ಸಂಪಾದಕೀಯ

ಪತ್ರಕರ್ತರೆಂದರೆ ಹೀಗಿರಬೇಕು

ಡಿ.ವಿ.ಗುಂಡಪ್ಪನವರು ನಮ್ಮ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಹಾನುಭಾವರು. ಅವರ 'ಮಂಕುತಿಮ್ಮನ ಕಗ್ಗ'ವಂತೂ ಕನ್ನಡದ ...

Published On :

ಡಿ.ವಿ.ಗುಂಡಪ್ಪನವರು ನಮ್ಮ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಹಾನುಭಾವರು. ಅವರ 'ಮಂಕುತಿಮ್ಮನ ಕಗ್ಗ'ವಂತೂ ಕನ್ನಡದ ಭಗವದ್ಗೀತೆ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಅದು ಸರ್.ಎಂ. ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲ. ಆಗ ಯುವಕರಾಗಿದ್ದ ಡಿವಿಜಿ ಪರ್ತಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ದಸರಾ ಉತ್ಸವದಲ್ಲಿನ ಕಾರ್ಯಕ್ರಮಗಳೆಲ್ಲವೂ ಅತ್ಯಂತ ಅದ್ಧೂರಿಯಾಗಿ ನಡೆದವು. ಮಹಾರಾಜರೂ ದಿವಾನರ ಏರ್ಪಾಟನ್ನು ನೋಡಿ ತುಂಬಾ ಸಂತಸಪಟ್ಟರು. ರಾಜ್ಯದ ಎಲ್ಲ ಪತ್ರಿಕೆಗಳೂ ದಸರಾ ಸಮಾರಂಭದ ವಿಶೇಷ ವರದಿಯನ್ನು ಪ್ರಕಟಿಸಿ, ದಸರೆಯ ವೈಭವವನ್ನು ಹಾಡಿ ಹೊಗಳಿದವು. ಇದರಿಂದ ಸಂತುಷ್ಟರಾದ ಮಹಾರಾಜರು ದಿವಾನರ ಮೂಲಕ ಎಲ್ಲ ಪತ್ರಕರ್ತರಿಗೂ ದೊಡ್ಡ ಮೊತ್ತದ ಸಂಭಾವನೆ ಕಳುಹಿಸಿಕೊಟ್ಟರು. ಅದೇ ರೀತಿ ಡಿವಿಜಿಯವರಿಗೂ ಸಹ ಹಣ ತಲುಪಿಸಲಾಯಿತು. ಆದರೆ ಡಿವಿಜಿಯವರು ಹಣವನ್ನು ತೆಗೆದುಕೊಂಡು ಹೋಗಿ ದಿವಾನರನ್ನು ಭೇಟಿ ಮಾಡಿದರು. ಎಂ.ವಿ.ಯವರು ಆದರದಿಂದಲೇ ಡಿವಿಜಿಯವರನ್ನು ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು. ನಂತರ, ಬಂದ ಕಾರಣವನ್ನು ಕೇಳಿದರು. ಆಗ ಗುಂಡಪ್ಪನವರು ತಮಗೆ ಸರ್ಕಾರದ ವತಿಯಿಂದ ಬಂದ ಹಣದ ಬಗ್ಗೆ ಪ್ರಸ್ತಾಪಿಸಿ ಅದನ್ನು ಏಕೆ ಕಳುಹಿಸಲಾಯಿತು ಎಂದು ಕೇಳಿದರು. ಅದಕ್ಕೆ ವಿಶ್ವೇಶ್ವರಯ್ಯನವರು, ದಸರಾ ಉತ್ಸವವನ್ನು ವರದಿಮಾಡಿದ್ದಕ್ಕಾಗಿ ಎಲ್ಲ ಪತ್ರಕರ್ತರಿಗೂ ಅವರ ಓಡಾಟ, ಮತ್ತಿತರ ಖರ್ಚಿಗಾಗಿ ಹಣ ಕಳುಹಿಸಲಾಗಿದೆಯೆಂದು ಸಮಜಾಯಿಷಿ ನೀಡಿದರು. ಅದಕ್ಕೆ ಗುಂಡಪ್ಪನವರು ಹೇಳಿದರು, 'ವರದಿ ಮಾಡುವುದೇ ಪತ್ರಕರ್ತರ ಕರ್ತವ್ಯ. ವರದಿ ಮಾಡಲೆಂದೇ ಸಂಬಳ ಕೊಟ್ಟು ಪತ್ರಿಕೆಯವರು ನೇಮಕ ಮಾಡಿಕೊಂಡಿರುವುದರಿಂದ ಸರ್ಕಾರ ಈ ರೀತಿ ಹಣ ನೀಡುವ ಅವಶ್ಯಕತೆಯಿಲ್ಲವೆಂದು' ನುಡಿದರು. ಅಲ್ಲದೆ ಹಣವನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ವಿನಂತಿಸಿ ಅದನ್ನು ಹಿಂತಿರುಗಿಸಿದರು. ಎಷ್ಟೇ ಹೇಳಿದರೂ ಕೇಳಲೊಲ್ಲದ ಆತ್ಮಾಭಿಮಾನಿ ಡಿವಿಜಿಯವರ ನಿಸ್ಪೃಹತೆ ಮತ್ತು ಪ್ರಾಮಾಣಿಕತೆಗೆ ವಿಶ್ವೇಶ್ವರಯ್ಯನವರು ಮಾರುಹೋದರು. ಸರ್ಕಾರದ ದಾಕ್ಷಿಣ್ಯಕ್ಕೆ ಕಟ್ಟುಬೀಳದ, ಗುಂಡಪ್ಪನವರ ನಿರ್ದಾಕ್ಷಿಣ್ಯ ವ್ಯಕ್ತಿತ್ವ ಅವರಿಗೆ ತುಂಬಾ ಹಿಡಿಸಿತು. ನಂತರ ಅವರು ತಮ್ಮ ಕಾರ್ಯದರ್ಶಿಗೆ ಆ ಹಣವನ್ನು ಹಿಂದಕ್ಕೆ ಪಡೆಯಲು ಆದೇಶಿಸಿದರು. ಅವರಿಗೆ ಗುಂಡಪ್ಪನವರ ಬಗ್ಗೆ ಇದ್ದ ಗೌರವ ಹೆಚ್ಚಾಯಿತು. ಈ ಘಟನೆ ಒಬ್ಬ ನಿಜವಾದ ಪತ್ರಕರ್ತ ಹೇಗಿರಬೇಕು ಎಂಬುದನ್ನು ಸೂಚಿಸುತ್ತದಲ್ಲದೆ, ಪತ್ರಿಕಾ ಧರ್ಮದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುತ್ತದೆ.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.