ಸಂಭಾವನೆ ನಿರಾಕರಿಸಿದ ಮಹಮದ್ ರಫಿ
ಹಿಂದಿ ಸಿನಿಮಾ ಜಗತ್ತಿನಲ್ಲಿ ಸಿನಿಮಾ ಕಥೆಗಿದ್ದಂತೆ ಸಂಗೀತಕ್ಕೂ ಹೆಚ್ಚು ಮಹತ್ವವಿದೆ. ಅದರಲ್ಲೂ ಹಳೆಯ ಹಿಂದಿ ಹಾಡುಗಳನ್ನು ಕೇಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಆ ಹಾಡುಗಳಲ್ಲಿರುವ ಮಾಧುರ್ಯ. ಇಂತಹ ಒಂದು ಹಾಡು ನೌಷಾದ್ ರಾಗ ಸಂಯೋಜನೆಯ ಮಹಮ್ಮದ್ ರಫಿ ಹಾಡಿರುವ 'ಕೊಹಿನೂರ್ ಚರಿತ್ರ'ದ 'ಮಧು ಬನಮೆ ರಾಧಿಕಾ ನಾಚೇರೆ' ಗೀತೆ. 1960ರ ವೇಳೆಗೆ ತಯಾರಾದ ಕೊಹಿನೂರ್ ಚರಿತ್ರಕ್ಕೆ ಸಂಯೋಜಿಸಿದ ಹಾಡುಗಳೆಲ್ಲವನ್ನೂ ಮೊದಲು ನಿರ್ಮಾಪಕರಿಗೆ ಕೇಳಿಸಲಾಯಿತು. ಈ ಚಿತ್ರದ ನಿರ್ಮಾಪಕ ಡಾ.ವಿ.ಎನ್.ಸಿನ್ಹ, ನೌಷಾದ್ ಅವರು ಅತ್ಯಂತ ಕಾಳಜಿಯಿಂದ ರಾಗ ಸಂಯೋಜಿಸಿದ ಗೀತೆಗಳನ್ನು ಕೇಳಿ ತುಂಬಾ ಸಂತೋಷಪಟ್ಟರು. ಆದರೆ ಒಂದು ಹಾಡು ಅದೇ ಮೇಲೆ ನಮೂದಿಸಿದ ಹಾಡು ಕೇಳಿ, ರಾಗ 'ಹಮೀರ'ದಲ್ಲಿ ಸಂಯೋಜಿಸಿದ ಬಗ್ಗೆ ತಕರಾರು ತೆಗೆದರು. ಆ ರಾಗ ತುಂಬಾ ಹಳೆಯದೆಂದೂ ಅದನ್ನು ಜನ ಮೆಚ್ಚಲಾರರು ಎಂದು ತಮ್ಮ ಸಂದೇಹವನ್ನು ತೋಡಿಕೊಂಡರು. ಅಲ್ಲದೆ ಅದನ್ನು ಬೇರೆ ರಾಗದಲ್ಲಿ ಸಂಯೋಜಿಸಬೇಕೆಂದು ಸಹ ಸಲಹೆ ನೀಡಿದರು. ಇವರ ಚರ್ಚೆಯನ್ನು ಗಮನಿಸುತ್ತಿದ್ದ ರಫಿ ಸಿನ್ಹಾರವರ ಸಲಹೆಯನ್ನು ವಿರೋಧಿಸಿದರು. ನೌಷಾದ್ ಸಹ ಆ ಹಾಡಿಗೆ ಬೇರೆ ರಾಗಹಾಕಿ ಹಾಡಿಸುವುದನ್ನು ಒಪ್ಪಲಿಲ್ಲ. ಇದೊಂದು ಕಗ್ಗಂಟಾಗಿ ಇನ್ನೇನು ಈ ಹಾಡಿನ ಗಲಾಟೆಯಲ್ಲಿ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಶಂಕೆ ನಿರ್ಮಾಪಕರಲ್ಲಿ ಮೂಡಿತು. ಕೊನೆಗೆ ಮಹಮದ್ ರಫಿ, ಹಾಡು ಅದೇ ರಾಗದಲ್ಲಿರಲಿ, ಒಂದುವೇಳೆ ಜನ ಮೆಚ್ಚದಿದ್ದರೆ ತಮಗೆ ಸಂಭಾವನೆಯನ್ನೇ ಕೊಡುವ ಅವಶ್ಯಕತೆಯಿಲ್ಲ, ಒಂದು ವೇಳೆ ಆ ಹಾಡು ಯಶಸ್ವಿಯಾದರೆ ಮಾತ್ರ ಸಂಭಾವನೆ ಸ್ವೀಕರಿಸುವುದಾಗಿ ಹೇಳಿದರು. ಕೊನೆಗೆ ಮನಸ್ಸಿಲ್ಲದಿದ್ದರೂ ಆ ಹಾಡನ್ನು ಅದೇರೀತಿಯಾಗಿ ಉಳಿಸಿಕೊಂಡರು. ಚಿತ್ರೀಕರಣವೆಲ್ಲಾ ಮುಗಿದು ಚಿತ್ರ ಬಿಡುಗಡೆಯಾದಾಗ ಅಚ್ಚರಿ ಕಾದಿತ್ತು. ರಫಿಯವರ ಆ ಹಾಡಿಗೆ ದಿಲೀಪ್ ಕುಮಾರ್ ಅದ್ಭುತವಾಗಿ ನಟಿಸಿದ್ದರು. ಜನ ಆ ಹಾಡನ್ನು ಬಹುವಾಗಿ ಮೆಚ್ಚಿಕೊಂಡರು. ಅದಕ್ಕೂ ಮಿಗಿಲಾಗಿ ಆ ಚಿತ್ರ ಯಶಸ್ಸು ಗಳಿಸಲು ಆ ಹಾಡು ನೆರವಾಯಿತು. ಚಿತ್ರಪ್ರೇಮಿಗಳು ಆ ಹಾಡನ್ನು ಕೇಳಲೆಂದೇ ಹಲವುಬಾರಿ ಸಿನಿಮಾ ನೋಡಿದ್ದುಂಟು. ಇಂದಿಗೂ ಈ ಹಾಡಿನ ಕೇಳುಗರಿದ್ದಾರೆ ಎಂದರೆ ಅದರ ಜನಪ್ರಿಯತೆಯ ಅರಿವಾದೀತು. ಚಿತ್ರ ಅದ್ಭುತ ಯಶಸ್ಸು ಗಳಿಸಿದ್ದನ್ನು ಗಮನಿಸಿದ ಡಾ. ಸಿನ್ಹಾ ಒಂದು ದಿನ ಮಹಮ್ಮದ್ ರಫಿಯವರ ಬಳಿ ಸಾರಿ ಅಭಿನಂದಿಸಿದರು. 'ಅದೆಷ್ಟು ಸಂಭಾವನೆ ಬೇಕು ಕೇಳಿ, ಕೊಡಲು ಸಿದ್ಧ' ಎಂದರು. ಆಗ ರಫಿ ಹೇಳಿದರು, 'ನನಗಾಗಲೇ ಸಂಭಾವನೆ ದೊರಕಿದೆ, ಅದು ನಿಮ್ಮಿಂದಲ್ಲ ಜನರಿಂದ. ಅವರು ತನ್ನ ಈ ಹಾಡನ್ನು ಮೆಚ್ಚಿಕೊಂಡಿದ್ದೇ ಬಹುದೊಡ್ಡ ಸಂಭಾವನೆ' ಎಂದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

