆಯ ಒಂದು ದೊಡ್ಡ ಮೊತ್ತವನ್ನು ಸರ್ಕಾರದ ಸಮಾಜಮುಖಿ ಕೆಲಸಗಳಿಗೆ ದೇಣಿಗೆ ನೀಡಲು ಬಂದಿರುವುದಾಗಿ ಅಲವತ್ತುಕೊಂಡರು. ಅದು ಅಂದಿನ ಕಾಲಕ್ಕೆ ಬಹುದೊಡ್ಡ ಮೊತ್ತವಾಗಿತ್ತು. ಕೊನೆಗೆ ದಿವಾನರ ಕಾರ್ಯದರ್ಶಿಗಳು ದಿವಾನರನ್ನು ಕಂಡು ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟರು. ಅವರ ವಿದ್ವತ್ತು, ಸಂಸ್ಕೃತದ ಬಗ್ಗೆ ಇರುವ ಪಾಂಡಿತ್ಯ ಇವನ್ನೆಲ್ಲಾ ತಿಳಿದು ಅವರೊಬ್ಬ ಅಸಾಮಾನ್ಯ ವ್ಯಕ್ತಿಯೆಂದು ಗೊತ್ತಾಯಿತು. ಕೂಲಂಕಶ ವಿಚಾರಿಸಿದಾಗ ಅವರು ಅರಮನೆಯಲ್ಲಿ ಧರ್ಮಾಧಿಕಾರಿಯೆಂದೂ, ಅವರ ಹೆಸರು ನವೀನಂ ರಾಮಾನುಜಾಚಾರ್ಯರೆಂದೂ, ಜೀವನದಲ್ಲಿ ಅನೇಕ ದಿಗ್ಗಜರಿಗೆ ಸಂಸ್ಕೃತ ಪಾಠಮಾಡಿ ನ್ಯಾಯದಿಂದ ಹಣ ಸಂಪಾದನೆ ಮಾಡಿದ್ದಾರೆಂದೂ ತಿಳಿಯಿತು. ಅವರೊಡನೆ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ವಿಶ್ವೇಶ್ವರಯ್ಯನವರು ಅವರ ಪಾಂಡಿತ್ಯಕ್ಕೆ ತಲೆದೂಗಿದರು. ಅವರು ಅಭಿಮಾನದಿಂದ ನೀಡಿದ ಮೂವತ್ತಮೂರು ಸಾವಿರ ರುಪಾಯಿಗಳನ್ನು ಸ್ವೀಕರಿಸಿದರು. ಅದನ್ನು ಪಂಡಿತರ ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರತಿಭಾವಂತ, ಬಡ ವಿದ್ಯಾರ್ಥಿ ವೇತನಕ್ಕಾಗಿ ಉಪಯೋಗಿಸಲು ಆದೇಶಿಸಿದರು.
ಅದೇ ರೀತಿ ಇನ್ನೊಂದು ಘಟನೆ. ಇಂದೂರಿನ ರೆಸಿಡೆಂಟರಾಗಿದ್ದ ಸರ್.ಹ್ಯೂ ಡಾಲಿಯವರು ನಿವೃತ್ತರಾದ ಮೇಲೆ ಇಂಗ್ಲೆಂಡಿಗೆ ಮರಳಲು ನಿರ್ಧರಿಸಿದರು. ಆದರೆ ಅದೇ ಸಮಯಕ್ಕೆ ಮೊದಲ ವಿಶ್ವ ಸಮರ ಪ್ರಾರಂಭವಾದ್ದರಿಂದ ಹಡಗು ದೊರೆಯದೆ ಅವರು ಆರು ತಿಂಗಳುಗಳ ಕಾಲ ಭಾರತದಲ್ಲಿಯೇ ಉಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತು. ಉದಕಮಂಡಲದಲ್ಲಿದ್ದ ಮೈಸೂರು ಮಹಾರಾಜರ ಬಂಗಲೆಯನ್ನು ಅವರ ವಾಸಕ್ಕಾಗಿ ಉಚಿತವಾಗಿ ನೀಡಲಾಗಿತ್ತು. ಏಕೆಂದರೆ ಅವರು ಹಿಂದೆ ಮೈಸೂರಿನ ಅನೇಕ ಯೋಜನೆಗಳಿಗೆ ತಮ್ಮ ನೆರವನ್ನು ನೀಡಿದ್ದರು. ಆದರೆ ಸ್ವಾಭಿಮಾನಿಯಾಗಿದ್ದ ಡಾಲಿಯವರು ಅಲ್ಲಿ ಆರು ತಿಂಗಳುಗಳ ಕಾಲವಿದ್ದು ಹೋಗುವಾಗ ತಿಂಗಳಿಗೆ ಮುನ್ನೂರು ರುಪಾಯಿಗಳಂತೆ ಲೆಕ್ಕಹಾಕಿ 1800 ರುಪಾಯಿಗಳನ್ನು ಮಹಾರಾಜರಿಗೆ ಒಪ್ಪಿಸಿದರು. ಎಷ್ಟೇ ಬೇಡವೆಂದರೂ ಕೇಳಲಿಲ್ಲ. ಕೊನೆಗೆ ಆ ಹಣವನ್ನೂ ಸಹ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಿ ಅದನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನಕ್ಕಾಗಿ ಉಪಯೋಗಿಸಬೇಕೆಂದು ತಿಳಿಸಲಾಯಿತು. ಇದರಿಂದ ಹಿಂದೆ ಎಂತಹ ಮಹಾಪುರಷರಿದ್ದರು ಎಂದು ತಿಳಿದುಬರುತ್ತದೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

