ಸ್ನೇಹಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ
ಅಪೂರ್ವ ಗೆಳೆತನದ ಅನೇಕ ಕಥೆಗಳನ್ನು ನಾವು ಕೇಳಿರಬಹುದು. ಶ್ರೀಕೃಷ್ಣ-ಕುಚೇಲ, ದುರ್ಯೋಧನ- ಕರ್ಣ ಇವರ ಸ್ನೇಹ ಹೇಗಿತ್ತೆಂಬುದು ನಿಮಗೆ ತಿಳಿದಿರಬಹುದು. ಹಾಗೆಯೇ ಈ ಯುಗದಲ್ಲೂ ಇಂತಹ ಅನೇಕ ಕಥೆಗಳಿವೆ. ಅದರಲ್ಲಿ ಒಂದು ಹೀಗಿದೆ.
ಜಪಾನಿನ ಸ್ಯೂ ಓಯಿ ಮತ್ತು ಶೂಹಿ ನಿಷಿದಾ ಎಂಬ ಗೆಳೆಯರು ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಇಬ್ಬರೂ ಪೋಲ್ ವಾಲ್ಟ್ ಕ್ರೀಡೆಯಲ್ಲಿ ಪರಿಣತರೇ. ಒಂದೇ ಕಡೆ ತರಬೇತಿ ಪಡೆದು 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ತುಂಬಾ ಪೈಪೋಟಿ ಇದ್ದ ಆ ಸ್ಫರ್ಧೆಯಲ್ಲಿ ಚಿನ್ನದ ಪದಕವನ್ನು ಅಮೆರಿಕದ ಎಲರ್ ಮೆಡೋಸ್ ಎಂಬುವವನು 4.35 ಮೀಟರ್ ಜಿಗಿದು ಪಡೆದನು. ಇನ್ನು ಎರಡನೇ ಸ್ಥಾನ(ಬೆಳ್ಳಿ ಪದಕ)ಕ್ಕಾಗಿ ಈ ಇಬ್ಬರು ಗೆಳೆಯರೊಡನೆ ಸೆಣಸಾಟ ನಡೆದಿತ್ತು. ಐದು ಗಂಟೆಗಳ ಕಾಲ ಈ ಸ್ಫರ್ಧೆಯನ್ನು ಎಷ್ಟುಬಾರಿ ನಡೆಸಿದರೂ ಅದು ಟೈ ಆಯಿತು. ಇಬ್ಬರೂ 4.25 ಮೀಟರ್ ಜಿಗಿದಿದ್ದರು. ಆಗ ಯಾರಿಗೆ ಬೆಳ್ಳಿ ಪದಕ ನೀಡಬೇಕೆಂಬ ಗೊಂದಲ ಉಂಟಾಯಿತು. ಇಬ್ಬರೂ ಸಮಾನ ವೀರರೇ. ಕೊನೆಗೆ ನಿಷಿದಾ ಮೊದಲ ಜಿಗಿತದಲ್ಲಿಯೇ ಈ ಸಾಧನೆ ಮಾಡಿದ್ದನಾದ್ದರಿಂದ ಅವನಿಗೆ ರಜತ ಪದಕವನ್ನೂ, ಓಯೆ ಎರಡನೇ ಜಿಗಿತದಲ್ಲಿ ಈ ಸಾಧನೆ ಮಾಡಿದ್ದರಿಂದ ಕಂಚಿನ ಪದಕವನ್ನೂ ನೀಡಲಾಯಿತು. ಇದರಿಂದ ಅವರಿಗೂ ಸಮಾಧಾನವಾಯಿತು. ಇಬ್ಬರು ಗೆಳೆಯರೂ ಸಂತೋಷದಿಂದ ತಾವು ಗೆದ್ದ ಪದಕಗಳೊಡನೆ ತಮ್ಮ ತವರಿಗೆ ಮರಳಿದರು. ಜಪಾನಿಗೆ ವಾಪಸ್ಸಾದ ಮೇಲೆ ಅವರು ಮೊದಲು ಮಾಡಿದ ಕೆಲಸವೆಂದರೆ, ಒಬ್ಬ ಚಿನಿವಾರನ ಬಳಿ ಹೋಗಿದ್ದು. ಅಲ್ಲಿ ತಮ್ಮ ಪದಕಗಳನ್ನು ನೀಡಿ ಸರಿಯಾಗಿ ಅವುಗಳನ್ನು ಎರಡು ಭಾಗಗಳಾಗಿ ಕತ್ತರಿಸಿಕೊಡಲು ತಿಳಿಸಿದರು. ನಂತರ ಆ ಇಬ್ಬರೂ ಗೆಳೆಯರು ಅರ್ಧರ್ಧ ಪದಕವನ್ನು ತಮ್ಮಲ್ಲಿ ಬದಲಾಯಿಸಿಕೊಂಡರು. ಆಗ ಅವರಿಬ್ಬರ ಬಳಿಯೂ ಅರ್ಧ ರಜತ ಪದಕ, ಅರ್ಧ ಕಂಚಿನ ಪದಕ ಉಳಿಯಿತು. ಅದನ್ನವರು ಗೆಳೆತನದ ಪದಕ ಎಂದು ಕರೆದರು. ಇದು ಅವರ ಸ್ನೇಹದ ದ್ಯೋತಕವಾಗಿತ್ತು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ, ನಾವಿಬ್ಬರೂ ಪ್ರಾಣ ಸ್ನೇಹಿತರು. ನಮಗೆ ಬಂದ ಪದಕಗಳನ್ನು ನಮ್ಮ ಕಷ್ಟ ಸುಖಗಳಂತೆ ಸರಿಯಾಗಿ ಹಂಚಿಕೊಂಡಿದ್ದೇವೆ. ಏಕೆಂದರೆ ಸ್ನೇಹಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

