ಅಸೂಯೆಗೆ ಪ್ರಾಣತೆತ್ತ ರಾಜಕುಮಾರ
ಮಾರ್‌ವಾರ್ (ಇಂದಿನ ರಾಜಸ್ಥಾನ) ಪ್ರಾಂತ್ಯದಲ್ಲಿ 1629 ರಿಂದ 1678 ರವರೆಗೆ ಜೀವಿಸಿದ್ದ ಜಸವಂತ್ ಸಿಂಹ, ರಜಪೂತ್ ವಂಶದ ಅತ್ಯಂತ ಪ್ರಬಲ ಮತ್ತು ಶಕ್ತಿಶಾಲಿ ರಾಜನಾಗಿದ್ದ. ಅವನೊಮ್ಮೆ ಔರಂಗಜೇಬನ ಆಸ್ಥಾನಕ್ಕೆ ಹೋಗಿದ್ದ. ತನ್ನ ಬಳಿ ಇದ್ದ ಸಿಂಹದ ಕುರಿತು ಔರಂಗಜೇಬ ಅತಿ ಹೆಮ್ಮೆಯಿಂದ ಹೇಳಿಕೊಂಡು ಅದನ್ನು ಸೋಲಿಸುವ ಸಿಂಹ ಯಾರ ಬಳಿಯೂ ಇಲ್ಲ ಎಂದು ಉದ್ಗರಿಸಿದ. ಅದು ನಿಜಕ್ಕೂ ಭಯಂಕರ ಸಿಂಹವಾಗಿತ್ತು. ಆಗ ಜಸವಂತ ಸಿಂಹ, 'ಏಕಿಲ್ಲ? ನನ್ನ ಬಳಿ ಆ ಸಿಂಹಕ್ಕಿಂತ ಬಲವಾದ ಸಿಂಹ ಇದೆ' ಎಂದನು. ಅದನ್ನು ಕೇಳಿ ಔರಂಗಜೇಬನಿಗೆ ಅಪಮಾನವಾದಂತಾಯಿತು. ಕೊನೆಗೆ ಒಂದು ದಿನ ಔರಂಗಜೇಬನ ಸಿಂಹಕ್ಕೂ, ಜಸವಂತಸಿಂಹನ ಸಿಂಹಕ್ಕೂ ಪರೀಕ್ಷೆ ನಡೆಸಲು ತೀರ್ಮಾನವಾಯಿತು. ನಿಗದಿತ ದಿನದಂದು ಒಂದು ವಿಶಾಲವಾದ ಬಯಲಿನಲ್ಲಿ ಪರೀಕ್ಷೆ ನಡೆಸಲು ಇಬ್ಬರೂ ಸಮ್ಮತಿಸಿದರು. ಅದನ್ನು ವೀಕ್ಷಿಸಲು ಜನ ಅಲ್ಲಿ ಸಾಗರೋಪಾದಿಯಾಗಿ ಸೇರಿದ್ದರು. ಎತ್ತರದ ಸ್ಥಳದಲ್ಲಿ ಔರಂಗಜೇಬ ಕುಳಿತಿದ್ದ. ಅವನ ಸಿಂಹವನ್ನು ಕರೆತರಲಾಯಿತು. ಅತ್ಯಂತ ಬಲಿಷ್ಠವಾಗಿದ್ದ ಅದರ ಆಕಾರ ನೊಡಿದರೇ ಭಯವಾಗುವಂತಿತ್ತು. ಅದರ ಘರ್ಜನೆ ಕೇಳಿ ಕೆಲವರು ಮೂರ್ಛೆ ಹೋದರು. ಆಗ ಜಸವಂತನಿಗೆ ಅವನ ಸಿಂಹವನ್ನು ಕರೆತರಲು ತಿಳಿಸಲಾಯಿತು. ಆಗ ಜಸವಂತ ಸಿಂಹ ತನ್ನ ಹತ್ತು ವರ್ಷದ ಮಗನನ್ನು ಕರೆತಂದು, ನನ್ನ ಮಗ ಪೃಥ್ವಿ ಸಿಂಹ ಒಬ್ಬ ಮರಿಸಿಂಹದಂತಿದ್ದು ಅವನು ಸಿಂಹದ ಜೊತೆ ಹೋರಾಡುತ್ತಾನೆ' ಎಂದು ತಿಳಿಸಿದನು. ಅದನ್ನು ಕೇಳಿ ನೆರದಿದ್ದ ಎಲ್ಲರಿಗೂ, ಸ್ವತಃ ಔರಂಗಜೇಬನಿಗೂ ಆಶ್ಚರ್ಯವಾಯಿತು. ಇಷ್ಟು ಪುಟ್ಟ ಬಾಲಕ ಸಿಂಹದೊಡನೆ ಸೆಣಸಾಡಿಯಾನೇ ಎಂದು. ಪೃಥ್ವಿ ಸಿಂಹನ ಹಣೆಗೆ ಮುತ್ತಿಕ್ಕಿ ಸಿಂಹದೊಡನೆ ಹೋರಾಡಲು ಅನುಮತಿಯಿತ್ತ ಜಸವಂತ ಸಿಂಹ. ಬಾಲಕ ಪೃಥ್ವಿಸಿಂಹ ಧ್ಯೆರ್ಯವಾಗಿ ಹೋರಾಡಿ ಕೆಲವು ನಿಮಿಷಗಳಲ್ಲೇ ಸಿಂಹದ ದವಡೆಗಳನ್ನು ತನ್ನ ಕೈಯಲ್ಲಿ ಹಿಡಿದು ಸೀಳಿಯೇ ಬಿಟ್ಟ. ರಕ್ತಕಾರುತ್ತಾ ಸತ್ತು ಬಿದ್ದ ತನ್ನ ಸಿಂಹವನ್ನು ನೋಡಿ ಔರಂಗಜೇಬನಿಗೆ ಅವಮಾನವಾಯಿತು. ಮುಂದೊಂದು ದಿನ ಪೃಥ್ವಿಸಿಂಹ ತನಗೆ ಅಡ್ಡಿಯಾಗಬಹುದೆಂದು ಭಾವಿಸಿ, ವಿಷದಿಂದ ತೋಯಿಸಿದ ಉಡುಪನ್ನು ಪೃಥ್ವಿಸಿಂಹನಿಗೆ ಉಡುಗೊರೆಯಾಗಿ ನೀಡಿದ. ಅದನ್ನು ಧರಿಸಿದ ಪೃಥ್ವಿ ಸಿಂಹ ಕೂಡಲೇ ಅಸು ನೀಗಿದ. ನಂತರ ಜಸವಂತ ಸಿಂಹ ಮತ್ತು ಔರಂಗಜೇಬನಿಗೆ ಉಜ್ಜೈನಿಯ ಬಳಿ ಘೋರ ಯುದ್ಧವಾಗಿ ಅದರಲ್ಲಿ ಔರಂಗಜೇಬ ಜಯಗಳಿಸಿದ. ಮತ್ತು ಅವನು ಗೆದ್ದ ಆ ಸ್ಥಳಕ್ಕೆ ಫತೇಹಾಬಾದ್ ಎಂದು ಹೆಸರಿಟ್ಟ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

