ರಾಜರ ಆಜ್ಞೆಯನ್ನು ಮಾತ್ರ ಪಾಲಿಸುವೆ (ಹಿರಿಯರ ಹಾದಿ)
1915ರ ಸಮಯ. ನವೀನಂ ರಾಮಾನುಜಾಚಾರ್ಯ ಎಂಬ ಸಂಸ್ಕೃತ ವಿದ್ವಾಂಸರಿದ್ದರು. ವೇದೋಪನಿಷತ್ತುಗಳನ್ನವರು ಆಳವಾಗಿ ಅಧ್ಯಯನ ಮಾಡಿ ಅಪ್ರತಿಮ ಪಂಡಿತರೆಂದು ಹೆಸರು ಗಳಿಸಿದ್ದರು. ಅವರಲ್ಲಿ ಸಂಸ್ಕೃತ ಕಲಿಯಲು ಅನೇಕ ರಾಜಮಹಾರಾಜರುಗಳು ಅವರನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದೂ ಇದೆ. ಉತ್ತರ ಭಾರತದ ಕೆಲವು ರಾಜರುಗಳ ಆಸ್ಥಾನ ವಿದ್ವಾಂಸರಾಗಿ ಸೇವೆ ಸಲ್ಲಿಸಿ ಕೊನೆಗೆ ಮೈಸೂರಿಗೆ ಬಂದು ನೆಲಸಿದರು. ಇವರ ಪಾಂಡಿತ್ಯ ಮತ್ತು ಜ್ಞಾನಕ್ಕೆ ತಲೆಬಾಗಿದ ಮೈಸೂರು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ನವೀನಂ ಅವರಿಂದ ಸಂಸ್ಕೃತಾಭ್ಯಾಸ ಮಾಡಿದ್ದರು.
ಒಮ್ಮೆ ಉತ್ತರದೇಶದ ಸಂಸ್ಥಾನವೊಂದರ ರಾಜರ ಆಸ್ಥಾನದಲ್ಲಿದ್ದಾಗ ಅಲ್ಲಿನ ರೆಸಿಡೆಂಟ್ ಆಗಿದ್ದ ಫ್ರಾನ್ಸಿಸ್ ಯಂಗ್ ಹಸ್ಬೆಂಡ್ ದಂಪತಿ ಸಂಸ್ಕೃತ ಕಲಿಯಲು ಆಸಕ್ತಿ ತೋರಿಸಿದರು. ಆಗ ಅಲ್ಲಿನ ಸಂಸ್ಥಾನದ ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ನವೀನಂ ಅವರನ್ನು ಈ ಕೆಲಸಕ್ಕಾಗಿ ನಿಯೋಜಿಸಿದ್ದರು. ಮುಂದೆ ಈ ಫ್ರಾನ್ಸಿಸ್, ರಾಯಲ್ ಜಿಯಾಗ್ರಫಿಕ್ ಸೊಸೈಟಿಯ ಅಧ್ಯಕ್ಷರೂ ಆದರು. ಎರಡು ವರ್ಷಗಳ ಕಾಲ ಈ ದಂಪತಿಗಳು ಅತ್ಯಂತ ಶ್ರದ್ಧೆಯಿಂದ ಸಂಸ್ಕೃತ ಕಲಿತು ಗ್ರಂಥಗಳನ್ನು ಓದುವ ಮಟ್ಟಿಗೆ ಜ್ಞಾನ ಸಂಪಾದಿಸಿದರು. ಒಂದು ದಿನ ಸಂಸ್ಕೃತಾಭ್ಯಾಸ ಮುಗಿದ ಮೇಲೆ ಆ ಸಾಹೇಬರು, ತಾನು ದೀರ್ಘಕಾಲದ ರಜೆಯ ಮೇಲೆ ವಿಲಾಯಿತಿಗೆ ಹೋಗಲಿರುವುದರಿಂದ ತಾವು ನವೀನಂ ಅವರಿಗೆ ತಮ್ಮ ಕೃತಜ್ಞತೆಗಳನ್ನು ಅರ್ಪಿಸಬೇಕೆಂಬ ವಿಚಾರವನ್ನು ತಿಳಿಸಿದರು. ತಾವು ನೀಡುವ ಗುರುದಕ್ಷಿಣೆಯನ್ನು ಸ್ವೀಕರಿಸಬೇಕೆಂದು ವಿನಂತಿಸಿದರು. ಒಂದು ತಟ್ಟೆಯಲ್ಲಿ ಫಲತಾಂಬೂಲದ ಜೊತೆ ಐದುಸಾವಿರ ರುಪಾಯಿಗಳನ್ನು ಇಟ್ಟು ತೆಗೆದುಕೊಳ್ಳಲು ಮನವಿಮಾಡಿದರು. ಆದರೆ ರಾಮಾನುಜಾಚಾರ್ಯರು ಅವರು ನೀಡಿದ ಹಣವನ್ನು ಸ್ವೀಕರಿಸದೆ, 'ದಯಮಾಡಿ ಕ್ಷಮಿಸಬೇಕು. ನಾನು ನನ್ನ ರಾಜನ ಆಜ್ಞೆಯನ್ನು ಮಾತ್ರ ನಡೆಸಿಕೊಂಡು ಬಂದಿದ್ದೇನೆ. ತಮ್ಮಿಂದ ಯಾವ ಸಂಭಾವನೆಯನ್ನೂ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ' ಎಂದುಬಿಟ್ಟರು. ಅರಮನೆಗೆ ಬಂದು ಎಲ್ಲ ವಿಚಾರಗಳನ್ನೂ ಮಹಾರಾಜನಿಗೆ ವರದಿ ಮಾಡಿದರು. ಅದಕ್ಕೆ ರಾಜನು ತುಂಬಾ ಸಂತೋಷಪಟ್ಟು, ಪಂಡಿತರೇ ನೀವು ಅವರಿಂದ ಸಂಭಾವನೆ ಪಡೆಯದೆ ನಮ್ಮ ಗೌರವವನ್ನು ಕಾಪಾಡಿದಿರಿ ಎಂದು ತುಂಬಾ ಶ್ಲಾಘಿಸಿದ್ದೇ ಅಲ್ಲದೆ, ತಾವೇ ಸ್ವತಃ ಒಂದು ತಟ್ಟೆಯಲ್ಲಿ ಹತ್ತು ಸಾವಿರ ರುಪಾಯಿಗಳನ್ನು ಫಲತಾಂಬೂಲದ ಜೊತೆಗೆ ಕಾಣಿಕೆಯಾಗಿ ನೀಡಿದರು.ಇದು ಆಗಿನ ಕಾಲಕ್ಕೆ ಬಹುದೊಡ್ಡ ಮೊತ್ತವಾಗಿತ್ತು. ನಂತರ ನವೀನಂ ಅವರು ಮೈಸೂರಿಗೆ ಬಂದು ವಿವಾಹವಾಗಿ ಇಲ್ಲಿಯೇ ನೆಲೆಸಿದರು. ತಾವು ಗಳಿಸಿದ ಹಣವನ್ನು ಅನೇಕ ಧರ್ಮಕಾರ್ಯಗಳಿಗೆ ವಿನಿಯೋಗಿಸಿ ಜೀವನ ಸಾರ್ಥಕ್ಯವನ್ನು ಪಡೆದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

