ದಾನಶೂರ ಪಟ್ಟಾಭಿರಾಮನ್
ಪಟ್ಟಾಭಿರಾಮನ್ ಅವರು ಮದರಾಸಿನಲ್ಲಿದ್ದ ಒಬ್ಬ ಗಣ್ಯರು. ವೃತ್ತಿಯಲ್ಲಿ ಅವರು ಪ್ರಖ್ಯಾತ ವಕೀಲರು. ಸಾಕಷ್ಟು ಶ್ರೀಮಂತರಾಗಿದ್ದ ಅವರು ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಮತ್ತು ಸಂಘಸಂಸ್ಥೆಯವರಿಗೆ ತಾವೇ ಹೋಗಿ ಸಹಾಯಮಾಡುವ ಒಂದು ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದರು. ಒಂದು ಸಂಸ್ಥೆಯ ಉದ್ದೇಶ ಯೋಗ್ಯವೆಂದು ಮತ್ತು ಅಲ್ಲಿರುವವರು ಪ್ರಾಮಾಣಿಕರು ಅನ್ನುವುದನ್ನು ಖಚಿತ ಪಡಿಸಿಕೊಂಡ ಮೇಲೆ ಧಾರಾಳವಾಗಿ ದಾನಮಾಡುತ್ತಿದ್ದರು. ಅವರು ಮದರಾಸಿನ ಭಾರತೀಯ ವಿದ್ಯಾಭವನದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ಟನ್ನು ಜನಪ್ರಿಯಗೊಳಿಸಿದ ವ್ಯಕ್ತಿಗಳಲ್ಲಿ ಪಟ್ಟಾಭಿರಾಮನ್ ಸಹ ಒಬ್ಬರಾಗಿದ್ದಾರೆ.
ಒಮ್ಮೆ ಅವರು ತಮ್ಮ ಗೆಳೆಯ ವಿಶ್ವನಾಥ ಅಯ್ಯರ್ ಒಡನೆ ಮಾತನಾಡುತ್ತಿದ್ದಾಗ ಪಟ್ಟಾಭಿರಾಮನ್, ತಮ್ಮ ವಶದಲ್ಲಿ ಮದರಾಸಿನ ಕಿಲ್ಪಾಕಂ ಪ್ರದೇಶದಲ್ಲಿರುವ ಐದು ಎಕರೆಗಳಷ್ಟು ಬೆಲೆಬಾಳುವ ನಿವೇಶನವನ್ನು ಭಾರತೀಯ ವಿದ್ಯಾಭವನಕ್ಕೆ ದಾನಕೊಡುವುದಾಗಿ ತಿಳಿಸಿದರು. ಅಲ್ಲದೆ ಸುಂದರ ಪರಿಸರದಲ್ಲಿರುವ ಆ ಪ್ರದೇಶವನ್ನು ಸ್ವತಃ ಕರೆದುಕೊಂಡು ಹೋಗಿ ತೋರಿಸಿದರು. ಆಗ ಅಯ್ಯರ್ ಅವರು ಈ ವಿಷಯವನ್ನು ಮುಂಬೈ ಭಾರತೀಯ ವಿದ್ಯಾಭವನಕ್ಕೆ ತಿಳಿಸಿದರು. ಆಗ ಎಸ್.ರಾಮಕೃಷ್ಣನ್ ಮುಂಬೈಯಿಂದ ಮದರಾಸಿಗೆ ಬಂದು ಪಟ್ಟಾಭಿರಾಮನ್ ಅವರ ದಾನಗುಣವನ್ನೂ, ಹೃದಯ ವೈಶಾಲ್ಯವನ್ನೂ ಶ್ಲಾಘಿಸಿದರು. ಅವರು ನೀಡಲಿದ್ದ ನಿವೇಶನವನ್ನು ನೋಡಿ ನಂತರ ಭಾರತೀಯ ವಿದ್ಯಾಭವನದ ಕಾರ್ಯದರ್ಶಿಯವರನ್ನು ಕರೆಸಿ, ಅದನ್ನು ನೊಂದಾಯಿಸಿಕೊಂಡರು. ಅಲ್ಲದೆ ಅಲ್ಲಿ ಶಾಲೆ ಪ್ರಾರಂಭಿಸಲು ಅಗತ್ಯವಾದ ಹಣವನ್ನೂ ಪಟ್ಟಾಭಿರಾಮನ್ ನೀಡಿದರು.
ಆ ಶಾಲೆಗೆ ತಮ್ಮ ಹೆಸರಿಡಲು ನಿರ್ಧರಿಸಿದಾಗ ಅದನ್ನು ನಯವಾಗಿ ತಿರಸ್ಕರಿಸಿ, ರಾಜಾಜಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಅವರ ಹೆಸರನ್ನಿಡಲು ಸಲಹೆ ನೀಡಿದರು. ಅವರ ತಾಯಿ ಭವಾನಿ ಅಮ್ಮಾಳ್ ಅವರ ಹೆಸರನ್ನಾದರೂ ಇಡಲು ಒತ್ತಾಯಸಿದರೂ ಅದಕ್ಕವರು ಸಮ್ಮತಿಸಲಿಲ್ಲ. ಆದರೆ ಭಾರತೀಯ ವಿದ್ಯಾಭವನದವರೇ ಕಿಲ್ಪಾಕಂ ಕ್ಯಾಂಪಸ್‌ಗೆ ಭವಾನಿ ಕ್ಯಾಂಪಸ್ ಎಂದೂ ಶಾಲೆಗೆ ರಾಜಾಜಿಯವರ ಹೆಸರನ್ನೂ ಇಟ್ಟರು. ಅವರ ದಾನಗುಣ ಅಲ್ಲಿಗೇ ನಿಲ್ಲದೆ, ಒಂದು ಆಧ್ಯಾತ್ಮ ಮಂದಿರದ ಸ್ಥಾಪನೆಗಾಗಿ ಮತ್ತೆ ಭಾರತೀಯ ವಿದ್ಯಾಭವನಕ್ಕೆ ಹಣ ನೀಡಿದರು. ಅಲ್ಲದೆ ಕೆಲವು ಪುಸ್ತಕಗಳ ಪ್ರಕಟಣೆಗೂ ನೆರವಾದರು. ಆದರೆ ಎಲ್ಲಿಯೂ ಅವರ ಹೆಸರು ಬಾರದಂತೆ ಎಚ್ಚರಿಕೆ ವಹಿಸಿದರು. ಇಂದು ದೇವಾಲಯಗಳಿಗೆ ಒಂದು ಟ್ಯೂಬ್‌ಲೈಟ್ ನೀಡಿದರೂ ಅದರ ತುಂಬಾ ಹೆಸರು ಬರೆಸಿ ನೀಡುವ ಜನರ ಮಧ್ಯೆ ಕೋಟ್ಯಂತರ ಬೆಲೆಬಾಳುವ ಆಸ್ತಿಯನ್ನು ದಾನಮಾಡಿದರೂ ತಮ್ಮ ಹೆಸರು ಪ್ರಕಟವಾಗದಂತೆ ಎಚ್ಚರವಹಿಸುವ ಪಟ್ಟಾಭಿರಾಮನ್ ಅವರಂತಹ ನಿಷ್ಕಾಮ ದಾನಿಗಳು ತುಂಬಾ ಅಪರೂಪ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

