ಹಳ್ಳಿಯ ಹೈದ ಶ್ರೀಮಂತನಾದದ್ದು ಹೇಗೆ?
ರಾಜಸ್ಥಾನದ ಒಂದು ಪುಟ್ಟ ಹಳ್ಳಿ ಸಾದಲಪುರದಲ್ಲಿ ಜನಿಸಿದ ಒಬ್ಬ ಬಡ ಬಾಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸುವುದೆಂದರೆ...
ರಾಜಸ್ಥಾನದ ಒಂದು ಪುಟ್ಟ ಹಳ್ಳಿ ಸಾದಲಪುರದಲ್ಲಿ ಜನಿಸಿದ ಒಬ್ಬ ಬಡ ಬಾಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸುವುದೆಂದರೆ ಇದೊಂದು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ ವಿಷಯ. ಕಲ್ಕತ್ತದ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಲಕ್ಷ್ಮಿ ಮಿತ್ತಲ್ ಅವರೇ ಈ ವ್ಯಕ್ತಿ. ಲಕ್ಷ್ಮಿ ಮಿತ್ತಲ್ ಅವರ ತಂದೆ ಮೋಹನ್ ಮಿತ್ತಲ್ ಮೊದಲು ಸಾದಲಪುರದ ನಿವಾಸಿಯಾಗಿ, ದೊಡ್ಡ ಕುಟುಂಬದ ಸದಸ್ಯರಾಗಿದ್ದವರು. ಅಷ್ಟೇನೂ ಅನುಕೂಲಸ್ಥರಾಗಿರದ ಅವರಿಗೆ ಅಲ್ಲಿ ಜೀವನ ನಡೆಸುವುದು ಕಷ್ಟವೆಂದು ತೋರಿ ಕಲ್ಕತ್ತಕ್ಕೆ ವಲಸೆ ಹೋದರು. ಅಲ್ಲಿ ಸಣ್ಣಕೈಗಾರಿಕೆಯೊಂದನ್ನು ಸ್ಥಾಪಿಸಿ ಕೈಗಾರಿಕೋದ್ಯಮಿಯಾದರು. ನಂತರ ಅವರು ಒಂದು ಉಕ್ಕು ಕಾರ್ಖಾನೆ ಸ್ಥಾಪಿಸಲು ಸ್ವಲ್ಪ ಜಾಗವನ್ನು ಇಂಡೋನೇಷ್ಯಾದಲ್ಲಿ ಕೊಂಡಿದ್ದರು. ಆದರೆ ಅದಕ್ಕೆ ತುಂಬಾ ಬಂಡವಾಳ ಬೇಕಾಗಿದ್ದರಿಂದ ಅದನ್ನು ಮಾರಲು ನಿರ್ಧರಿಸಿದರು. ಆದರೆ, ಲಕ್ಷ್ಮಿ ಮಿತ್ತಲ್ ಅವರ ಯೋಚನೆಯೇ ಬೇರೆಯಾಗಿತ್ತು. 1977ರಲ್ಲಿ ಅಲ್ಲೊಂದು ಕಾರ್ಖಾನೆ ಪ್ರಾರಂಭ ಮಾಡಲು ನಿರ್ಧರಿಸಿದರು. ಅದು ಲಾಭಗಳಿಸಲು ಪ್ರಾರಂಭಿಸಿದಾಗ ಅವರ ಆತ್ಮವಿಶ್ವಾಸ ಹೆಚ್ಚಿತಲ್ಲದೆ, ಇನ್ನೂ ಹೆಚ್ಚು ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾದರು. ವಿವಿಧ ದೇಶಗಳಲ್ಲಿ ನಷ್ಟದಲ್ಲಿ ನಡೆಯುತ್ತಿದ್ದ ಉಕ್ಕಿನ ಕಾರ್ಖಾನೆಗಳನ್ನು ಕೊಂಡು ಅದನ್ನು ಲಾಭದಾಯಕವಾಗಿ ಮಾಡಿ ಅದರಿಂದ ಅಪಾರ ಸಂಪತ್ತು ಗಳಿಸಿದರು. ಇಂದು ಮಿತ್ತಲ್ ಅವರ ಕಾರ್ಖಾನೆಗಳು ಮೆಕ್ಸಿಕೊ, ಅಮೆರಿಕ, ಆಫ್ರಿಕಾ, ಏಷ್ಯಾ, ಟ್ರಿನಿಡಾಡ್ ಮುಂತಾದ ಹದಿನಾಲ್ಕು ದೇಶಗಳಲ್ಲಿ ಸ್ಥಾಪಿತವಾಗಿ ಅವರು ವಿಶ್ವದ ಉಕ್ಕಿನ ದೊರೆ ಎನಿಸಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿರುವ ಮಿತ್ತಲ್, ಇಂಗ್ಲೆಂಡಿನ ಶ್ರೀಮತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿಯ ಬೆಲೆಯೇ 16 ಬಿಲಿಯನ್ ಡಾಲರ್‌ಗಳಷ್ಟಿದೆ. ಇಂಗ್ಲೆಂಡಿನಲ್ಲಿ 70 ಮಿಲಿಯನ್ ಯೂರೋ ಬೆಲೆಬಾಳುವ ಬಂಗಲೆಯಲ್ಲಿ ವಾಸವಾಗಿರುವ ಲಕ್ಷ್ಮಿ ಮಿತ್ತಲ್ ಭಾರತದ ಪೌರತ್ವವನ್ನು ಬಿಟ್ಟುಕೊಟ್ಟಿಲ್ಲ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿರುವ ಮಿತ್ತಲ್ ಇಂದಿಗೂ ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಅವರು ಭಾರತೀಯ ಆಟಗಾರರಿಗೆ ಪ್ರೋತ್ಸಾಹಿಸಲು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಮನಸ್ಸು ಮತ್ತು ಬದ್ಧತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಲಕ್ಷ್ಮಿ ಮಿತ್ತಲ್ ಮಾದರಿಯಾಗಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

