ಮೇಧಾವಿಯಾದ ತೋಟಕಾಚಾರ್ಯ
8ನೇ ಶತಮಾನದಲ್ಲಿದ್ದ ಆದಿ ಶಂಕರರ ನೇರ ಶಿಷ್ಯರುಗಳೆಂದರೆ ಪದ್ಮಪಾದ, ಹಸ್ತಾಮಲಕ, ಸುರೇಶ್ವರಾಚಾರ್ಯ ಮತ್ತು ತೋಟಕಾಚಾರ್ಯ. ಅವರಲ್ಲಿ ತೋಟಕಾಚಾರ್ಯ ಸ್ವಲ್ಪ ಓದುವುದಲ್ಲಿ ಹಿಂದೆ. ಹೀಗಾಗಿ ಅವರನ್ನು ಕಂಡರೆ ಇತರ ಶಿಷ್ಯರಿಗೆ ಅಲಕ್ಷ್ಯ. ಆದರೆ ಆ ಶಿಷ್ಯ ಶಂಕರರ ಎಲ್ಲ ಸೇವೆಯನ್ನೂ ಅತ್ಯಂತ ನಿಷ್ಠೆಯಿಂದ, ಭಕ್ತಿಯಿಂದ ಮಾಡುತ್ತಿದ್ದ. ಅವರ ಬಟ್ಟೆಗಳನ್ನು ಒಗೆಯುವುದು, ಪೂಜೆಗೆ ಅಣಿಗೊಳಿಸುವುದು, ಆಹಾರ ಸಿದ್ಧಗೊಳಿಸುವುದು - ಹೀಗೆ ಹತ್ತು ಹಲವು ಸೇವೆಗಳನ್ನು ಆತ ಮಾಡುತ್ತಿದ್ದ. ಆದರೆ ಇತರ ಶಿಷ್ಯರಂತೆ ಕಲಿಯುವುದರಲ್ಲಿ ಮುಂದಿರಲಿಲ್ಲ. ಒಮ್ಮೆ ಶಂಕರರು ತಮ್ಮ ಶಿಷ್ಯರಿಗೆ ಬ್ರಹ್ಮ ಸೂತ್ರದ ತರಗತಿಗಳನ್ನು ನಡೆಸುತ್ತಿದ್ದರು. ಎಲ್ಲ ಶಿಷ್ಯರು ಬಂದರೂ ತೋಟಕಾಚಾರ್ಯನ ಸುಳಿವಿಲ್ಲ. ಗುರುಗಳ ಬಟ್ಟೆ ಒಗೆಯುವುದರಲ್ಲಿ ನಿರತನಾಗಿದ್ದರಿಂದ ಸಕಾಲಕ್ಕೆ ತೋಟಕಾಚಾರ್ಯ ಆಗಮಿಸಲಿಲ್ಲ. ಆಗ ಶಿಷ್ಯರು 'ಹೇಗಿದ್ದರೂ ಆತನಿಗೆ ಬ್ರಹ್ಮ ಸೂತ್ರ ಅರ್ಥವಾಗದೇ ಇರುವುದರಿಂದ ತಮಗೆ ಪಾಠವನ್ನು ಮುಂದುವರೆಸಬೇಕೆಂದು' ಕೇಳಿಕೊಂಡರು. ಅವರ ಮಾತಿನಲ್ಲಿ ಅಹಂಕಾರವೂ, ತೋಟಕಾಚಾರ್ಯನ ಬಗ್ಗೆ ತಿರಸ್ಕಾರವೂ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಶಂಕರರು ತಮ್ಮ ಶಿಷ್ಯರ ಅಹಂಕಾರವನ್ನೂ, ಮೇಲರಿಮೆಯನ್ನೂ ಹೋಗಲಾಡಿಸಿ ಸರಿಯಾದ ಬುದ್ಧಿ ಕಲಿಸಬೇಕೆಂದು ನಿಶ್ಚೈಸಿ ವಿಶೇಷ ಅನುಗ್ರಹದಿಂದ ತೋಟಕಾಚಾರ್ಯನನ್ನು ಪಂಡಿತೋತ್ತಮನನ್ನಾಗಿ ಮಾಡಿದರು. ನಂತರ ತೋಟಕಾಚಾರ್ಯರು ತಮ್ಮ ಗುರುವನ್ನು ಸ್ತುತಿಸುವ 'ತೋಟಕಶತಕ'ವನ್ನು ಸಂಸ್ಕೃತದಲ್ಲಿ ರಚಿಸಿ ಪ್ರಖ್ಯಾತರಾದರು. ಅಲ್ಲದೆ ಬ್ರಹ್ಮ ಸೂತ್ರವನ್ನು ಎಲ್ಲರಿಗಿಂತಲೂ ಮೊದಲು ಕಲಿತರು. ತೋಟಕಶತಕವನ್ನು ಆಲಿಸಿದ ಇತರ ಶಿಷ್ಯರು ತೋಟಕಾಚಾರ್ಯನ ವಿದ್ವತ್ತನ್ನು ಕಂಡು ಮೂಕವಿಸ್ಮಿತರಾದರು ಮತ್ತು ತಮ್ಮ ಅಹಂಕಾರಕ್ಕೆ ಪಶ್ಚಾತ್ತಾಪಪಟ್ಟರು. ನಂತರ ಬದರಿಯ ಬಳಿಯಿರುವ ಶಂಕರರು ಸ್ಥಾಪಿಸಿದ ಮಠದ ಮೊದಲ ಪೀಠಾಧಿಪತಿಯಾಗಿ ತೋಕಾಚಾರ್ಯರು ಹೆಸರು ಗಳಿಸಿದರು. ಶಂಕರರ ಉಪನಿಷದ್ ಭಾಷ್ಯಕ್ಕೆ ಟೀಕೆಗಳನ್ನು ಬರೆದು ಮತ್ತು ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಗುರುವಿನ ಸೇವೆಯನ್ನು ಪರಿಶುದ್ಧ ಮನಸ್ಸಿನಿಂದ ಮಾಡುವವರಿಗೆ ಎಂದಿಗೂ ಉತ್ತಮ ಭವಿಷ್ಯವಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

