ಸಂಪಾದಕೀಯ

ನ್ಯಾಯಾಧೀಶರ ಕೊನೆಯ ಆಸೆ ಏನಾಗಿತ್ತು?

Published On :

ಬಂಗಾಳದಲ್ಲಿ ಹಿಂದೆ ನೀಲಮಾಧವ ಬಂದೋಪಾಧ್ಯಾಯ ಎಂಬ ನ್ಯಾಯಾಧೀಶರಿದ್ದರು. ಸದಾನಿಷ್ಠರೂ, ಸತ್ಯವಾದಿಗಳೂ, ಪ್ರಾಮಾಣಿಕರೂ ಆಗಿದ್ದರು. ಅವರ ನ್ಯಾಯತೀರ್ಮಾನವೆಂದೂ ಪಕ್ಷಪಾತದಿಂದ ಕೂಡಿರುತ್ತಿರಲಿಲ್ಲ. ಹೀಗಾಗಿ ಸಮಾಜದಲ್ಲಿ ಗೌರವವನ್ನೂ, ಜನಪ್ರೀತಿಯನ್ನೂ ಗಳಿಸಿದ್ದರು. ತಮ್ಮ ಇಡೀ ಸೇವಾವಧಿಯಲ್ಲಿ ಸತ್ಯಕ್ಕೆ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದರು.
ಬಂದೋಪಾಧ್ಯಾಯರ ಕೊನೆಯ ದಿನಗಳವು. ಇನ್ನೇನು ಅವರು ಇಹಲೋಕ ತ್ಯಜಿಸುತ್ತಾರೆ ಎಂದು ತಿಳಿದು ಅವರ ಗೆಳೆಯರು, ಬಂಧುಗಳು ಒಬ್ಬೊಬ್ಬರೇ ಬಂದು ಅವರನ್ನು ಮಾತನಾಡಿಸಿ ಹೋಗುತ್ತಿದ್ದರು. ಅವರಲ್ಲಿ ಒಬ್ಬರು 'ಮಹಾಶಯರೇ, ನಿಮ್ಮ ಕೊನೆ ಆಸೆ ಏನಾದರೂ ಇದೆಯೇ?' ಎಂದು ಕೇಳಿದರು. ಆಗ ಬಂದೋಪಾಧ್ಯಾಯರು ತಕ್ಷಣ ವಿಮಾ ಕಂಪನಿಯ ಪ್ರತಿನಿಧಿಯನ್ನು ಕರೆಸಲು ತಿಳಿಸಿದರು. ವಿಮಾಪ್ರತಿನಿಧಿ ಆಗಮಿಸಿ, ತನ್ನಿಂದ ಏನು ಸೇವೆಯಾಗಬೇಕು ಎಂದು ವಿನೀತನಾಗಿ ಕೇಳಿದ. ಅದಕ್ಕೆ ಬಂದೋಪಾದ್ಯಾಯರು ತಮ್ಮ ವಿಮಾಪಾಲಿಸಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಕೇಳಿಕೊಂಡರು. ಆರ್ಶ್ಚರ್ಯಗೊಂಡ ವಿಮಾಪ್ರತಿನಿಧಿ ಅದಕ್ಕೆ ಕಾರಣ ಕೇಳಿದ. ಆಗ ನ್ಯಾಯಾಧೀಶರು, 'ಈ ಹಿಂದೆ ನಾನು ವಿಮೆ ಇಳಿಸುವಾಗ ನನಗೊಂದು ಭೀಕರ ರೋಗ ತಗಲಿದ್ದನ್ನು ಮರೆಮಾಚಿದ್ದೆ. ಅದಕ್ಕಾಗಿ ನನಗೀಗ ಪಶ್ಚಾತ್ತಾಪವಾಗುತ್ತಿದೆ. ನಾನೀಗ ಮರಣ ಹೊಂದಿದರೆ ನನ್ನ ಕುಟುಂಬದವರಿಗೆ ಆ ವಿಮಾಹಣ ದೊರೆಯುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾನು ವಿಮಾಹಣವನ್ನು ಪಡೆಯಲು ಇಚ್ಛಿಸುವುದಿಲ್ಲ. ಆದ್ದರಿಂದ ನನ್ನ ಪಾಲಿಸಿಯನ್ನೂ ಕೂಡಲೇ ರದ್ದುಗೊಳಿಸಿ ನನ್ನನ್ನು ಸಂಕಟದಿಂದ ಪಾರು ಮಾಡಬೇಕು' ಎಂದು ವಿನಂತಿಸಿದರು. ವಿಮಾಪ್ರತಿನಿಧಿಗೆ ಅಚ್ಚರಿಯ ಜೊತೆ ಇಂತಹ ಸ್ವಚ್ಛ ಮನಸ್ಸಿನ ವ್ಯಕ್ತಿಗಳೂ ಇದ್ದಾರಲ್ಲಾ ಎಂದು ಸಂತೋಷವಾಯಿತು. ಅವರ ಬಗ್ಗೆ ಇದ್ದ ಗೌರವ ನೂರ್ಮಡಿಯಾಯಿತು. ಅವನು ಅದೊಂದು ಸಣ್ಣ ವಿಷಯವಾಗಿರುವುದರಿಂದ ಬಂದೋಪಾಧ್ಯಾಯರು ನಿಶ್ಚಿಂತೆಯಿಂದ ಇರಲು ಮತ್ತು ವಿಮಾಸೌಲಭ್ಯ ಹೊಂದಲು ಮನವಿ ಮಾಡಿಕೊಂಡರು. ಆದರೆ ಇವರು ಕೇಳಬೇಕಲ್ಲಾ! ತನ್ನನ್ನು ಕಾಡುತ್ತಿರುವ ಪಾಪಪ್ರಜ್ಞೆಯಿಂದ ಮುಕ್ತಿ ದೊರೆಯಬೇಕಾದರೆ ಮತ್ತು ನಿಶ್ಚಿಂತೆಯಿಂದ ಪ್ರಾಣಬಿಡಬೇಕಾದರೆ ವಿಮಾ ಪಾಲಿಸಿಯನ್ನು ರದ್ದುಗೊಳಿಸುವುದೇ ಸರಿಯಾದ ಮಾರ್ಗ ಎಂದು ವಾದಿಸಿದರು. ಅವರ ಸತ್ಯನಿಷ್ಠೆ ಅಲ್ಲಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ಅವರ ಆಶಯದಂತೆ ಅವರ ವಿಮಾಪಾಲಿಸಿಯನ್ನು ರದ್ದುಮಾಡಲಾಯಿತು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.