ಅಯಾಜ್‌ನ ಸ್ವಾಮಿನಿಷ್ಠೆ
ಮಲಿಕ್ ಅಯಾಜ್ 10ನೇ ಶತಮಾನದಲ್ಲಿದ್ದ ಘಜ್ನಿ ಮಹಮ್ಮದನ ಗುಲಾಮ. ತನ್ನ ಸ್ವಾಮಿನಿಷ್ಠೆ, ಪ್ರಮಾಣಿಕತೆ ಮತ್ತು ವಿಧೇಯತೆಯಿಂದಾಗಿ ಸುಲ್ತಾನನ...
ಮಲಿಕ್ ಅಯಾಜ್ 10ನೇ ಶತಮಾನದಲ್ಲಿದ್ದ ಘಜ್ನಿ ಮಹಮ್ಮದನ ಗುಲಾಮ. ತನ್ನ ಸ್ವಾಮಿನಿಷ್ಠೆ, ಪ್ರಮಾಣಿಕತೆ ಮತ್ತು ವಿಧೇಯತೆಯಿಂದಾಗಿ ಸುಲ್ತಾನನ ಪ್ರೀತಿಯನ್ನು ಗಳಿಸಿದ್ದನು. ಅವನೆಂದೂ ಸುಲ್ತಾನನ ಆಜ್ಞೆಗಳನ್ನು ಉಲ್ಲಂಘಿಸುತ್ತಿರಲಿಲ್ಲ. ಸದಾ ಮಹಮ್ಮದನ ಜೊತೆಯಲ್ಲಿಯೇ ಇದ್ದು ಅವನ ಸೇವೆಯನ್ನು ಮಾಡಿಕೊಂಡಿದ್ದನು. ಅವನ ಅನನ್ಯವಾದ ಪ್ರೀತಿ ಮತ್ತು ನಿಷ್ಠೆಯನ್ನು ಕಂಡು ಮಹಮ್ಮದ್ ಅವನನ್ನು ಲಾಹೋರಿನ ಅಧಿಪತಿಯನ್ನಾಗಿ ಮಾಡಿದ. ಇದು ಇತರ ಮಂತ್ರಿಗಳಿಗೆ ಸಹಿಸದಾಯಿತು. ಅವರೆಲ್ಲಾ ಮಹಮ್ಮದನ ಬಳಿ ಬಂದು ಗುಲಾಮನ ಬಗ್ಗೆ ಸುಲ್ತಾನನಿಗೆ ಅದೇಕೆ ಅಷ್ಟು ಪ್ರೀತಿ ಎಂದು ಕೇಳಿದರು. ಅವರ ಮನದಾಳದಲ್ಲಿ ಬೇರೂರಿದ್ದ ಅಸಮಾಧಾನವನ್ನು ಗುರುತಿಸಿದ ಮಹಮ್ಮದ್ ಅವರ ಪ್ರಶ್ನೆಗೆ ಎಂದಾದರೊಂದು ದಿನ ಉತ್ತರಿಸುವುದಾಗಿ ಹೇಳಿ ಕಳುಹಿಸಿದ.
ಅದಾಗಿ ಅನೇಕ ತಿಂಗಳುಗಳ ನಂತರ ಒಂದು ದಿನ ಅಯಾಜ್‌ನನ್ನೂ ಸೇರಿಸಿ ಎಲ್ಲ ಮಂತ್ರಿಗಳನ್ನೂ ಆಸ್ಥಾನಕ್ಕೆ ಕರೆಸಿದ. ನಂತರ ತಾನು ಅರಮನೆಯ ಉದ್ಯಾನವನದಲ್ಲಿ ಮರುದಿನ ಅಡಗಿಕೊಳ್ಳುವುದಾಗಿಯೂ, ಎಲ್ಲರೂ ಬೆಳಿಗ್ಗೆ ಉದ್ಯಾನವನಕ್ಕೆ ಬಂದು ತಾನು ಅಡಗಿರುವ ಸ್ಥಳವನ್ನು ಪತ್ತೆ ಹಚ್ಚಬೇಕೆಂತಲೂ, ಆಗ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಹೇಳಿದ. ಅದಕ್ಕೆ ಎಲ್ಲರೂ ಒಪ್ಪಿ ಹಿಂತಿರುಗಿದರು. ರಾಜನು ನಗರದ ಎಲ್ಲ ಹೆಬ್ಬಾಗಿಲುಗಳ ಬಳಿ ಸಂಗೀತ, ನೃತ್ಯ, ಮತ್ತಿತರ ಮನರಂಜನೆಯನ್ನು ಬೆಳಗಿನಿಂದ ಸಂಜೆವರೆಗೆ ನಡೆಯಬೇಕೆಂದು ಆದೇಶಿಸಿದ. ಅದಕ್ಕಾಗಿ ಸ್ಫುರದ್ರೂಪಿ ಕಲಾವಿದರು ಮತ್ತು ಪ್ರಖ್ಯಾತ ಸಂಗೀತಗಾರರನ್ನು ನೇಮಿಸಿದ. ಮಾರನೇ ದಿನ ಬೆಳಿಗ್ಗೆ ಎಲ್ಲರೂ ರಾಜನನ್ನು ಹುಡುಕಲು ಉದ್ಯಾನವನಕ್ಕೆ ತೆರಳುವಾಗ ರಸ್ತೆಯುದ್ದಕ್ಕೂ ಸಂಗೀತ, ನೃತ್ಯಗಳು ಅವರ ಮನ ಸೆಳೆದವು. ಉದ್ಯಾನವನವೇನು ಅಂಥಾ ದೊಡ್ಡದೇನಲ್ಲ. ಹುಡುಕುವುದು ಸುಲಭ, ಆಮೇಲೆ ಹೋದರಾಯಿತು ಎಂದು ಸಂಗೀತ ಕೇಳುತ್ತಾ, ಸುಂದರಿಯರ ನೃತ್ಯವನ್ನು ವೀಕ್ಷಿಸುತ್ತಾ ಅಲ್ಲಿಯೇ ಕುಳಿತುಬಿಟ್ಟರು. ಇನ್ನೇನು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಸಂಗೀತ - ನೃತ್ಯಗಳು ಮುಗಿದು ಕಲಾವಿದರೆಲ್ಲಾ ಮನೆಯ ಕಡೆಗೆ ಹಿಂದಿರುಗುವಾಗ ರಾಜ ಹೇಳಿದ್ದು ನೆನಪಾಗಿ ಲಗುಬಗೆಯಿಂದ ಅರಮನೆಯ ಉದ್ಯಾನದತ್ತ ತೆರಳಿದರು. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು.
ಅಯಾಜನೊಡನೆ ರಾಜನು ಹಸನ್ಮುಖನಾಗಿ ಹರಟುತ್ತಾ ಎದುರಿಗೆ ಬರುತ್ತಿರುವುದನ್ನು ಕಂಡು ಮೂಕವಿಸ್ಮಿತರಾದರು. ಮಂತ್ರಿಗಳಲ್ಲಿ ಒಬ್ಬ ಅಯಾಜನತ್ತ ತಿರುಗಿ, ಇಲ್ಲಿಗೆ ಯಾವಾಗ ಬಂದೆ? ದಾರಿಯಲ್ಲಿ ಸಂಗೀತ-ನೃತ್ಯಗಳನ್ನು ನೋಡಲಿಲ್ಲವೆ? ಎಂದು ಪ್ರಶ್ನಿಸಿದ. ಅದಕ್ಕೆ ಅಯಾಜ್ ಉತ್ತರಿಸಿದ, 'ನಾನು ಸಂಗೀತವನ್ನಾಗಲೀ, ನೃತ್ಯವನ್ನಾಗಲೀ ಗಮನಿಸಲಿಲ್ಲ. ನನಗಿದ್ದುದು ಒಂದೇ ಚಿಂತೆ. ನನ್ನ ಯಜಮಾನನನ್ನು ಹುಡುಕುವುದು. ಹೀಗಾಗಿ ಇಲ್ಲಿಗೇ ನೇರವಾಗಿ ಬಂದೆ'.
ಆಗ ಮಹಮ್ಮದ್ ಹೇಳಿದ, 'ನೋಡಿ, ಅಯಾಜ್‌ನ ಕಣ್ಣುಗಳು ನನ್ನನ್ನು ಬಿಟ್ಟು ಏನನ್ನೂ ನೋಡಲಿಲ್ಲ. ಅವನ ಹೃದಯದಲ್ಲಿ ನಾನಲ್ಲದೇ ಬೇರೆ ಯಾವುದಕ್ಕೂ ಸ್ಥಳವಿರಲಿಲ್ಲ. ಇಷ್ಟು ಪ್ರೀತಿಸುವನನ್ನು ನಾನು ಹೇಗೆ ತಾನೇ ಉಪೇಕ್ಷಿಸಲಿ?' ರಾಜನ ಮಾತನ್ನು ಕೇಳಿ ಮಂತ್ರಿಗಳೆಲ್ಲರಿಗೂ ನಾಚಿಕೆಯಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

