ಸಂಪಾದಕೀಯ

ಚೆಲುವಯ್ಯನ ಮಾನವೀಯ ಗುಣ

Published On :

ಚಾಮರಾಜ ಒಡೆಯರ ಕಾಲದಲ್ಲಿ ದರೋಗ ಚೆಲುವಯ್ಯ ಎಂಬುವನನ್ನು ಅರಮನೆಯ ದನಕರುಗಳ ಮೇಲ್ವಿಚಾರಣೆಗಾಗಿ ನೇಮಿಸಲಾಗಿತ್ತು. ಅವನು ಸಾತ್ವಿಕ ಮತ್ತು ಹೃದಯ ಸಂಪನ್ನನಾಗಿದ್ದ. ಚೆಲುವಯ್ಯನ ಆಜಾನುಬಾಹು ಆಕಾರ ಮತ್ತು ಹುರಿಮೀಸೆ, ಹೆದರಿಕೆ ಹುಟ್ಟಿಸುವಂತಿದ್ದರೂ ಅವನ ಮನಸ್ಸು ಬೆಣ್ಣೆಯಂತೆ ಮೃದುವಾಗಿತ್ತು. ಪ್ರತಿದಿನ ಕರೆದ ಹಾಲೆಲ್ಲವನ್ನೂ 'ಗೋಪಾಲಕೃಷ್ಣನ' ಮುಂದೆ ಇಟ್ಟು ನಂತರ ಅದನ್ನು ಅರಮನೆಯ ಉಪಯೋಗಕ್ಕೆ ಕಳುಹಿಸುತ್ತಿದ್ದ. ಅರಮನೆಯ ಎಲ್ಲ ಮಕ್ಕಳಿಗೂ ಹಸುವಿನ ಹಾಲನ್ನು ಬೇರೆಯಾಗಿಟ್ಟು ಪ್ರತಿಯೊಬ್ಬರಿಗೂ ನೀಡಲಾಗುತ್ತಿತ್ತು. ದಿನಕ್ಕೆ ಎರಡು ಪಲ್ಲ ಹುರುಳಿಯನ್ನು ಬೇಯಿಸಿ, ಅದನ್ನು ರುಬ್ಬಿ ದನಗಳಿಗೆ ತಿನ್ನಿಸುತ್ತಿದ್ದರು. ದನಕರುಗಳ ಪೋಷಣೆಗಾಗಿಯೇ ಅರವತ್ತು ಜನ ಸೇವಕರನ್ನು ನೇಮಿಸಿಕೊಳ್ಳಲಾಗಿತ್ತು. ಅವರೆಲ್ಲರ ಮೇಲ್ವಿಚಾರಣೆಯ ಜವಾಬ್ದಾರಿ ಚೆಲುವಯ್ಯನಿಗೆ ಸೇರಿತ್ತು. ಹೀಗಾಗಿ ಅವನ ಸ್ಥಾನ ಉನ್ನತ ಮಟ್ಟದಲ್ಲಿತ್ತು. ಒಂದುಸಲ ಕರಿಯ ಎಂಬ ಆಳೊಬ್ಬನು ಎರಡು ಸೇರು ಹುರುಳಿಯನ್ನು ಕದ್ದು ಪಂಚೆಯಲ್ಲಿ ಕಟ್ಟಿ ಅದನ್ನು ಸೊಂಟಕ್ಕೆ ಸುತ್ತಿಕೊಂಡು ಯಾರಿಗೂ ತಿಳಿಯದಂತೆ ಮನೆಗೆ ಹೊರಟ. ಆದರೆ ಅವನ ದುರಾದೃಷ್ಟ, ಅರಮನೆಯ ದ್ವಾರಪಾಲಕರು ಅನನನ್ನು ತಪಾಸಣೆ ಮಾಡಿದಾಗ ಹುರುಳಿ ಕದ್ದದ್ದನ್ನು ಧೃಢಪಡಿಸಿಕೊಂಡು ಬಂಧಿಸಿ ಚೆಲುವಯ್ಯನ ಎದುರು ನಿಲ್ಲಿಸಿದರು.
ಆ ಆಳು ಚೆಲುವಯ್ಯನನ್ನು ನೋಡಿ ನಡುಗತೊಡಗಿದ. ಇನ್ನೇನು ಶಿಕ್ಷೆ ಕಾದಿದೆಯೋ ಎಂದು ಹೆದರಿದ. ಅವನ ಪರಿಸ್ಥಿತಿ ನೋಡಿ ಚೆಲುವಯ್ಯನ ಮನಸ್ಸಿಗೆ ಪಿಚ್ಚೆನಿಸಿತು. ಮನೆಯಲ್ಲಿ ಕಷ್ಟವಿದ್ದುರಿಂದ ಹೀಗೆ ಮಾಡಿರಬಹುದು ಎಂದು ಭಾವಿಸಿ, ಮೊದಲು ಉತ್ತಮ ಉಸ್ತುವಾರಿಕೆಗಾಗಿ ಸಿಪಾಯಿಯನ್ನು ಹೊಗಳಿದ. ನಂತರ ಆಳು ಕರಿಯನನ್ನುದ್ದೇಶಿಸಿ, 'ಏನೋ ಕರಿಯಾ? ನಾನು ಐದು ಸೇರು ಹುರುಳಿಯನ್ನು ತಗೊಂಡು ಹೋಗಿ ಕೊಟ್ಟುಬಾ ಅಂದರೆ, ನೀನು ಬರೀ ಎಳ್ಡು ಸೇರು ತಗೊಂಡು ಹೋಗ್ತಿದ್ದೀಯಲ್ಲಾ? ಒಳಗೆ ಹೋಗಿ ಇನ್ನೂ ಮೂರು ಸೇರು ತಗೊಂಡು ಹೋಗಿ ಕೊಡು' ಎಂದು ಹೇಳಿದ. ನಂತರ ಅವನನ್ನು ಏಕಾಂತವಾಗಿ ಕರೆಸಿ ಛೀಮಾರಿ ಹಾಕಿದ. 'ನನ್ನನ್ನು ಕೇಳಿದ್ದರೆ ಐದಲ್ಲಾ, ಹತ್ತು ಸೇರು ಹುರುಳಿ ಕೊಡುತ್ತಿದ್ದೆ. ಹೀಗೆ ಕದಿಯುವುದು ಸರಿಯೇ? ಇನ್ನು ಮುಂದೆ ಹೀಗೆ ಮಾಡಬೇಡ..' ಎಂದು ಎಂದು ಕೇಳಿದ. ನಂತರ ಅವನ ತಪ್ಪನ್ನು ಕ್ಷಮಿಸಿ, ಮತ್ತೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದೆಂದು ತಾಕೀತು ಮಾಡಿ ಕಳುಹಿಸಿಕೊಟ್ಟ. ಚೆಲುವಯ್ಯನ ಒಳ್ಳೆಯತನಕ್ಕೆ ಮಾರುಹೋದ ಕರಿಯ ಮುಂದೆ ಉತ್ತಮವಾಗಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.