ಅನುವಾದಕ್ಕೊಪ್ಪದ ಮಾಸ್ತಿ
1925 ರಲ್ಲಿ ಮಾಸ್ತಿಯವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಕನ್ನಡದಲ್ಲಿ ಸಣ್ಣಕತೆಗಳಿಗೆ ಭದ್ರಸ್ಥಾನ ಕಲ್ಪಿಸಿಕೊಟ್ಟ ಕೀರ್ತಿ ಅವರಿಗೆ ದೊರೆಯುತ್ತದೆ. ಅವರ ಸಣ್ಣಕಥೆಗಳು ಅದೆಷ್ಟು ಪ್ರಸಿದ್ಧವಾಗಿದ್ದವೆಂದರೆ ಅವುಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಲು ಅನುಮತಿ ಕೋರಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಕಟನಾ ಸಂಸ್ಥೆ 'ಮ್ಯಾಕ್ಮಿಲನ್' ಕಂಪನಿಯ ವ್ಯವಸ್ಥಾಪಕರು ಬೆಂಗಳೂರಿಗೆ ಬಂದು ಮಾಸ್ತಿಯವರನ್ನು ಭೇಟಿಯಾದರು. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಮಾಸ್ತಿಯವರ ಕಥೆಗಳನ್ನು ಅನುವಾದ ಮಾಡಲು ಅನುಮತಿ ನೀಡಬೇಕೆಂದು ಕೋರಿದಾಗ, ವಿಶ್ವಾದ್ಯಂತ ಮಾರುಕಟ್ಟೆ ಜಾಲಹೊಂದಿರುವ ಈ ಪ್ರಕಟಣಾ ಸಂಸ್ಥೆಯಲ್ಲಿ ಪುಸ್ತಕ ಪ್ರಕಟಣೆಗೆ ಲೇಖಕರನೇಕರು ಪೈಪೋಟಿ ಮಾಡುತ್ತಿದ್ದರು. ಮಾಸ್ತಿಯವರಿಗೆ ವಿಶ್ವಕ್ಕೇ ಪರಿಚಯವಾಗುವ ಇಂತಹ ಒಂದು ಸುವರ್ಣಾವಕಾಶ ದೊರೆತಿದ್ದರಿಂದ ಅನೇಕರು ಅವರನ್ನು ಅಭಿನಂದಿಸಿದ್ದೂ ಉಂಟು. ಆದರೆ ಮಾಸ್ತಿಯವರ ಆಲೋಚನೆಯೇ ಬೇರೆಯದಾಗಿತ್ತು. ತಮ್ಮ ಕಥೆಗಳು ಆಂಗ್ಲಭಾಷೆಗೆ ಅನುವಾದಗೊಳ್ಳುವುದು ಇಷ್ಟವಾದರೂ ಆಂಗ್ಲ ಮೂಲದ ಪ್ರಕಟಣಾ ಸಂಸ್ಥೆಯೊಂದರ ಮೂಲಕ ಅದಾಗುವುದು ಅವರಿಗೆ ಇಷ್ಟವಿರಲಿಲ್ಲ. ಅದನ್ನೇ ಅವರು ತಮ್ಮನ್ನು ಭೇಟಿ ಮಾಡಬಂದ ವ್ಯಕ್ತಿಗೆ ಹೇಳಿದರು ಕೂಡ. ಆದರೆ ಆ ಮ್ಯಾನೇಜರ್ 'ಇಂತಹ ಅವಕಾಶವನ್ನು ಉಪಯೋಗಿಸಿಕೊಳ್ಳದೆ, ನಿರಾಕರಿಸುವುದೇಕೆ?' ಎಂದು ಕೇಳಿದ್ದಕ್ಕೆ ಮಾಸ್ತಿ ಮೂರು ಕಾರಣಗಳನ್ನು ಕೊಟ್ಟರು. ಒಂದು, ಆಂಗ್ಲರು ಭಾರತೀಯರನ್ನು ತಮ್ಮ ಸರಿಸಮನಾರಾಗಿ ನೋಡಿಕೊಳ್ಳದೆ, ಕೀಳಾಗಿ ನೋಡಿಕೊಳ್ಳುತ್ತಿದ್ದುದು. ಎರಡನೆಯದಾಗಿ, ತಮ್ಮ ಪುಸ್ತಕವನ್ನು ಅನುವಾದಿಸಿ ಆಂಗ್ಲಭಾಷೆಯಲ್ಲಿ ಪ್ರಕಟಿಸಿ ಅದರಿಂದ ಬರುವ ಹಣದಲ್ಲಿ ಹೆಚ್ಚಿನ ಪಾಲನ್ನು ತಮ್ಮದಾಗಿಸಿಕೊಂಡು ಇಂಗ್ಲೆಂಡಿಗೆ ನೆರವಾಗುವುದು. ಮೂರನೆಯದಾಗಿ, ರಾಜಕೀಯವಾಗಿ ಅಧೀನರಾದ ತಾವು ಸಾಹಿತ್ಯಿಕವಾಗಿ ಏಕೆ ಅಧೀನರಾಗಬೇಕು ಎಂಬುದು. ಇದನ್ನು ಕೇಳಿದ ಅಧಿಕಾರಿ ಮಾಸ್ತಿಯವರ ದಿಟ್ಟ ಉತ್ತರಕ್ಕೆ ಮತ್ತು ಆತ್ಮಾಭಿಮಾನಕ್ಕೆ ಸಂತಸ ವ್ಯಕ್ತಪಡಿಸಿ, ಅವರನ್ನು ಬಹುವಾಗಿ ಶ್ಲಾಘಿಸಿದ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

