ಸಂಪಾದಕೀಯ

ಲಾವಾರಿಸ್ ಬಾಬಾನ ನಿಸ್ವಾರ್ಥ ಸೇವೆ

Published On :

ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ಆವರಣದಲ್ಲಿ ನೆಲೆನಿಂತಿರುವ ಕೃಶಕಾಯದ ವಯಸ್ಸಾದ ಒಬ್ಬವಕ್ತಿ ಸಾಧಾರಣನಾದವನಲ್ಲ. ಅವನು ದೆಹಲಿ ಪೋಲಿಸರಿಂದ ನೀಡಲ್ಪಟ್ಟ ಖಾಕಿ ಸಮವಸ್ತ್ರ ಧರಿಸಿ, ಅದರಮೇಲೊಂದು ಗುರುತಿನ ಬ್ಯಾಡ್ಜನ್ನು ಧರಿಸಿ ಸದಾ ಅನಾಥ ಶವಗಳ ಸೇವೆಗೆ ನಿಂತಿರುವ ಲಾವಾರಿಸ್ ಬಾಬಾ. ಅವನ ಮೂಲ ಹೆಸರು ಮಹಮ್ಮದ್ ಹಬೀಬ್. ಉತ್ತರಪ್ರದೇಶದಿಂದ ದೆಹಲಿಗೆ ಬಂದು ನೆಲಸಿದಾಗ ಆತ ಕೈಗೊಂಡ ಕೆಲಸವೆಂದರೆ ಅನಾಥ ಶವಗಳನ್ನು ಹೊತ್ತೊಯ್ದು ಅವುಗಳಿಗೆ ಯೋಗ್ಯ ಸಂಸ್ಕಾರ ಮಾಡುವುದು. ಈ ಪವಿತ್ರ ಕಾಯಕವನ್ನು ಕಳೆದ ಅರವತೈದು ವರ್ಷಗಳಿಂದ ಅವ್ಯಾಹತವಾಗಿ ಮಾಡಿಕೊಂಡು ಬರುತ್ತಿದ್ದು ಎಲ್ಲರ ಶ್ಲಾಘನೆಗೆ ಪಾತ್ರನಾಗಿದ್ದಾನೆ. ಪೊಲೀಸ್ ಇಲಾಖೆಯೂ ಸಹ ಇವನ ಸೇವೆಗೆ ಮಾನ್ಯತೆ ನೀಡಿದೆ. ಎಲ್ಲೇ ಅನಾಥ ಶವ ಸಿಕ್ಕರೂ ಮೊದಲ ಕರೆ ಹಬೀಬನಿಗೆ ಹೋಗುತ್ತದೆ. ತಕ್ಷಣ ಆ ಸ್ಥಳಕ್ಕೆ ಹೋಗಿ ಶವವನ್ನು ಪಡೆದು ಅದನ್ನು ಅವರ ಧರ್ಮಕ್ಕನುಸಾರವಾಗಿ ಸಂಸ್ಕಾರ ಮಾಡುವ ಕೈಂಕರ್ಯವನ್ನು ಮಾಡುವ ಇವನಿಗೆ ಅದೊಂದು ಅಸಹ್ಯಕರವಾದ ಕೆಲಸ ಎನಿಸುವುದಿಲ್ಲ. ಅನೇಕಬಾರಿ ಕೀವು ರಕ್ತ ಮತ್ತು ಹುಳುಬಿದ್ದ, ದುರ್ವಾಸನೆ ಬೀರುವ ಹೆಣಗಳನ್ನು ಸಹ ಈತ ಜೋಪಾನವಾಗಿ ತನ್ನ ಕೈಗಳಿಂದ ಎತ್ತಿ, ರುದ್ರಭೂಮಿಗೆ ಹೋಗಿ ಸಂಸ್ಕಾರ ಮಾಡುತ್ತಾನೆ. ಅಂದರೆ ಅವನ ಸೇವೆಗೆ ಯಾವ ಬೆಲೆಕಟ್ಟಬೇಕು? ಇದುವರೆಗೂ ಈತ ಸಂಸ್ಕಾರ ಮಾಡಿದ ಶವಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಒಮ್ಮೆ ತನ್ನ ಶವವಾಹಕದ ಗಾಡಿಗೆ ಅಕಸ್ಮಾತ್ ಬಿದ್ದ ಅಮೀನಾ ಎಂಬ ಅಂಧ ಅನಾಥ ಯುವತಿಯನ್ನು ವಿವಾಹವಾಗಿ ಆಕೆಗೆ ಬಾಳು ಕೊಟ್ಟ ಪುಣ್ಯಾತ್ಮ. ಇದೀಗ ಹಿಂದು ಬಾಲಕನನ್ನು ದತ್ತು ತೆಗೆದುಕೊಂಡು ಅವನನ್ನು ಬೆಳೆಸಿ, ಮದುವೆ ಮಾಡಿ ಅವನಿಗೂ ಈ ಕೈಂಕರ್ಯವನ್ನು ಕೈಗೊಳ್ಳಲು ನೆರವಾಗಿದ್ದಾನೆ. ಒಂದು ಅನಾಥ ಶವವನ್ನು ಸಂಸ್ಕಾರ ಮಾಡಿದರೆ ಪೊಲೀಸ್ ಇಲಾಖೆ ಅವನಿಗೆ ಇನ್ನೂರು ರುಪಾಯಿಗಳನ್ನು ನೀಡುತ್ತದೆ. ಅದೇ ಇವನ ಜೀವನ ನಿರ್ವಹಣೆಗೆ ಆಧಾರ. ಇವನ ಸೇವೆಯನ್ನು ಮೆಚ್ಚಿ ಕೆಲವರು ಪ್ರಶಂಸಾಪತ್ರವನ್ನು ನೀಡಿದರೆ, ಇನ್ನು ಕೆಲವರು ಹಣಕಾಸಿನ ಸಹಾಯವನ್ನೂ ಮಾಡಿದ್ದಾರೆ. ಅವನ ಪ್ರಕಾರ ಮರಣಿಸಿದ ಎಲ್ಲರಿಗೂ ಗೌರವಯುತ ಅಂತ್ಯ ಸಂಸ್ಕಾರ ದೊರೆಯಲೇಬೇಕು. ಈ ರೀತಿ ಅನಾಥ ಶವಗಳ ಅಂತ್ಯಸಂಸ್ಕಾರ ಮಾಡುವುದು ಮಾನವೀಯತೆಯ ಕಾರ್ಯಭಾರ. ಸತ್ತ ಬಳಿಕ ಯಾರಿಗೆ ಯಾರೂ ಇಲ್ಲವೋ ಅವರನ್ನು ದೇವರು ನೋಡಿಕೊಳ್ಳುತ್ತಾನೆ. ಆ ಹೊಣೆಯನ್ನು ತನಗೆ ದೇವರು ನೀಡಿರುವುದಕ್ಕೆ ಕೃತಜ್ಞ ಎಂದು ದೆಹಲಿಯ ಸಾಮಾನ್ಯರಲ್ಲಿ ಅಸಮಾನ್ಯನಾದ ಹಬೀಬ್ ವಿನೀತನಾಗಿ ಹೇಳುತ್ತಾನೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.