ಬೇಂದ್ರೆ ಮತ್ತು ಸಾಧನಕೇರಿ
ಧಾರವಾಡದ ಪಶ್ಚಿಮಕ್ಕೆ ಮಲೆನಾಡಿನ ಸೆರಗಿನಲ್ಲಿ ಪುಟ್ಟದಾದರೂ ಅಂದವಾಗಿ ಬೆಳೆದಿರುವ ಸಾಧನಕೇರಿ ಎಲ್ಲರ ಮನ ಸೆಳೆಯುವ ಸೂಜಿಗಲ್ಲು. ಇದು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು, ವರಕವಿ ದ.ರಾ.ಬೇಂದ್ರೆ, ಖ್ಯಾತ ಸಂಶೋಧಕ ಶಂ.ಬಾ. ಜೋಷಿ ಮುಂತಾದವರು ನೆಲೆಸಿದ್ದ ಪುಣ್ಯಭೂಮಿ. ಅದೊಂದು ಸಾಹಿತ್ಯಾಸಕ್ತರ ಆಗರ. ಸಾಹಿತ್ಯ ಲೋಕದ ಗಣ್ಯಾತಿಗಣ್ಯರು ಪ್ರೀತಿಯಿಂದ ಭೇಟಿ ನೀಡಿದ ಸುಂದರತಾಣ. ಈಗಲೂ ಇಲ್ಲಿ ನಿರ್ಮಿಸಿರುವ 'ಬೇಂದ್ರೆ ಭವನ' ಶ್ರೀಮಾತಾದ ಪಕ್ಕದಲ್ಲಿ ಶೋಭಿಸುತ್ತಿದ್ದು, ಸಾಹಿತ್ಯ ಪ್ರಿಯರ, ಪ್ರವಾಸಿಗರ ಲಕ್ಷ್ಯ ಸೆಳೆಯುತ್ತಿದೆ. ಬೇಂದ್ರೆಯವರು ಜೀವನದ ಹೆಚ್ಚು ಭಾಗವನ್ನು ಕಳೆದಿದ್ದು ಇಲ್ಲಿಯೇ. ಅವರಿಗಿದು ಸಾಧನಾ ಸ್ಥಳವಾಗಿ ಪರಿಣಮಿಸಿತು. 'ಬಾರೋ ಸಾಧನ ಕೇರಿಗೆ' ಎಂಬ ಭಾವಗೀತೆಯಲ್ಲಿನ ಮನೆಯ ಸುತ್ತಣ ಪರಿಸರದ ವರ್ಣನೆ ಸಾಧನಕೇರಿಯ ಸೌಂದರ್ಯವನ್ನು ಹೇಳುತ್ತದೆ.
ಒಮ್ಮೆ ಬೇಂದ್ರೆಯವರ ಮನೆಗೆ ಕೆಲವು ಅತಿಥಿಗಳು ನಡುರಾತ್ರಿ ಬಂದು ಬಾಗಿಲು ಬಡಿದರು. ಬೇಂದ್ರೆಯವರು ಬಾಗಿಲು ತೆರೆದು ನೋಡಿದರೆ ಮೂವರೂ ಪರಿಚಿತರೇ. 'ಇದೇನು ಇಷ್ಟೊತ್ತಿನ್ಯಾಗ? ಕಳ್ಳರು ಬರೋ ಸಮಯ ಇದು!' ಅಂದರು. ಬಂದಿದ್ದವರಲ್ಲಿ ಒಬ್ಬರು ತಾವು ಗೋವಾಕ್ಕೆ ಹೊರಟಿದ್ದಾಗಿಯೂ, ಹಾಗೆಯೇ ಬೇಂದ್ರೆಯವರನ್ನು ನೋಡಿಕೊಂಡು ಹೋಗಲು ಬಂದಿರುವುದಾಗಿಯೂ ತಿಳಿಸಿದರು. ಅಲ್ಲದೆ, 'ಬಾರೋ ಸಾಧನ ಕೇರಿಗೆ ಅಂತ ಬರೆದದ್ದಕ್ಕೆ ಬಂದಿದ್ದೇವೆ' ಎಂದಾಗ ಎಲ್ಲರೂ ನಕ್ಕರು. ಆ ಮಧ್ಯ ರಾತ್ರಿಯಲ್ಲಿಯೂ ಬೇಂದ್ರೆಯವರು ತಾವು ಆ ಕವನ ಏಕೆ ಬರೆದೆ ಎಂಬುದರ ವಿವರಣೆ ನೀಡಿದರು. ಅವರು ಗದಗಿನ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲೊಂದು ಸಾಹಿತ್ಯ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಬಿ.ಎಂ.ಶ್ರೀ ಯವರು ಬಂದಿದ್ದರು. 21 ಜೋಡಿ ಎತ್ತಿನ ಬಂಡಿಜೊತೆಗೆ ಬಿ.ಎಂ.ಶ್ರೀ ಮತ್ತು ಬೇಂದ್ರೆಯವರ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ ಇಬ್ಬರ ಭಾಷಣವೂ ನಡೆಯಿತು. ಬಿ.ಎಂ.ಶ್ರೀ.ಯವರಿಂದ ಬೇಂದ್ರೆ ಗುಣಗಾನವೂ ಆಯಿತು. ಅವರ ಕವನಗಳ ಕೆಲವು ಸಾಲುಗಳನ್ನು ಉದ್ಧರಿಸಿ, ಬೇಂದ್ರೆಯವರ ಕಾವ್ಯಾಸಕ್ತಿಯನ್ನು ಮತ್ತು ಅದರಲ್ಲಡಗಿರುವ ಸತ್ವವನ್ನು ಮನಸಾರೆ ಹೊಗಳಿದರು. ಬೇಂದ್ರೆಯವರಿಗೆ ಸನ್ಮಾನ ಸಹಿತ ಆಯಿತು. ಗದಗಿನ ತುಂಬ ಜನ ಬೇಂದ್ರೆ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಅವರು ಮನೆಗೆ ಬಂದಾಗ ಆಗಲೇ ರಾತ್ರಿಯಾಗಿತ್ತು. ಅವರ ಪತ್ನಿ ಶಾಲೆಯಲ್ಲಿ ಒಂದು ಲಕೋಟೆ ಕೊಟ್ಟು ಹೊಗಿರುವ ವಿಚಾರವನ್ನು ಹೇಳಿದಾಗ, ಅದು ಬಹುಶಃ ತಮ್ಮ ಬಗ್ಗೆ ಮೆಚ್ಚುಗೆಯ ಪತ್ರವಿರಬೇಕು ಎಂದು ಭಾವಿಸಿ ಲಕೋಟೆಯನ್ನು ತೆರೆದು ನೋಡಿದರು. ಅವರಿಗೆ ಸಿಡಿಲು ಬಡಿದಂತಾಯಿತು. ಅದರಲ್ಲಿ 'ನಿಮ್ಮನ್ನು ನೌಕರಿಯಿಂದ ತೆಗೆಯಲಾಗಿದೆ. ನಾಳೆ ಶಾಲೆಗೆ ಬರುವ ಅವಶ್ಯಕತೆಯಿಲ್ಲ' ಎಂದು ಬರೆಯಲಾಗಿತ್ತು. ಅವರಿಗೆ ನೆಲೆಇಲ್ಲದಂತಾಗಿ ಪರಿತಪಿಸುವಂತಾಯಿತು. ಯಾಕೆ ನೌಕರಿಯಿಂದ ತೆಗೆದರು ಎಂದು ಇವರೂ ಕೇಳಲಿಲ್ಲ, ಸಂಸ್ಥೆಯವರೂ ಹೇಳಲಿಲ್ಲ. ಮುಂದೇನು ಎಂದು ದಿಗ್ಭ್ರಮೆಯಾದಾಗ ಅವರನ್ನು 'ಇಲ್ಲೇ ಬಾ' ಅಂತ ಕರೆದದ್ದು ಸಾಧನ ಕೇರಿ. ಆಗ ಅವರು ಬರೆದ ಪ್ರಸಿದ್ಧ ಕವನ, 'ಬಾರೋ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ'!
ಈ ಅಪೂರ್ವ ಸಂಗತಿಯನ್ನು ಸುರೇಶ ವೆಂ.ಕುಲಕರ್ಣಿಯವರು ಲೇಕನವೊಂದರಲ್ಲಿ ದಾಖಲಿಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

