ಆಧುನಿಕ ವೀರಬಾಹುಕಿಯ ಸೇವೆ
1938ರಲ್ಲಿ ಹರಿದ್ವಾರದಲ್ಲೊಂದು ಅದ್ಧೂರಿ ಕುಂಭಮೇಳ. ಅದರಲ್ಲಿ ಭಾಗವಹಿಸಿಲು ದೇಶದೆಲ್ಲೆಡೆಯಿಂದ ಲಕ್ಷಾಂತರ ಜನ ಆಗಮಿಸಿದ್ದರು. ಅದರಲ್ಲಿ ಪಟಿಯಾಲಾದ ಒಂದು ಶ್ರೀಮಂತ ಕುಟುಂಬಕ್ಕೆ ಸೇರಿದ ಗಂಡ, ಹೆಂಡತಿ ಮತ್ತು ಒಬ್ಬಳೇ ಪುತ್ರಿ ಆಗಮಿಸಿದ್ದರು. ಅವರ ಮಗಳು ಬಚನೀಕೌರ್ ಹದಿನಾರು ವರ್ಷದ ಸ್ಫುರದ್ರೂಪಿ. ದುರಾದೃಷ್ಟ. ಅಂದು ನಡೆದ ಅಗ್ನಿ ಅವಗಢದಲ್ಲಿ ಅನೇಕರು ಆಹುತಿಯಾದರು, ಗದ್ದಲದಿಂದಾಗಿ ಅನೇಕರು ನದಿಯ ಪಾಲಾದರು. ಅದರಲ್ಲಿ ಬಚನಿಯ ತಂದೆತಾಯಿಯರೂ ಸೇರಿದ್ದರು. ಅವರು ನೋಡನೋಡುತ್ತಿದ್ದಂತೆ ಗಂಗಾನದಿಯ ಒಡಲೊಳಗೆ ಸೇರಿಕೊಳ್ಳುವುದನ್ನು ನೋಡಿ ಬಚನೀ ದುಃಖಿತಳಾದಳು. ಆಶ್ರಯರಹಿತಳಾದ ಈ ಅಭಾಗಿನಿ ಹರಿದ್ವಾರದ ಮನೆಮನೆಗೆ ತೆರಳಿ ಭಿಕ್ಷೆ ಬೇಡಿ ಜೀವನ ಸಾಗಿಸತೊಡಗಿದಳು. ಅವಳ ಅವಸ್ಥೆಯನ್ನು ಕಂಡ ಸಂಸ್ಕೃತ ವಿದ್ವಾಂಸರೊಬ್ಬರು ಅವಳಿಗೆ ಖಡಕಡೀ ಸ್ಮಶಾನ್ ಘಾಟಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಆಕೆಯ ಊರಿನ ವಿಳಾಸ ಪಡೆದು ವಿಚಾರಿಸಿದಾಗ ಅವಳ ದುಷ್ಟ ಚಿಕ್ಕಪ್ಪ ತನ್ನ ಅಣ್ಣನ ಆಸ್ತಿಯೆಲ್ಲವನ್ನೂ ವಶಕ್ಕೆ ತೆಗೆದುಕೊಂಡಿರುವ ಸುದ್ದಿ ತಿಳಿಯಿತು. ಹೀಗಾಗಿ ಆ ಸ್ಮಶಾನದಲ್ಲೇ ಅವಳು ಹೆಣ ಸುಡುವ ಕಾಯಕವನ್ನು ಕೈಗೊಳ್ಳಬೇಕಾಯಿತು. ಅವಳಿಗೆ ಆಶ್ರಯವಾಗಿರಲೆಂದೇ ಒಬ್ಬ ಯುವಕನೊಡನೆ ವಿವಾಹವನ್ನೂ ಮಾಡಿಸಲಾಯಿತು. ಆದರೆ ಅವಳನ್ನು ವಿವಾಹವಾದವ ದುರಾಚಾರಿಯಾಗಿದ್ದ. ಅವಳನ್ನು ವೇಶ್ಯಾವೃತ್ತಿಗೆ ತಳ್ಳಲು ಆತ ಪ್ರಯತ್ನಿಸಿದಾಗ ಅವಳಿಗೆ ಇಡೀ ಪುರುಷ ಸಮಾಜದಮೇಲೆ ದ್ವೇಷ ಹುಟ್ಟಿತು. ಅಂದಿನಿಂದ ಪುರುಷ ವೇಷಧಾರಿಯಾಗಿ ಕಂಖಲ್ ಸ್ಮಶಾನದಲ್ಲಿ ಆಧುನಿಕ ವೀರಬಾಹುಕಿಯಾಗಿ ಕೆಲಸ ನಿರ್ವಹಿಸಿದಳು. ಪ್ರತಿದಿನ ಸ್ಮಶಾನವನ್ನು ಸ್ವಚ್ಛಗೊಳಿಸಿ, ಬಂದ ಹೆಣಗಳಿಗೆ ಸಂಸ್ಕಾರ ಮಾಡಲು ಎಲ್ಲ ರೀತಿಯ ನೆರವನ್ನು ನೀಡುತ್ತಾ, ಅವರು ಕೊಟ್ಟ ಅಲ್ಪಸ್ವಲ್ಪ ಹಣದಲ್ಲಿ ಜೀವನ ನಿರ್ವಹಣೆ ಮಾಡಿದಳು.
ಸ್ಮಶಾನದಲ್ಲಿಯೇ ವಾಸವಾಗಿದ್ದುದರಿಂದ ಅವಳಿಗೆ ಕಾಮುಕರ ಕಾಟ ತಪ್ಪಿತು. ಅಲ್ಲಿ ಬರೋಬ್ಬರಿ ಅರವತ್ತು ವರ್ಷಗಳ ಕಾಲ ಕೆಲಸ ಮಾಡಿ ಎಲ್ಲರ ಪ್ರೀತ್ಯಾದರಗಳಿಗೂ ಪಾತ್ರಳಾಗಿದ್ದಳು ಬಚನಿ. ಅಸಂಖ್ಯಾತ ಹೆಣಗಳಿಗೆ ಸಂಸ್ಕಾರ ಮಾಡಿ ಸದ್ಗತಿ ಕರುಣಿಸಿದ ಕೊನೆಗೆ ವೃದ್ಧಾಪ್ಯ ಮತ್ತು ಅನಾರೋಗ್ಯದಿಂದ 2001 ರಲ್ಲಿ ಮರಣಿಸಿದಾಗ ಅವಳ ಸೇವೆಯನ್ನು ಕಂಡಿದ್ದ ಅಲ್ಲಿನ ನಿವಾಸಿಗಳೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ಅಶ್ರುತರ್ಪಣದ ನಡುವೆ ಅವಳ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ಮಾಡಿದರು. ಅವರೆಲ್ಲರಿಗೆ ತಮ್ಮ ಆಪ್ತ ಬಂಧುವೊಬ್ಬಳನ್ನು ಕಳೆದುಕೊಂಡಂಥ ದುಃಖ ಉಂಟಾಗಿತ್ತು. ಇಂದಿಗೂ ಅಲ್ಲಿನ ನಿವಾಸಿಗಳು ಬಚನಿ ಕೌರಳ ಸೇವೆಯನ್ನು ಸ್ಮರಿಸುತ್ತಿರುವುದು ಅವಳ ಸೇವೆಯ ಮೌಲ್ಯವನ್ನು ತಿಳಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

