ಸಂಪಾದಕೀಯ

ಪ್ರಶಸ್ತಿ ನಿರಾಕರಿಸಿದ ಅಚೀಬೆ

Published On :

ಇತ್ತೀಚೆಗಷ್ಟೆ ನಿಧನರಾದ ಆಫ್ರಿಕಾದ ಪ್ರಸಿದ್ಧ ಸಾಹಿತಿ ಚಿನೂವಾ ಅಚೀಬೆಯವರದ್ದು ಒಂದು ರೀತಿಯ ಋಷಿಸದೃಶ ಜೀವನ. ಸಮಾಜದ ಅನ್ಯಾಯದಲ್ಲಿ ನಡೆಯುವ  ವಿರುದ್ಧ ಬಂಡೆದ್ದು ಹೋರಾಡಿದ ಪ್ರಜಾಪ್ರಭುತ್ವವಾದಿ. ಅವರು ಬರೆದದ್ದು ಕೇವಲ ಐದು ಕಾದಂಬರಿಗಳನ್ನು. ಒಂದೊಂದೂ ಒಂದು ಸಾಹಿತ್ಯ ರತ್ನಗಳಾಗಿವೆ.
ಒಳ್ಳೆಯ ಕವಿಯೂ ಆಗಿದ್ದ ಅಚೀಬೆ ಅವರು ತಮ್ಮ ಕವನ ಸಂಕಲನ ಕ್ರಿಸ್ಮ್‌ಸ್ ಇನ್ ಬಯಾಫ್ರ ಕೃತಿಗೆ ಕಾನ್ವೆಲ್ತ್ ಕವಿ ಪ್ರಶಸ್ತಿ ಪಡೆದುಕೊಂಡರು. ಅವರ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿಯಂತೂ ಸಾಹಿತ್ಯ ಲೋಕದಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿತು. ಇದುವರೆಗೆ  ಹತ್ತು ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದು, ವಿಶ್ವದ 50 ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಇನ್ನೊಂದು ಕಾದಂಬರಿ ಆಂಟ್ ಹಿಲ್ಸ್ ಆಫ್ ದಿ ಸವನ್ನಾ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗಳಿಸಿತು. ನೆಲ್ಸನ್ ಮಂಡೇಲಾ ಅವರಂತೂ ಅಚೀಬೆಯವರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿದ್ದರು. ಅವರು ಒಂದೆಡೆ ಹೇಳಿದ್ದು ಹೀಗೆ, 'ಅಚೀಬೆ ಆಫ್ರಿಕಾವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾ ಸಾಹಿತಿ'. ಅವರು ಅಮೆರಿಕದಲ್ಲಿ ಕೊನೆಯವರೆಗೂ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಆಫ್ರಿಕನ್ ಸ್ಟಡೀಸ್‌ನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಇನ್ನೊಂದು ಕೃತಿ ಎ ಮ್ಯಾನ್ ಆಫ್ ದಿ ಪೀಪಲ್ ನೈಜೀರಿಯಾದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ಬಗ್ಗೆ ಬರೆದದ್ದಾಗಿದೆ. 1967 ರಿಂದ 1970ರವರೆಗೆ ನಡೆದ ಕ್ಷೋಭೆಯ ಕುರಿತು ಬರೆದ ದೇರ್ ವಾಸ್ ಎ ಕಂಟ್ರಿ ಆ ದೇಶದ ಬಗ್ಗೆ ಭ್ರಮ ನಿರಸನವುಂಟಾಗುವಂತೆ ಮಾಡುತ್ತದೆ. 1990 ರಲ್ಲಿ ನಡೆದ ಕಾರು ಅಪಘಾತದಲ್ಲಿ ತುಂಬಾ ಪೆಟ್ಟಾಗಿ ಕೊನೆಯವರೆಗೂ ಅಮೆರಿಕದಲ್ಲಿ ಉಳಿಯಬೇಕಾಯಿತು.
ಅಚೀಬೆ ನೈಜೀರಿಯಾ ದೇಶದ ಅತ್ಯುನ್ನತ ಗೌರವವಾದ ಕಮಾಂಡರ್ ಆಫ್ ದಿ ಫೆಡರಲ್ ರಿಪಬ್ಲಿಕ್ ಪ್ರಶಸ್ತಿಯನ್ನು ಎರಡು ಬಾರಿ ಕೊಡಲು ಘೋಷಿಸಿದರೂ ಅಚೀಬೆ ಮಾತ್ರ ಅದನ್ನು ಸ್ವೀಕರಿಸುವ ಗೋಜಿಗೆ ಹೋಗದೇ ಅದನ್ನು ತಿರಸ್ಕರಿಸಿದರು. ಅವರಿಗೆ ತಮ್ಮ ದೇಶದಲ್ಲಿ ನಡೆಯುತ್ತಿದ್ದ ಅಂತರಿಕ ಕ್ಷೋಭೆ ಮನಸ್ಸಿಗೆ ನೋವನ್ನುಂಟುಮಾಡಿತ್ತು. ನೈಜೀರಿಯಾದ ವಿದ್ಯಮಾನಗಳನ್ನು ಗಮನಿಸಿದರೆ ಪರಿಭ್ರಮೆ ಮತ್ತು ಗಾಬರಿ ಹುಟ್ಟಿಸುವಂತಿದೆ. ತನ್ನ ದೇಶ ದೀವಾಳಿಯತ್ತ ಮತ್ತು ಅರಾಜಕತೆಯಿಂದ ಕೂಡಿದೆ ಎಂದು ತಿಳಿದು ನೈಜೀರಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಅವರು ಹೋರಾಡಿದರು. ಚಿನೂವಾ ಅಚೀಬೆ ಅವರನ್ನು ಆಧುನಿಕ ಸಾಹಿತ್ಯದ ಪಿತಾಮಹ ಎಂದೇ ಕರೆಯಲಾಗುತ್ತಿತ್ತು. ಕೇವಲ  ಸಾಹಿತಿಯಾಗಿ ಮಾತ್ರವಲ್ಲ, ಬಂಡಾಯ ಮನೋಭಾವವನ್ನು ಹೊಂದಿದ್ದ ಅಚೀಬೆ ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಆಫ್ರಿಕಾವನ್ನು ಬಿಂಬಿಸುವ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.