ಸಂಪಾದಕೀಯ

ರೈತರಿಗಿಲ್ಲದ ಜಾಗ ನನಗೇಕೆ?

Published On :

ಥಾಮಸ್ ಜಫರ್ಸನ್ ಅಮೆರಿಕದ ಮೂರನೇ ರಾಷ್ಟ್ರಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಅಮೆರಿಕದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಜೆಫರ್ಸನ್ 1776 ರ ಅಮೆರಿಕ ಸ್ವಾತಂತ್ರ್ಯ ಘೋಷಣೆಯ ಮೂಲಕತೃ ಎನಿಸಿದ್ದಾರೆ. ರಾಷ್ಟ್ರಾಧ್ಯಕ್ಷರಾಗುವ ಮೊದಲು ಅವರು ವರ್ಜೀನಿಯಾದ ರಾಜ್ಯಪಾಲರಾಗಿ, ರಾಜತಂತ್ರಜ್ಞರಾಗಿ, ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದರು. ಅಮೆರಿಕದ ಮೊದಲ ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ನ ಮಂತ್ರಿಮಂಡಲದ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ ಜೆಫರ್ಸನ್ ಅತ್ಯಂತ ಸರಳರೂ, ದೇಶಾಭಿಮಾನಿಗಳೂ, ಸಾಮಾಜಿಕ ಕಾರ್ಯಗಳಲ್ಲಿ ಕಾಳಜಿ ಉಳ್ಳವರೂ ಆಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ರೈತರಾಗಿದ್ದರು. ಅವರಿಗೆ ಆಗಲೇ ಎರಡು ಸಾವಿರ ಹೆಕ್ಟೇರಿನಷ್ಟು ಜಮೀನು ಇತ್ತು. ಇಷ್ಟೆಲ್ಲಾ ಇದ್ದರೂ ಅವರು ಸರಳತೆಯನ್ನು ಇಷ್ಟಪಡುತ್ತಿದ್ದರು. ಹಣ ಮತ್ತು ಅಧಿಕಾರಗಳೆರಡೂ ಶಾಶ್ವತವಲ್ಲ ಎಂಬ ಸತ್ಯವನ್ನರಿತಿದ್ದ ಜೆಫರ್ಸನ್ ರೈತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.
ಅಮೆರಿಕದ ರಾಷ್ಟ್ರಾಧ್ಯಕ್ಷರಾದ ಹೊಸದರಲ್ಲಿ ಒಮ್ಮೆ ತಮ್ಮ ಎಂದಿನ ರೈತನ ಉಡುಪಿನಲ್ಲಿ ನಗರವೊಂದಕ್ಕೆ ಖಾಸಗಿ ಭೇಟಿ ನೀಡಿದರು. ಆಗ ಅವರೊಡನೆ ಅಂಗರಕ್ಷಕರೂ ಇರಲಿಲ್ಲವಾದ್ದರಿಂದ ಅವರು ಅಮೆರಿಕ ರಾಷ್ಟ್ರಾಧ್ಯಕ್ಷರೆಂದು ಯಾರೂ ಗುರುತಿಸುವಂತೆಯೂ ಇರಲಿಲ್ಲ.  ಆ ನಗರದಲ್ಲಿಯ ಒಂದು ವೈಭವೋಪೇತ ಹೊಟೇಲಿಗೆ ಹೋಗಿ ತಮಗೆ ಅಲ್ಲಿ ಉಳಿಯಲು ಒಂದು ಕೊಠಡಿ ನೀಡಬೇಕೆಂದು ಕೇಳಿದರು. ಸಾಮಾನ್ಯ ರೈತನ ಉಡುಪಿನಲ್ಲಿದ್ದ ಜೆಫರ್ಸನ್ ಅವರನ್ನು ನೋಡಿದ ಹೊಟೇಲ್ ಸಿಬ್ಬಂದಿ ತಮ್ಮಂತಹ ಸಾಮಾನ್ಯರಿಗೆ ಈ ಹೊಟೇಲ್‌ನಲ್ಲಿ ಜಾಗವಿಲ್ಲ ಎಂದು ಹೊರಕಳುಹಿಸಿದನು.
ಆಗ ಅವರು ಮರುಮಾತನಾಡದೆ ಬೇರೊಂದು ಹೊಟೇಲ್‌ನಲ್ಲಿ ಕೊಠಡಿ ಪಡೆದುಕೊಂಡು ಇದ್ದುಬಿಟ್ಟರು. ನಂತರ ಮೊದಲ ಹೊಟೇಲ್ ಮಾಲೀಕನಿಗೆ ತಮ್ಮ ಹೊಟೇಲ್‌ಗೆ ಬಂದವರು ಅಮೆರಿಕದ ರಾಷ್ಟ್ರಪತಿ, ಅವರಿಗೆ ತಮ್ಮ ಹೊಟೇಲ್‌ನಲ್ಲಿ ಉಳಿಯಲು ಅವಕಾಶ ನೀಡಲಿಲ್ಲವಲ್ಲಾ ಎಂದು ತಿಳಿದು ತುಂಬಾ ನೊಂದುಕೊಂಡನು. ತಕ್ಷಣ ತಾನೇ ಖುದ್ದಾಗಿ ಜೆಫರ್ಸನ್ ಇದ್ದ ಹೊಟೇಲ್‌ಗೆ ಹೋಗಿ, ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ, ತಮ್ಮ ಹೊಟೇಲ್‌ಗೆ ಮರಳಬೇಕೆಂದೂ, ಅಲ್ಲಿ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆಯೆಂದೂ ಅಂಗಲಾಚಿ ಕೇಳಿಕೊಂಡನು. ಆಗ ಜೆಫರ್ಸನ್, ಯಾವ ಹೊಟೇಲ್‌ನಲ್ಲಿ ರೈತನಿಗೆ ಸ್ಥಳವಿಲ್ಲವೋ, ಅಲ್ಲಿ ಅಮೆರಿಕದ ರಾಷ್ಟ್ರಾಧ್ಯಕ್ಷ ಹೇಗಿರಬಲ್ಲ ಎಂದು ತಿಳಿಸಿ ಅವನನ್ನು ವಾಪಸ್ಸು ಕಳುಹಿಸಿದರು. ಇದು ಅವರಿಗೆ ಸಾಮಾನ್ಯ ರೈತನ ಬಗ್ಗೆ ಇದ್ದ ಕಾಳಜಿಯನ್ನೂ, ಅವರ ಸರಳತೆಯನ್ನೂ ಎತ್ತಿ ತೋರಿಸುತ್ತದೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.