ಸಂಪಾದಕೀಯ

ಮಹೀಪತಿ ದಾಸರಿಗೆ ಸಿಕ್ಕ ಬಾದಶಹ

Published On :

ಬಿಜಾಪುರ ಸುಲ್ತಾನ ಗುಣಗ್ರಾಹಿಯಾಗಿದ್ದನೇ ಹೊರತು ಜಾತಿಗೆ ಮಣೆ ಹಾಕುತ್ತಿರಲಿಲ್ಲ. ಖವಾಸಖಾನನೆಂಬ ವ್ಯಾಪಾರಿಯ ಬಳಿ ಕರಣಿಕನಾಗಿದ್ದ ಗುರುರಾಯ ಎಂಬ ಸದ್ಗೃಹಸ್ತರು ಒಮ್ಮೆ ಬಿಜಾಪುರ ಸುಲ್ತಾನನ ಅರಮನೆಗೆ ಹೋಗಿ ಲೆಕ್ಕಾಚಾರದ ವಿಚಾರದಲ್ಲಿ ಬಾದಶಹನಿಗೆ ಬಂದಿದ್ದ ಶಂಕೆಯನ್ನು ಕ್ಷಣಮಾತ್ರದಲ್ಲಿ ನಿವಾರಿಸಿ ಅವರ ಮನಸ್ಸನ್ನು ಗೆದ್ದರು. ಇದರಿಂದ ಸಂಪ್ರೀತನಾದ ಬಾದಶಹನು ಗುರುರಾಯರಿಗೆ ಉನ್ನತ ಹುದ್ದೆಯನ್ನು ನೀಡಿ ತನ್ನ ಅರಮನೆಯಲ್ಲಿಯೇ ನೇಮಿಸಿಕೊಂಡನು. ಅವರ ನಿಷ್ಠೆ, ಪ್ರಾಮಾಣಿಕತೆಯನ್ನು ನೋಡಿ ಬಾದಶಹನಿಗೆ ತುಂಬಾ ಸಂತೋಷವಾಯಿತು.
ಹೀಗೆಯೇ ಹಲವಾರು ವರ್ಷಗಳು ಸೇವೆ ಸಲ್ಲಿಸಿದ ಮೇಲೆ ನಂಗಾಶಾಹ ಎಂಬ ಫಕೀರನ ಸಲಹೆಯಂತೆ ಸಾರವಾಡದ ಭಾಸ್ಕರ ಸ್ವಾಮಿಗಳ ಬಳಿ ಹೋಗಲು ಬಾದಶಹನ ಅನುಮತಿ ಪಡೆದು ಗುರುರಾಯರು ಪತ್ನಿಸಮೇತರಾಗಿ ಹೊರಟೇಬಿಟ್ಟರು. ಭಾಸ್ಕರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಕೆಲಕಾಲ ಅಲ್ಲಿಯೇ ನೆಲಸಿದರು. ಎಷ್ಟು ದಿನವಾದರೂ ಗುರುರಾಯರು ಬಿಜಾಪುರಕ್ಕೆ ಬಾರದಿದ್ದುದನ್ನು ನೋಡಿದ ಬಾದಶಹ ಒಬ್ಬ ಸೇವಕನ ಜೊತೆ ಒಂದು ನಿರೂಪವನ್ನು ಕಳುಹಿಸಿ, ತಕ್ಷಣ ಬಾದಶಹನ ಸೇವೆಗೆ ಆಗಮಿಸಬೇಕೆಂದು ಆಗ್ರಹಿಸಿದನು. ಆದರೆ ಅಷ್ಟು ಹೊತ್ತಿಗಾಗಲೇ ಗುರುರಾಯರಿಗೆ ವೈರಾಗ್ಯ ಉಂಟಾಗಿ ಅವರು ಭಾಸ್ಕರ ಸ್ವಾಮಿಗಳ ಪದತಲದಲ್ಲಿಯೇ ಉಳಿಯಲು ನಿರ್ಧರಿಸಿದ್ದರು.
ಸೇವಕ ಬಂದು ಕರೆದಾಗ ತಮಗೆ ನಿಜವಾದ ಬಾದಶಹ ಈಗ ದೊರಕಿರುವುದಾಗಿಯೂ ಇನ್ನು ಅದೇ ಬಾದಶಹನ ಸೇವೆಯನ್ನು ಮಾಡಿಕೊಂಡಿರುವುದಾಗಿಯೂ ಹೇಳಿ ಕಳುಹಿಸಿದರು. ಅಲ್ಲದೆ ತಮ್ಮ ಪಾಲಿನ ಸಮಸ್ತ ಸ್ಥಿರ, ಚರ ಆಸ್ತಿಗಳನ್ನು ರಾಜಭಂಡಾರಕ್ಕೆ ಸೇರಿಸಿಕೊಳ್ಳಬಹುದೆಂದೂ ವಿನಂತಿಸಿಕೊಂಡರು. ಆದರೆ ಬಾದಶಹನು ಹಾಗೆ ಮಾಡದೆ, ಅದು ಗುರುರಾಯರ ಆಸ್ತಿಯಾದುದರಿಂದ ಅದನ್ನು ಹೇಗೆಬೇಕಾದರೂ ವಿನಿಯೋಗಿಸುವ ಹಕ್ಕು ಅವರಿಗಿದೆಯೆಂದು ಫರ್ಮಾನು ಹೊರಡಿಸಿದನು. ಅದನ್ನು ಕೇಳಿದ ರಾಯರು ತಮ್ಮ ಪತ್ನಿಯನ್ನು ವಿಜಾಪುರಕ್ಕೆ ಕಳುಹಿಸಿ, ತಮ್ಮದೆನ್ನುವ ಆಸ್ತಿಯನ್ನೆಲ್ಲಾ ಮಾರಿಸಿ, ಅದನ್ನು  ಬಡಬ್ರಾಹ್ಮಣರಿಗೆ ಮತ್ತು ಸತ್ಪಾತ್ರರಿಗೆಲ್ಲ ಹಂಚಿಸಿಬಿಟ್ಟರು. ನಂತರ ತಮ್ಮ ಗುರುಗಳಿಂದ ದೀಕ್ಷೆ ಪಡೆದು ಮಹೀಪತಿರಾಯರಾದರು. ನಂತರ 'ಮಹೀಪತಿ ದಾಸರು' ಕಾಖಂಡಕಿಯಲ್ಲಿ ನೆಲಸಿ ಅನೇಕ ಕೀರ್ತನೆಗಳನ್ನು ರಚಿಸಿ ಎಲ್ಲರಿಗೂ ಭಕ್ತಿಮಾರ್ಗವನ್ನು ಬೋಧಿಸಿದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.