ಸಂಪಾದಕೀಯ

ಅವನ ಅದೃಷ್ಟ ಹೆಚ್ಚು ಹಣ ಕೂಡಿದೆ

Published On :

ಮೋತೀಲಾಲ್ ನೆಹರೂ ಅವರು ಅಲಹಾಬಾದಿನ ಪ್ರಸಿದ್ಧ ವಕೀಲರಾಗಿದ್ದರು. ಅವರು ಮೊದಲು ತಮ್ಮ ವಕೀಲಿ ವೃತ್ತಿಯನ್ನು ಕಾನ್ಪುರದಲ್ಲಿ ಪ್ರಾರಂಭಿಸಿ ನಂತರ ಅಲಹಾಬಾದಿನಲ್ಲಿ ನೆಲೆಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಹಲವಾರು ಬಾರಿ ಸೆರೆಮನೆವಾಸವನ್ನೂ ಅನುಭವಿಸಿದರು. ಇವರ ಮಗ ಜವಾಹರಲಾಲ್ ನೆಹರೂ ಅವರೂ ಸಹ ಸ್ವಾತಂತ್ರ್ಯಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದರು. ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಂತರ 1923ರ ವೇಳೆಗೆ ಕೇಂದ್ರ ಶಾಸನ ಸಭೆಗೆ ಆಯ್ಕೆಯಾದರು. ಗಾಂಧೀಜಿಯವರ ಕರೆಯ ಮೇರೆಗೆ ಸ್ವದೇಶಿ ಉಡುಪುಗಳನ್ನು ಧರಿಸಲು ತೊಡಗಿದ್ದೇ ಅಲ್ಲದೆ, ಸ್ವದೇಶಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನಂತರ ಸ್ವತಂತ್ರ ಪಕ್ಷ ಕಟ್ಟಲು ನೆರವಾದರು.
ಮೋತೀಲಾಲರು ಅಲಹಾಬಾದಿನಲ್ಲಿದ್ದಾಗ ಒಮ್ಮೆ ತಮ್ಮ ಕಚೇರಿಯಲ್ಲಿ ಕುಳಿತು ಯಾವುದೋ ಮೊಕದ್ದಮೆ ವಿಚಾರವಾಗಿ ಚರ್ಚಿಸುತ್ತಿದ್ದರು. ಆಗ ಬಡಬ್ರಾಹ್ಮಣನೊಬ್ಬ ಅಲ್ಲಿಗೆ ಬಂದು ಮೋತೀಲಾಲರಿಗೆ ನಮಸ್ಕರಿಸಿದ. ಅವನು ಬಂದ ಕಾರಣವನ್ನು ವಿಚಾರಿಸಿದಾಗ, ತಾನು ಮಗಳ ಮದುವೆ ಮಾಡಲು ನಿಶ್ಚಯಿಸಿರುವುದಾಗಿಯೂ ವಿವಾಹದ ಖರ್ಚಿಗಾಗಿ ಸಹಾಯಮಾಡಬೇಕೆಂದು ವಿನಯಪೂರ್ವಕವಾಗಿ ಕೇಳಿಕೊಂಡನು. ವಿವಾಹಕ್ಕಾಗಿ ಆಗುವ ವೆಚ್ಚವೆಷ್ಟೆಂದು ಮೋತೀಲಾಲರು ಪ್ರಶ್ನಿಸಿದಾಗ ಸುಮಾರು ಮುನ್ನೂರು ರುಪಾಯಿಗಳಾಗಬಹುದೆಂಬ ಉತ್ತರ ಬಂತು. ಆದಿನ ಎಷ್ಟು ಗಳಿಕೆಯಾಗುತ್ತದೆಯೋ ಅಷ್ಟನ್ನೂ ನೀಡಲು ತಮ್ಮ ಗುಮಾಸ್ತರಿಗೆ ಹೇಳಿ, ಸಂಜೆ ಬಂದು ಹಣ ಪಡೆದುಕೊಂಡು ಹೋಗಲು ಬ್ರಾಹ್ಮಣನಿಗೆ ತಿಳಿಸಿದರು. ಆದಿನ ಸಂಜೆ  ಸಂಗ್ರಹವಾದ ಹಣವನ್ನು ಎಣಿಸಿದಾಗ ಸಾವಿರದ ಮುನ್ನೂರು ರುಪಾಯಿ ಸಂಗ್ರಹವಾಗಿರುವುದು ತಿಳಿದುಬಂತು. ಆಗ ಗುಮಾಸ್ತನು ಅದರಲ್ಲಿ ಮುನ್ನೂರು ರುಪಾಯಿ ಮಾತ್ರ ಆ ಬ್ರಾಹಣನಿಗೆ ಕೊಡಲು ಮುಂದಾದಾಗ ಮೋತೀಲಾಲರು ಅಂದು ಬೆಳಿಗ್ಗೆ ಮಾತು ಕೊಟ್ಟಂತೆ ಎಲ್ಲ ಹಣವನ್ನೂ ಆ ಬ್ರಾಹ್ಮಣನಿಗೆ ನೀಡಲು ತಿಳಿಸಿದರು. ಇಂದಿನ ದುಡಿಮೆಯ ಹಣವನ್ನು ಆತನಿಗೆ ನೀಡಬೇಕೆಂದು ಸಂಕಲ್ಪಿಸಲಾಗಿತ್ತು. ಅವನ ಅದೃಷ್ಟ, ಹೆಚ್ಚು ಹಣ ಕೂಡಿದೆ. ಅದನ್ನು ಅವನ ಮಗಳ ವಿವಾಹಕ್ಕಾಗಿ ವೆಚ್ಚಮಾಡಲಿ ಎಂದು ಹೇಳಿದರು. 1890ರ ವೇಳೆಯಲ್ಲಿ ಇಷ್ಟು ಹಣ ಅತಿ ಹೆಚ್ಚು ಎಂದೇ ತಿಳಿಯಬಹುದು. ಈ ಘಟನೆಯಿಂದ ಮೋತೀಲಾಲರ ವ್ಯಕ್ತಿತ್ವದ ಪರಿಚಯ ಉಂಟಾಗುತ್ತದಲ್ಲದೆ, ಅವರಿಗೆ ಬಡವರ ಬಗ್ಗೆ ಇದ್ದ ಕಾಳಜಿಯನ್ನು ತೋರಿಸುತ್ತದೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.