ಸಂಪಾದಕೀಯ

ಗದರಿದ ಮಾಸ್ತಿ, ಬೆದರದ ನೌಕರ

Published On :

ಮಾಸ್ತಿ ವೆಂಕಟೇಶ ಅಯ್ಯಂಗಾರರು ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಅವರೆಂದೂ ತಮ್ಮ ಅಧೀನ ಅಧಿಕಾರಿಗಳಿಗೆ ಬಿರು ಮಾತಾಡುತ್ತಿರಲಿಲ್ಲ. ಅವರ ಮಾತು ಎಷ್ಟು ಮೃದುವೋ ಅವರ ಔದಾರ್ಯವೂ ಅಷ್ಟೇ ಹೆಸರುವಾಸಿಯಾಗಿತ್ತು. ಎಂದೂ ಯಾರನ್ನೂ ನಿಂದಿಸಿದ್ದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಂಡು ಕೆಲಸ ಮಾಡಿಸಿಕೊಂಡು ಹೋಗುವ ಅವರ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಸಹನಾಮೂರ್ತಿ ತಮ್ಮ ಸಹೋದ್ಯೋಗಿಗೊಮ್ಮೆ ಗದರಿಸಿದ ಅಪರೂಪದ ಪ್ರಸಂಗ ಇಲ್ಲಿದೆ. 1931ರ ಸಮಯ. ಮಾಸ್ತಿಯವರು ಮೈಸೂರು ಸರ್ಕಾರದಲ್ಲಿ ಜನಗಣತಿ ಇಲಾಖೆಯಲ್ಲಿ ಸೆನ್ಸಸ್ ಸೂಪರಿಂಟೆಂಡೆಂಟ್ ಆಗಿದ್ದರು. ತಮ್ಮ ಕಚೇರಿಯ ನೌಕರರನ್ನು ಗುಂಪು ಗುಂಪಾಗಿ ವಿಂಗಡಿಸಿ, ಒಂದೊಂದು ಗುಂಪಿಗೂ ನಿರ್ದಿಷ್ಟ ಕೆಲಸ ನೀಡಿದ್ದರು. ಇಂತಹ ಒಂದು ಗುಂಪಿನಲ್ಲಿ ಎ.ಹೆಚ್.ಗೋಪಾಲರಾವ್ ಎಂಬ ಬಿಸಿ ರಕ್ತದ ತರುಣನೂ ಒಬ್ಬ. ಆತ ಅದೇ ತಾನೇ ಎಂ.ಎ.ಮುಗಿಸಿ, ಅಲ್ಲಿ ತಾತ್ಕಾಲಿಕ ಹುದ್ದೆಯಲ್ಲಿದ್ದ. ಮಾಸ್ತಿಯವರು ಆಗಾಗ್ಗೆ ತಮ್ಮ ನೌಕರರ ಕೆಲಸವನ್ನು ಪರಿಶೀಲಿಸಲು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಮೇಜಿನ ಬಳಿಯೇ ಬರುತ್ತಿದ್ದುದುಂಟು.
ಹೀಗೆ ಒಮ್ಮೆ ಅವರು ಬಂದಾಗ ಗೋಪಾಲರಾವ್, ಟಾಲ್‌ಸ್ಟಾಯ್ ಅವರ ಕಾದಂಬರಿಯೊಂದನ್ನು ತದೇಕ ಚಿತ್ತದಿಂದ ಓದುತ್ತಿದ್ದ! ಮಾಸ್ತಿ ಆತನಿಗೆ ಬುದ್ಧಿ ಹೇಳಿ, ಹೀಗೆ ಕಚೇರಿಯ ಕೆಲಸದ ವೇಳೆಯನ್ನು ದುರಪಯೋಗ ಮಾಡಬಾರದೆಂದು ತಾಕೀತು ಮಾಡಿದರು. ಇದಾಗಿ ಕೆಲವು ದಿನಗಳ ನಂತರ ಪರಿಶೀಲನೆಗಾಗಿ ಬಂದ ಮಾಸ್ತಿಯವರಿಗೆ ಗೋಪಾಲರಾವ್ ಮೇಜಿನ ಮೇಲಿದ್ದ ಹೆಚ್.ಜಿ.ವೆಲ್ಸ್‌ನ ಕಾದಂಬರಿಯೊಂದು ಕಂಡು ಬಂತು. ಆಗ ಮಾಸ್ತಿಯವರಿಗೆ ಸ್ವಲ್ಪ ಕೋಪಬಂತು. ಆಗ ಅವರು ಇಂಗ್ಲಿಷಿನಲ್ಲಿ, 'ನೀವು ಹೀಗೆ ಕಚೇರಿಯ ವೇಳೆಯಲ್ಲಿ ಕಾದಂಬರಿಗಳನ್ನು ಓದುವ ಅಬ್ಯಾಸ ಹೊಂದಿರುವುದು ಸರಿಯಲ್ಲ' ಎಂದರು.
ಅದಕ್ಕೆ ಗೋಪಾಲರಾವ್ ಸ್ವಲ್ಪ ಉದ್ಧಟತನದಿಂದ ತಾನು ಕಚೇರಿಯ ಬಿಡುವಿನ ವೇಳೆಯಲ್ಲಿ ಮಾತ್ರ ಓದುವುದಾಗಿ ಉತ್ತರಿಸಿದ. ಆಗ ಎಂದೂ ಕೆರಳದ ಮಾಸ್ತಿ 'ನಿಮಗೆ ನಿಮ್ಮ ಎಂ.ಎ.ಪದವಿಯ ಬಗ್ಗೆ ಜಂಭವಿರುವಂತಿದೆ' ಎಂದು ಗದರಿದರು. ಅದಕ್ಕೆ ಸೊಪ್ಪು ಹಾಕದ ಗೋಪಾಲರಾವ್, 'ಹಾಗೇನಾದರೂ ಗರ್ವವಿದ್ದಿದ್ದರೆ, ಒಬ್ಬ ಎಂ.ಎ. ಕೈಕೆಳಗೆ ಇನ್ನೊಬ್ಬ ಎಂ.ಎ. ಕೆಲಸ ನಿರ್ವಹಿಸುತ್ತಿರಲಿಲ್ಲ' ಎಂದು ಮಾರುತ್ತರಿಸಿದ. ಮಾಸ್ತಿ ಏನೂ ಮಾತನಾಡದೆ ತಮ್ಮ ಕೊಠಡಿಗೆ ಹೋಗಿ ತಾವು ತಮ್ಮ ಸಹೋದ್ಯೋಗಿಯ ಮೇಲೆ ಎಲ್ಲರ ಎದುರು ಗದರಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡರು. ಆತನ ಸ್ವಾಭಿಮಾನವನ್ನು ಮೆಚ್ಚಿ, ಅವರನ್ನು ಸೆಕ್ರಟೇರಿಯಟ್‌ನಲ್ಲಿ ಖಾಯಂ ಆಗಿ ನೇಮಕ ಮಾಡಿಕೊಳ್ಳಬಹುದೆಂದು ಶಿಫಾರಸು ಮಾಡಿದರು. ತನ್ನನ್ನು ಕೆಲಸದಿಂದ ತೆಗೆದು ಹಾಕಬಹುದೆಂದು ತಿಳಿದಿದ್ದ ಗೋಪಾಲರಾವ್, ಮಾಸ್ತಿಯವರ ದೊಡ್ಡ ಗುಣಕ್ಕೆ ಮಾರುಹೋದ!


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.