ಸಂಪಾದಕೀಯ

ಭಾರತದ ಬಿಲ್‌ಗೇಟ್ಸ್ ಮತ್ತವರ ಸರಳತೆ

Published On :

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುವ ಹೆಸರುಗಳಲ್ಲಿ ನಮ್ಮ ಕರ್ನಾಟಕದ ಅಜೀಂ ಪ್ರೇಂಜಿ ಸ್ಥಾನ ಗಳಿಸಿರುವುದು ಸಂತಸದ ವಿಷಯ. ವಿಪ್ರೋ ಸಂಸ್ಥೆಯ ಸ್ಥಾಪಕರಾಗಿ, ದೊಡ್ಡ ದಾನಿಯಾಗಿ ಇವರು ಪ್ರಸಿದ್ಧರು. ವಿಶ್ವದ ಅತಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ 20ನೆಯ ಸ್ಥಾನವನ್ನಲಂಕರಿಸಿರುವ ಪ್ರೇಂಜಿ ಇತ್ತೀಚೆಗಷ್ಟೆ ತಮ್ಮ ಬಳಿ ಇದ್ದ ವಿಪ್ರೋ ಸಮೂಹದ 12,300 ಕೋಟಿಗಳಷ್ಟು ಹಣವನ್ನು ತಮ್ಮದೇ ದತ್ತಿ ಸಂಸ್ಥೆಗೆ ವರ್ಗಾಯಿಸಿದ್ದಾರೆ. ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ತಮ್ಮ ದತ್ತಿ ಸಂಸ್ಥೆಯ ಮೂಲಕ ಸಮಾಜದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಈ ಹಣ ವಿನಿಯೋಗವಾಗಲಿದೆ.
ಪ್ರಾರಂಭದಲ್ಲಿ ಅಜೀಂ ಪ್ರೇಮ್‌ಜಿ ವನಸ್ಪತಿ ತಯಾರಿಕೆಯ ಉದ್ಯಮ ಪ್ರಾರಂಭಿಸಲು ಇಚ್ಛಿಸಿದಾಗ ಅನುಮತಿ ನೀಡಲು ಅಪಾರ ಲಂಚ ನೀಡಬೇಕೆಂಬ ಪ್ರಸ್ತಾವ ಬಂತು. ಎಂದಿಗೂ ಭ್ರಷ್ಟಾಚಾರವನ್ನು ಬೆಂಬಲಿಸದ ಅಜೀಂ ತಾವು ಬಂಡವಾಳ ತೊಡಗಿಸಿ, ಶ್ರಮಪಟ್ಟು ಮಾಡುವ ಉದ್ಯಮ ಸ್ಥಾಪನೆಗೆ ಲಂಚ ನೀಡಲು ನಿರಾಕರಿಸಿ, ಆ ಚಿಂತೆಯನ್ನೇ ಬಿಟ್ಟರು. ಬಲ್ಬ್‌ಗಳು, ಸೋಪ್, ಶಾಂಪೂ, ಪೌಡರ್, ಮುಂತಾದ ವಸ್ತುಗಳನ್ನು ತಯಾರಿಸಿ ಯಶಸ್ವಿಯಾದರು. ನಂತರ ಕಂಪ್ಯೂಟರ್ ಹಾರ್ಡ್‌ವೇರ್ ತಯಾರಿಸುವ ಉದ್ಯಮ ಸ್ಥಾಪಿಸಿ ಅಪಾರ ಯಶಸ್ಸನ್ನೂ, ಹಣವನ್ನೂ ಸಂಪಾದಿಸಿದರು. ಸಹಸ್ರಾರು ಶಾಲೆಗಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು ಪಣತೊಟ್ಟಿರುವ ಪ್ರೇಂಜಿ ಅದರಲ್ಲಿಯೂ ಯಶಸ್ವಿಯಾಗಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿರುವ ಇವರು ಸರಳ ಜೀವನ ನಡೆಸುತ್ತಿದ್ದಾರೆ. ಇಂದಿಗೂ ವಿಮಾನದ ಎಕಾನಮಿ ತರಗತಿಯಲ್ಲಿ ಪ್ರಯಾಣಿಸುವ ಇವರು ವಿದೇಶಗಳಿಗೆ ಹೋದಾಗ ದುಬಾರಿ ಹೊಟೇಲ್‌ಗಳಲ್ಲಿ ಉಳಿಯದೆ ಸಾಧಾರಣ ಹೊಟೇಲ್‌ಗಳಲ್ಲಿಯೇ ವಾಸ್ತವ್ಯ ಮಾಡುತ್ತಾರೆ. ತಾವು ಧರಿಸುವ ಉಡುಪು, ಉಪಯೋಗಿಸುವ ಕಾರು, ತೊಡುವ ಕೈಗಡಿಯಾರ ಎಲ್ಲವೂ ಭಾರತದಲ್ಲಿ ತಯಾರಾದವುಗಳೇ ಆಗಿವೆ. ಅಪಾರ ದೇಶಪ್ರೇಮಿ ಮತ್ತು ಶಿಕ್ಷಣ ಪ್ರೇಮಿಯಾದ ಅಜೀಂ ಪ್ರೇಂಜಿ ಇತರರಿಗೆ ಮಾದರಿಯಾಗಿದ್ದಾರೆ. ಸದ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ, ರಾಜಾಸ್ಥಾನ, ಬಿಹಾರ, ಛತ್ತೀಸ್ಗಡ, ಮಧ್ಯಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳ ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ಅಲ್ಲಿನ ರಾಜ್ಯಗಳ ಜೊತೆ ಕೈಜೋಡಿಸಿ ಒಂದು ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಿದ್ದಾರೆ. ಸಮಾಜದಿಂದ ಪಡೆದ ಶ್ರೀಮಂತಿಕೆಯನ್ನು ಐಹಿಕ ಸುಖಕ್ಕಾಗಿ ಮಾತ್ರ ಬಳಸುವ ಇಂದಿನ ಶ್ರೀಮಂತರಿಗೆ ತಾವು ಸಂಪಾದಿಸಿದ ಹಣದ ಒಂದಂಶವನ್ನು ಸಮಾಜಕ್ಕಾಗಿ ನೀಡಬೇಕೆಂದು ಪ್ರತಿಪಾದಿಸುವ ಅಜೀಂ ಪ್ರೇಂಜಿ ಎಲ್ಲರಿಗೂ ಮೇಲ್ಪಂಕ್ತಿಯಾಗಿದ್ದಾರೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.