ಸ್ವಾಮಿಗಳ ಹೃದಯ ಸಂಪನ್ನತೆ
ಉತ್ತರಾದಿ ಮಠದ 38ನೇ ಪೀಠಾಧಿಪತಿಗಳಾಗಿದ್ದವರು ಸತ್ಯಧ್ಯಾನ ತೀರ್ಥರು. 1912 ರಿಂದ 1942 ರವರೆಗೆ ಪೀಠಾಧಿಪತಿಗಳಾಗಿ ಮಧ್ವ ಸಿದ್ಧಾಂತವನ್ನು ವಿಶ್ವವ್ಯಾಪಿ ಮಾಡುವಲ್ಲಿ ಶ್ರಮಿಸಿದರು. ಅಷ್ಟೇ ಅಲ್ಲದೆ ಮಠದ ಕೀರ್ತಿಯನ್ನೂ ಹೆಚ್ಚಿಸಿದರು. ವಿದ್ವಾಂಸರಾಗಿದ್ದ ಸ್ವಾಮಿಗಳು 'ಗೀತಾಸಾರ ಸಂಗ್ರಹ', 'ಚಂದ್ರಿಕಾ ಮಂಡನಮ್', 'ಸಭಾಸಾರ ಸಂಗ್ರಹ' ಮುಂತಾದ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಬಾಲಗಂಗಾಧರ ತಿಲಕರೊಡನೆಯೂ ಗೀತೆಯ ಬಗ್ಗೆ ಸಂವಾದ ನಡೆಸಿದ್ದುಂಟು. ದೇಶಾದ್ಯಂತ ಪ್ರವಾಸ ಮಾಡಿ ಅನೇಕ ವಿದ್ವಾಂಸರೊಡನೆ ವಾದ ಮಾಡಿ ಹರಿಸರ್ವೋತ್ತಮತೆಯನ್ನು ಸಾರಿದರು. ಅವರ ಬೃಂದಾವನವೀಗ ಭೀಮಾನದಿಯ ತೀರದ ಪಂಢರಾಪುರದಲ್ಲಿದೆ.
ಒಮ್ಮೆ ಸತ್ಯಧ್ಯಾನ ತೀರ್ಥರ ಮೊಕ್ಕಾಮೊಂದರಲ್ಲಿ ಪೂಜೆ ಮತ್ತು ತೀರ್ಥಪ್ರಸಾದಗಳ ವ್ಯವಸ್ಥೆ ಏರ್ಪಾಟಾಗಿತ್ತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿ ಸ್ವಾಮೀಜಿಯವರ ಪೂಜೆಯನ್ನು ವೀಕ್ಷಿಸಿ, ಆಶೀರ್ವಚನ ಕೇಳಿದರು. ನಂತರ ಬಂದ ಭಕ್ತಾದಿಗಳೆಲ್ಲರಿಗೂ ಪ್ರಸಾದದ ವ್ಯವಸ್ಥೆಗೆ ಏರ್ಪಾಡು ಮಾಡಲಾಯಿತು. ಭಕ್ತಾದಿಗಳು ಊಟಮಾಡುವಾಗ ಸ್ವಾಮೀಜಿಯವರು ಪ್ರತಿಯೊಬ್ಬರಿಗೂ ಒಂದೊಂದು ಬೆಳ್ಳಿ ರುಪಾಯಿಯನ್ನು ದಕ್ಷಿಣೆಯಾಗಿ ನೀಡುತ್ತಿದ್ದರು. ಶಿಷ್ಯನೊಬ್ಬ ಅವರ ಹಿಂದೆ ಬೆಳ್ಳಿ ನಾಣ್ಯಗಳನ್ನು ತುಂಬಿದ ಬೆಳ್ಳಿತಟ್ಟೆಯನ್ನು ಹಿಡಿದು ಬರುತ್ತಿದ್ದ. ಒಂದು ತಟ್ಟೆ ನಾಣ್ಯಗಳು ಖರ್ಚಾದನಂತರ ಇನ್ನೊಂದು ತಟ್ಟೆ ಬೆಳ್ಳಿನಾಣ್ಯಗಳ್ನು ತರಿಸಲಾಯಿತು. ಒಬ್ಬ ಗರ್ಭಿಣಿ ಸ್ತ್ರೀಯ ಎಲೆಯ ಮುಂದೆ ನಿಂತ ಸ್ವಾಮಿಗಳು ಇನ್ನೇನು ಆಕೆಗೆ ನಾಣ್ಯಕೊಡಬೇಕು ಅಷ್ಟರಲ್ಲಿ ಶಿಷ್ಯನ ಕೈಜಾರಿ ಎಲ್ಲ ನಾಣ್ಯಗಳೂ ಆ ಮಹಿಳೆಯ ಎಲೆಯ ಮೇಲೆ ಬಿದ್ದುಬಿಟ್ಟವು. ಒಂದೆಡೆ ಶಿಷ್ಯನಿಗೆ ಗಾಬರಿ. ಎಲ್ಲಿ ಸ್ವಾಮೀಜಿಯವರ ಸಿಟ್ಟಿಗೆ ಬಲಿಯಾಗುತ್ತೇನೋ ಎಂದು. ಅವನು ಗಾಬರಿಯಾಗಿ ಒಂದೆಡೆ ನಡುಗುತ್ತಾ ನಿಂತಿದ್ದ. ಸತ್ಯಧ್ಯಾನ ತೀರ್ಥರು ಒಂದರೆಕ್ಷಣ ಕಣ್ಮುಚ್ಚಿ ಯೋಚಿಸಿದವರಂತೆ ಮಾಡಿ, ಶಾಂತಸ್ವರದಿಂದ ಹೇಳಿದರು, 'ಇಂದು ನಮ್ಮ ಆರಾಧ್ಯ ದೈವ ಶ್ರೀರಾಮ ಇದನ್ನೆಲ್ಲಾ ಈ ಮುತೈದೆಗೆ ನೀಡಬೇಕೆಂದು ನಿರ್ಣಯಿಸಿದ್ದಾನೆ. ಈ ನಾಣ್ಯಗಳನ್ನೆಲ್ಲಾ ಸ್ವಚ್ಛ ಗೊಳಿಸಿ ಆಕೆಗೆ ನೀಡಿ' ಎಂದು ಹೇಳಿ ಮುಂದೆ ಸಾಗಿದರು. ನಂತರ ಆಕೆಗೆ ಮತ್ತೆ ಬೇರೊಂದು ಎಲೆಯಲ್ಲಿ ಪ್ರಸಾದದ ವ್ಯವಸ್ಥೆಯೂ ಆಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

