ಸಂಪಾದಕೀಯ

ಪಲುಸ್ಕರ್ ಮತ್ತು ವಂದೇ ಮಾತರಂ

Published On :

ವಿಷ್ಣು ದಿಗಂಬರ ಪಲುಸ್ಕರ್ ಅವರ ಹೆಸರು ಹಿಂದುಸ್ಥಾನಿ ಸಂಗೀತ ಪ್ರಪಂಚದಲ್ಲಿ ಮನೆಮಾತು. ಕುರುನದವಾಡ ಮಹಾರಾಜರು ಪಲುಸ್ಕರ್ ಅವರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸಂಗೀತಾಭ್ಯಾಸ ಮಾಡಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಲು ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. 1923 ರಲ್ಲಿ ಕಾಕಿನಾಡದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಏರ್ಪಾಡಾಗಿತ್ತು. ಅದರಲ್ಲಿ ಬಂಕಿಂಚಂದ್ರರ ವಂದೇಮಾತರಂ ಗೀತಗಾಯನದ ಏರ್ಪಾಟಾಗಿತ್ತು. ಅವರ ಜೊತೆಗೆ ಅವರ ಶಿಷ್ಯರೂ ಮತ್ತು ವಾದ್ಯವೃಂದದವರೂ ಇದ್ದರು. ಮೌಲಾನಾ ಮಹಮದ್ ಅಲಿಯವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ ಗೀತೆ ಹಾಡುವಾಗ ಸಂಗೀತವಾದ್ಯಗಳನ್ನು ಬಳಸಬಾರದು ಮತ್ತು ವಂದೇ ಮಾತರಂ ಗೀತೆಯನ್ನು ಸ್ವಾಗತ ಗೀತೆಯಾಗಿ ಹಾಡಬಾರದು ಎಂದು ಮೊದಲೇ ತಿಳಿಸಲಾಗಿತ್ತು. ಇದು ಪಲುಸ್ಕರ್ ಅವರಿಗೆ ತುಂಬಾ ಬೇಸರವನ್ನುಂಟುಮಾಡಿತ್ತು. ಅಲ್ಲದೆ ಇದು ತಮ್ಮ ಆತ್ಮಗೌರವಕ್ಕೆ ಬರೆಯೆಳೆದಂತೆ ಎಂದು ಅವರು ಭಾವಿಸಿದ್ದರು. ಆದರೆ ಅಲ್ಲಿಗೆ ಆಗಮಿಸಿದ್ದ ಗಾಯಕರು ಅಲಿಯವರ ಆಣತಿಯಂತೆ ವಾದ್ಯವೃಂದದ ನೆರವಿಲ್ಲದೆ ಹಾಡಿ ತಮ್ಮ ಕರ್ತವ್ಯವನ್ನು ಮುಗಿಸಿದರು. ಇನ್ನು ಪಲುಸ್ಕರರ ಸರದಿ. ಸಂಗೀತ ಕಾರ್ಯಕ್ರಮ ನೀಡಲು ವೇದಿಕೆಯ ಮೇಲೇರಿ, ತಮ್ಮ ಶಿಷ್ಯರನ್ನೂ, ವಾದ್ಯವೃಂದದವರನ್ನೂ ವೇದಿಕೆಗೆ ಆಹ್ವಾನಿಸಿದರು. ಇದನ್ನು ನೋಡಿದ ಮಹಮ್ಮದ್ ಅಲಿಯವರು ಸಿಡಿಮಿಡಿಗೊಂಡು, ಕೇವಲ ರಾಷ್ಟ್ರಗೀತೆಯನ್ನು ಮಾತ್ರ ಹಾಡಬೇಕೆಂದೂ, ವಾದ್ಯವೃಂದವನ್ನು ಬಳಸಬಾರದೆಂದೂ ಕಟ್ಟಪ್ಪಣೆ ಮಾಡಿದರು.
ಇದರಿಂದ ಕೆರಳಿದ ಪಲುಸ್ಕರ್ ಅವರು ಅಧ್ಯಕ್ಷರತ್ತ ತಿರುಗಿ ಇದು ಕಾಂಗ್ರೆಸ್ ಅಧಿವೇಶನವೇ ಹೊರತು, ಮಸೀದಿಯಲ್ಲವಾದ್ದರಿಂದ ತಾವು ವಾದ್ಯವೃಂದದ ನೆರವಿನಿಂದಲೇ ವಂದೇ ಮಾತರಂ ಗೀತೆಯನ್ನು ಹಾಡುವುದಾಗಿ ಹೇಳಿ ಸುಶ್ರಾವ್ಯವಾಗಿ ಆ ಗೀತೆಯನ್ನು ಹಾಡಿದರು. ಅವರ ಕಂಠಸಿರಿ, ಗಂಭೀರ ಧ್ವನಿಯನ್ನು ಕೇಳಿದ, ಅಧಿವೇಶನದಲ್ಲಿ ಭಾಗವಹಿಸಿದ ಎಲ್ಲರೂ ಮೆಚ್ಚುಗೆಯಿಂದ ಕರತಾಡನ ಮಾಡಿದಾಗ ಸಭಾಧ್ಯಕ್ಷರೂ ಕೂಡ ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದು ಪಲುಸ್ಕರ್ ಅವರ ಆತ್ಮಾಭಿಮಾನವನ್ನೂ, ರಾಷ್ಟ್ರ ಭಕ್ತಿಯನ್ನೂ ತೋರಿಸುವುದಲ್ಲದೆ, ಅವರು ತಮ್ಮ ಹಾಡಿನಿಂದ ಎಂತಹವರನ್ನೂ ಮೋಡಿಮಾಡುವ ಕಲೆಯನ್ನು ಸಿದ್ಧಿಸಿಕೊಂಡಿದ್ದರು ಎಂಬುದಕ್ಕೆ ಸೂಕ್ತ ನಿದರ್ಶನವಾಗಿದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.