ಸಂಪಾದಕೀಯ

ಅವರು ಹಾಗೆ, ಇವರು ಹೀಗೆ

Published On :

ಸರ್.ಎಂ.ವಿಶ್ವೇಶ್ವರಯ್ಯನವರು ಅಮೆರಿಕಕ್ಕೆ ಒಮ್ಮೆ ಭೇಟಿ ನೀಡಿದ್ದರು. ಅಲ್ಲಿದ್ದಾಗ ಅವರು ಕಟ್ಟಿಸಿಕೊಂಡ ಒಂದು ಹಲ್ಲು ಮುರಿದು ಹೋಗಿದ್ದರಿಂದ ಅದನ್ನು ಸರಿ ಮಾಡಿಸಿಕೊಳ್ಳಲು ನ್ಯೂಯಾರ್ಕ್‌ನ ಒಬ್ಬ ದಂತವೈದ್ಯರನ್ನು ಕಂಡರು. ಅಲ್ಲಿ ತಮ್ಮ ಹಲ್ಲನ್ನು ಸರಿಪಡಿಸಿಕೊಂಡು ಬಿಲ್ ಪಾವತಿಸಿ ತಮ್ಮ ಹೊಟೆಲ್ ಕೊಠಡಿಗೆ ಹಿಂದಿರುಗಿದರು. ಮಾರನೇ ದಿನ ವಿಶ್ವೇಶ್ವರಯ್ಯನವರು ತಮ್ಮ ಹೊಟೆಲ್ ಕೊಠಡಿಯಲ್ಲಿದ್ದಾಗ ಹಿಂದಿನ ದಿನ ಚಿಕಿತ್ಸೆ ನೀಡಿದ ದಂತವೈದ್ಯರು ಆತುರಾತುರವಾಗಿ ಬಂದು ವಿಶ್ವೇಶ್ವರಯ್ಯನವರಿಗೆ ವಂದಿಸಿದರು. ಬಂದ ಕಾರಣ ಕೇಳಿದಾಗ ಅವರು, ಪ್ರಮಾದದಿಂದ ನಿಮ್ಮ ಬಿಲ್ಲಿಗೆ ಹೆಚ್ಚಿನ ಹಣ ಹಾಕಿಬಿಟ್ಟಿದ್ದೆ. ದಯಮಾಡಿ ಕ್ಷಮಿಸಿರಿ. ಇದೋ ನಾನು ಹೆಚ್ಚಿಗೆ ಪಡೆದ ಹಣ ಇಲ್ಲಿದೆ ಎಂದು ವಿನೀತವಾಗಿ ನುಡಿದು ಆ ಹಣವನ್ನು ಹಿಂತಿರುಗಿಸಿದರು. ಎಂ.ವಿ.ಯವರು ಅದಕ್ಕಾಗಿ ವೈದ್ಯರು ಇಷ್ಟು ದೂರ ಬರಬೇಕಾಯಿತಲ್ಲ ಎಂದು ಪೇಚಾಡಿಕೊಂಡು, ಅಕಸ್ಮಾತ್ ನೀವು ಹೆಚ್ಚಿಗೆ ಹಣ ಪಡೆದಿರಬಹುದು. ಆದರೆ ನೀವು ನಿಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದೀರಿ. ನೀವು ಆ ಹಣವನ್ನು ನೀವೇ ಇಟ್ಟುಕೊಳ್ಳಿ. ಅದಕ್ಕಾಗಿ ತಾವು ತಮ್ಮ ಸಮಯವನ್ನು ವ್ಯಯಮಾಡಿಕೊಳ್ಳಬಾರದಿತ್ತು ಎಂದು ಸಮಾಧಾನ ಮಾಡಿದರೂ ಕೇಳದೆ ತಾವು ಪಡೆದ ಹೆಚ್ಚುವರಿ ಹಣವನ್ನು ವಾಪಸ್ಸು ಮಾಡಿದರು.
ಮತ್ತೊಮ್ಮೆ ಎಂ.ವಿ.ಯವರು ಬೆಂಗಳೂರಿನಲ್ಲಿದ್ದಾಗ ಅವರ ದೇಹಾರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂತು. ಆಗ ಕೂಡಲೇ ಒಬ್ಬ ವೈದ್ಯರನ್ನು ಕಳಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು. ಅದರ ಪ್ರಕಾರ ಒಬ್ಬ ವೈದ್ಯರು ಬಂದು ಸರ್ಕಾರದ ಆದೇಶದ ರೀತಿ ವಿಶ್ವೇಶ್ವರಯ್ಯನವರನ್ನು ಪರೀಕ್ಷಿಸಿ, ಔಷಧೋಪಚಾರ ನಡೆಸಿ ಚಿಕಿತ್ಸೆ ನಡೆಸಿದರು. ಅವರು ಹಿಂದಿರುಗುವಾಗ ವೈದ್ಯರಿಗೆ ಹಣವಿದ್ದ ಲಕೋಟೆಯೊಂದನ್ನು ಎಂ.ವಿ.ಯವರು ನೀಡಿದರು. ಅದನ್ನು ಸ್ವೀಕರಿಸಿ ವೈದ್ಯರು ನಿರ್ಗಮಿಸಿದಾಗ ಎಂ.ವಿ.ಯವರ ಕಾರ್ಯದರ್ಶಿಗಳು, ಸರ್ ಅವರ ಪರಿಚಯವಿಲ್ಲವೆ ಎಂದು ಕೇಳಿದರು. ಇಲ್ಲ ಎಂದಾಗ ಅವರು ಹೇಳಿದರು, ಸರ್ ತಾವು ದಿವಾನರಾಗಿದ್ದಾಗ ಅವರಿಗೆ ವಿದ್ಯಾರ್ಥಿವೇತನ ಕೊಡಿಸಿ ಅವರ ವೈದ್ಯಕೀಯ ಶಿಕ್ಷಣಕ್ಕಾಗಿ ನೆರವಾಗಿದ್ದಿರಿ. ನೀವು ಅಂದು ಮಾಡಿದ ಸಹಾಯಕ್ಕೆ ಇಂದು ಕಿಂಚಿತ್ ಸೇವೆ ಮಾಡಲು ಅವಕಾಶ ದೊರೆಯಿತಲ್ಲಾ ಎಂದು ಕೃತಜ್ಞತೆ ಅರ್ಪಿಸುವ ಬದಲು, ನಿಮ್ಮಿಂದ ಹಣ ತೆಗೆದುಕೊಂಡರಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ವಿಶ್ವೇಶ್ವರಯ್ಯನವರು ಭಾವಪರವಶರಾಗದೆ, ಇರಲಿ ಬಿಡಿ, ಅದು ಅವರ ವೃತ್ತಿ ಧರ್ಮ ಎಂದು ತಮ್ಮ ದೊಡ್ಡತನವನ್ನು ತೋರಿಸಿದರು. ತಾವು ಸಹಾಯ ಮಾಡಿದ ಜನರಿಂದ ಕೃತಜ್ಞತೆ ನಿರೀಕ್ಷಿಸದ ಅವರ ಮನೋಭಾವ ಎಲ್ಲರಿಗೂ ದಾರಿದೀಪವಾಗಿದೆ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.