ಸಂಪಾದಕೀಯ

ಬೆರಗಾದ ನೆಪೋಲಿಯನ್

Published On :

ನೆಪೋಲಿಯನ್ ಬೊನಪಾರ್ಟೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದ ಮಹಾವೀರ. ಫ್ರಾನ್ಸ್‌ನ ಅಧಿಪತಿಯಾಗಿ ಅವನು ತುಂಬಾ ಹೆಸರು ಗಳಿಸಿದ್ದ. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದ. ಅಂತಹ ಒಂದು ಯುದ್ಧ ಇಂಗ್ಲೆಂಡಿನೊಡನೆ ಸಹ ನಡೆಯಿತು. ಆ ಘೋರ ಯುದ್ಧದಲ್ಲಿ ಅನೇಕ ಆಂಗ್ಲ ಸೈನಿರು ಸೆರೆ ಸಿಕ್ಕಿದ್ದರು. ಅವರನ್ನೆಲ್ಲಾ ಸೆರೆಮನೆಗೆ ಕಳುಹಿಸಿ ವಿದ್ರೋಹಿಗಳೆಂಬ ಪಟ್ಟ ಕಟ್ಟಿದ್ದ. ಹೀಗಾಗಿ ಅವರಿಗೆ ಒಂದಿಲ್ಲೊಂದು ದಿನ ಮರಣದಂಡನೆ ಶಿಕ್ಷೆ ಕಾದಿತ್ತು.
ಒಮ್ಮೆ ಒಬ್ಬ ಆಂಗ್ಲ ಖೈದಿಯೊಬ್ಬನನ್ನು ಜೈಲಿನ ತೋಟದಲ್ಲಿ ಕೆಲಸ ಮಾಡಲು ಒಯ್ಯಲಾಗಿತ್ತು. ಸೆರೆಮನೆಯ ಗೋಡೆಗೆ ತಾಗಿಕೊಂಡು ಒಂದು ಮರದ ಒಣ ಬೊಡ್ಡೆ ಇದ್ದುದನ್ನು ಗಮನಿಸಿ, ಅದನ್ನು ಪ್ರತಿದಿನ ಯಾರಿಗೂ ಕಾಣದಂತೆ ಕೆತ್ತಿ ಅದನ್ನು ದೋಣಿಯಂತೆ ಮಾಡಿಕೊಂಡು ಅಲ್ಲಿಯೇ ಮುಚ್ಚಿಟ್ಟಿದ್ದ. ಒಂದುದಿನ ಅದನ್ನು ತೆಗೆದುಕೊಂಡು ಕಣ್ತಪ್ಪಿಸಿ ಹೊರಗೋಡಿದ. ಹಾಗೆ ಹೋಗುವಾಗ ಅಲ್ಲಿಯೇ ಇದ್ದ ಗಿಡದಲ್ಲಿ ಬಿಟ್ಟಿದ್ದ ಕೆಲವು ಸೇಬನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಇನ್ನೇನು ನೀರಿಗೆ ಇಳಿಯಬೇಕು, ಅಷ್ಟರಲ್ಲಿ ನೆಪೋಲಿಯನ್ನನ ಸೈನಿಕರು ಅವನನನ್ನು ಹಿಡಿದು ಚಕ್ರವರ್ತಿಯ ಎದುರು ನಿಲ್ಲಿಸಿದರು. ನೆಪೋಲಿಯನ್‌ಗೆ ನಖಶಿಖಾಂತ ಸಿಟ್ಟುಬಂತು. ಕೈನಲ್ಲಿ ಹಿಡಿದಿದ್ದ ಗಂಟನ್ನು ನೋಡಿ ಅದೇನೆಂದು ವಿಚಾರಿಸಿದ. ಆಗ ಆ ಖೈದಿ ಹೇಳಿದ, 'ಇದರಲ್ಲಿ ಸೇಬಿನ ಹಣ್ಣುಗಳಿವೆ. ಅದನ್ನು ನನ್ನ ಪ್ರೀತಿಯ ತಾಯಿಗೆ ನೀಡಲೆಂದು ತೆಗೆದುಕೊಂಡಿದ್ದೆ.
ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಸಾಕಿ ನನಗೆ ದೇಶಪ್ರೇಮವನ್ನು ಕಲಿಸಿದ್ದಳು. ನಾನು ದೊಡ್ಡವನಾದ ಮೇಲೆ ನನ್ನನ್ನು ಸೈನ್ಯಕ್ಕೆ ಸೇರಿಸಿ ತಾಯಿನಾಡಿನ ಸೇವೆ ಮಾಡಲು ಹರಸಿ ಕಳುಹಿಸಿದ್ದಳು. ಇಂದು ನನ್ನ ತಾಯಿಯನ್ನು ನೋಡುವ ಉತ್ಕಟ ಆಸೆಯಿಂದಾಗಿ ಹೀಗೆ ತಪ್ಪಿಸಿಕೊಳ್ಳುವ ಉಪಾಯ ಮಾಡಿದೆ' ಎಂದು ಹೇಳಿ ಶಿಕ್ಷೆಗೆ ತಯಾರಾಗಿ ನಿಂತುಬಿಟ್ಟ. ತಾಯಿಯ ಬಗ್ಗೆ ಅಗಾಧ ಪ್ರೀತಿಯನ್ನು ಹೊಂದಿದ ಆಂಗ್ಲ ಖೈದಿಯ ಬಗ್ಗೆ ನೆಪೋಲಿಯನ್ನನ ಮನ ಮಿಡಿಯಿತು. ಅವನ ಮಾತೃ ಪ್ರೀತಿ, ದೇಶದ ಬಗ್ಗೆ ಇರಿಸಿಕೊಂಡ ಗೌರವ ಕಂಡು ಸಂತಸವಾಯಿತು. ಅವನನ್ನು ಗೌರವಪೂರ್ವಕವಾಗಿ ಬಿಡುಗಡೆಗೊಳಿಸಿ ಒಂದು ಹಡಗಿನಲ್ಲಿ ಅವನ ದೇಶಕ್ಕೆ ಕಳುಹಿಸಿಕೊಟ್ಟ. ಹಾಗೆಯೇ ಅವನಿಗೆ ಒಂದು ಬುಟ್ಟಿತುಂಬಾ ಸೇಬು ಹಣ್ಣು ತುಂಬಿ ಅವನ ತಾಯಿಗೆ ತನ್ನ ಕಾಣಿಕೆ ಎಂದು ಹೇಳಿ ನೀಡಿದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.