ರಾಜನ ರೋಗಕ್ಕೆ ಮದ್ದು
15ನೇ ಶತಮಾನದಲ್ಲಿ ತಮಿಳುನಾಡಿನ ನಾಗೋರ್‌ನಲ್ಲಿ ರಾಘವಯ್ಯ ಎಂಬ ಹಿಂದು ಸಂತ ಮತ್ತು ನಾಗೋರ್ ಆಂಡವನ್ ಎಂಬ ಮುಸ್ಲಿಂ ಫಕೀರ ಇದ್ದರು...
15ನೇ ಶತಮಾನದಲ್ಲಿ ತಮಿಳುನಾಡಿನ ನಾಗೋರ್‌ನಲ್ಲಿ ರಾಘವಯ್ಯ ಎಂಬ ಹಿಂದು ಸಂತ ಮತ್ತು ನಾಗೋರ್ ಆಂಡವನ್ ಎಂಬ ಮುಸ್ಲಿಂ ಫಕೀರ ಇದ್ದರು. ಅವರಿಬ್ಬರೂ ಅವಧೂತರಾಗಿದ್ದು ಒಬ್ಬರನ್ನೊಬ್ಬರು ಗೌರವಿಸುತ್ತಾ ಸೌಹಾರ್ದ ಜೀವನ ನಡೆಸುತ್ತಿದ್ದರು. ಇಂದಿಗೂ ನಾಗೋರ್‌ನಲ್ಲಿರುವ ದರ್ಗಾಕ್ಕೆ ವಿಶ್ವಾದ್ಯಂತ ಇರುವ ಲಕ್ಷಾಂತರ ಭಕ್ತರು ಭೇಟಿಕೊಡುತ್ತಾರೆ. ಹೀಗಾಗಿ ಇದೊಂದು ಪವಿತ್ರಕ್ಷೇತ್ರವಾಗಿ ಬದಲಾಗಿದೆ.
ಒಮ್ಮೆ ತಂಜಾವೂರಿನ ರಾಜನಿಗೆ ವಿಪರೀತ ಖಾಯಿಲೆಯಾಯಿತು. ಇನ್ನೇನು ಈಗಲೋ ಆಗಲೋ ಎಂಬ ಸ್ಥಿತಿಗೆ ತಲುಪಿದ. ಎಂಥೆಂಥ ಪರಮ ವೈದ್ಯರು ಬಂದರೂ ಅವನ ರೋಗವನ್ನು ವಾಸಿಮಾಡಲಾಗಲಿಲ್ಲ. ಎಲ್ಲರೂ ಅವನು ಬದುಕುವ ಆಸೆಯನ್ನೇ ತೊರೆದು ದೇವರ ಮೇಲೆ ಭಾರ ಹಾಕಿ ಸುಮ್ಮನಾದರು. ಆಗ ಅರಮನೆಯ ಹೆಬ್ಬಾಗಿಲಿಗೆ ರಾಘವಯ್ಯ ಆಗಮಿಸಿ, ತಾನು ರಾಜನಿಗೆ ಏನಾದರೂ ಸಹಾಯಮಾಡಬಹುದೋ ಎಂದು ಬಂದಿದ್ದೇನೆ ನನ್ನನ್ನು ಒಳಗೆ ಬಿಡಿ ಎಂದು ಕಾವಲುಗಾರರನ್ನು ಕೇಳಿಕೊಂಡ. ಆದರೆ ಅವನೊಬ್ಬ ಭಿಕ್ಷುಕನೆಂದು ಭಾವಿಸಿ ಅವನಿಗೆ ಪ್ರವೇಶಾವಕಾಶ ನೀಡಲಿಲ್ಲ. ಕೊನೆಗೆ ರಾಜಮಾತೆಯ ನೆರವಿನಿಂದ ಅವನನ್ನು ರಾಜನು ಮಲಗಿದ್ದಲ್ಲಿಗೇ ಕರೆದೊಯ್ದರು. ಆಗ ರಾಘವಯ್ಯ ನಸುನಗುತ್ತಾ, 'ಊರ ಹೊರಗಿರುವ ನಾಗೋರ್ ಆಂಡವನ್‌ನನ್ನು ಭೇಟಿ ಮಾಡಿ. ಆತ ರಾಜನ ಖಾಯಿಲೆಯನ್ನು ಗುಣಪಡಿಸಬಲ್ಲ' ಎಂದು ಸಲಹೆ ನೀಡಿ ಅಲ್ಲಿಂದ ತೆರಳಿದ. ಆಗ ಸ್ವತಃ ರಾಜಮಾತೆಯೇ ಆಂಡವನ್ ಬಳಿ ತೆರಳಿ, ಹೇಗಾದರೂ ಮಾಡಿ ತನ್ನ ಮಗನನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡಳು. ಒಂದರಗಳಿಗೆ ಕಣ್ಣು ಮುಚ್ಚಿಕೊಂಡು ಧ್ಯಾನಿಸಿ, ಆಂಡವನ್ ನುಡಿದ, 'ಈಗಲೇ ಅರಮನೆಗೆ ಹಿಂತಿರುಗಿ, ರಾಜ ಮಲಗಿರುವ ಕಡೆ ಮೇಲ್ಚಾವಣಿಯನ್ನು ಒಡೆದು ಹಾಕಿ. ಅದರೊಳಗೊಂದು ಪಾರಿವಾಳ ಸಾವು-ಬದುಕಿನ ನಡುವೆ ನರುತ್ತಿದೆ. ಅದನ್ನು ಮೊದಲು ರಕ್ಷಿಸಿ' ಎಂದು ತಿಳಿಸಿ, ಪುನಃ ಕಣ್ಣು ಮುಚ್ಚಿದ. ಅವನ ಸಲಹೆಯಂತೆ ರಾಜನ ಕೋಣೆಯ ಮೇಲ್ಭಾಗದ ಛಾವಣಿಯನ್ನು ಒಡೆಯುತ್ತಿರುವಾಗ ಅದರೊಳಗೊಂದು ಪಾರಿವಾಳ, ಜೀವನ್ಮರಣದಲ್ಲಿ ತೊಯ್ದಾಡುತ್ತಿರುವುದನ್ನು ಕಂಡರು. ಆಗ ಅದನ್ನು ಜಾಗ್ರತೆಯಿಂದ ಕೆಳಗಿಳಿಸಿ, ಅದಕ್ಕೆ ತಕ್ಕ ಆರೈಕೆ ಮಾಡಿ ಉಪಚರಿಸಿದರು. ಅದು ಕ್ರಮೇಣ ಗುಣಹೊಂದಿದಂತೆ ರಾಜನ ಆರೋಗ್ಯವೂ ಸುಧಾರಿಸಿತು. ನಂತರ ತಿಳಿಯಿತು, ಅಲ್ಲಿದ್ದ ಪಾರಿವಾಳಗಳು ಕೊಳಕು ಮಾಡುತ್ತಿದ್ದುದರಿಂದ ಆ ಭಾಗವನ್ನು ಮುಚ್ಚಲಾಗಿತ್ತು. ರಾಜನಿಗೆ ಆಗ ಜ್ಞಾನೋದಯವಾಯಿತು, ಎಲ್ಲ ಜೀವಿಗಳೂ ಪವಿತ್ರಾತ್ಮವನ್ನು ಹೊಂದಿವೆ, ಅವುಗಳಿಗೆ ತೊಂದರೆಮಾಡಬಾರದು ಎಂದು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

