ಮುಂದಿನ ವರ್ಷ ಇವರ ಕಾರ್ಯಕ್ರಮಕ್ಕೆ ಕ್ಯೂ ನಿಲ್ಲಬೇಕಾಗುತ್ತದೆ!
ಮುಂದಿನ ವರ್ಷ ಇವರ ಕಾರ್ಯಕ್ರಮಕ್ಕೆ ಕ್ಯೂ ನಿಲ್ಲಬೇಕಾಗುತ್ತದೆ!
ಕರ್ನಾಟಕ ಸಂಗೀತದ ವಿಚಾರ ಬಂದಾಗ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಅವರು ತಿರುವಾಂಕೂರ್ ಮಹಾರಾಜರ ಆಸ್ಥಾನದಲ್ಲಿ ಆಸ್ಥಾನ ವಿದ್ವಾನ್ ಆಗಿದ್ದರು. ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸದಲ್ಲಿ ತೊಡಗಿ, ಒಂದು ತಪಸ್ಸಿನಂತೆ ಸಂಗೀತದ ಎಲ್ಲ ಮಜಲುಗಳನ್ನೂ ಕಲಿತು ಪ್ರಸಿದ್ಧ ಸಂಗೀತಗಾರರಾದರು. ಸ್ವಾತಿ ತಿರುನಾಳರ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ಮುತ್ತಯ್ಯ ಭಾಗವತರ ಬಗ್ಗೆ ಬರೆಯುತ್ತಾ, ಅವರ ಹಿರಿಮೆಯ ಬಗ್ಗೆ ಒಂದು ನಿದರ್ಶನವನ್ನು ನೀಡಿದ್ದಾರೆ: ಕರೂರಿನ ಶ್ರೀಮಂತ ಉದ್ಯಮಿಯೊಬ್ಬರು ಸಂಗೀತೋತ್ಸವದಲ್ಲಿ ಪಾಲ್ಗೊಂಡ ಸಂಗೀತಗಾರರಿಗೆಂದು ಒಂದು ಮೂಟೆಯ ತುಂಬಾ ಬೆಳ್ಳಿಯ ನಾಣ್ಯಗಳನ್ನು ತುಂಬಿ ಇಟ್ಟಿರುತ್ತಿದ್ದರು. ಮುತ್ತಯ್ಯ ಭಾಗವತರು ಒಂದು ಪಾತ್ರೆಯನ್ನು ತೆಗೆದುಕೊಂಡು ಮೂಟೆಯ ತಳಕ್ಕೆ ಆಳವಾಗಿ ತಳ್ಳಿ ಮೇಲಕ್ಕೆಳೆದಾಗ ಅದರಲ್ಲಿ ಎಷ್ಟು ಬೆಳ್ಳಿಯ ನಾಣ್ಯಗಳು ಬರುತ್ತಿದ್ದವೋ ಎಲ್ಲವನ್ನೂ ಚೆಟ್ಟಿಯಾರರು ಸೂಚಿಸುವ ಸಂಗೀತಗಾರರಿಗೆ ನೀಡುತ್ತಿದ್ದರಂತೆ. ಮುತ್ತಯ್ಯ ಭಾಗವತರಂತಹ ವ್ಯಕ್ತಿ ತನಗೆ ಗುರುವಾಗಿ ದೊರಕಲಿಲ್ಲವೆಂದು ಸೆಮ್ಮನ್ ಗುಡಿ ಪರಿತಪಿಸಿದ್ದುದುಂಟು. ಒಮ್ಮೆ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯವರು ವ್ಯವಸ್ಥೆಗೊಳಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆಮ್ಮನ್ ಗುಡಿಯವರನ್ನು ಕೇಳಿಕೊಂಡರು. ಆದರೆ ಕಾರಣಾಂತರಗಳಿಂದ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಅವರು ಮತ್ತೊಬ್ಬ ಸಂಗೀತಗಾರ, ಅದೇ ತಾನೆ ಸಂಗೀತ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ಸೂಚಿಸಿದರು. ವ್ಯವಸ್ಥಾಪಕರು ಬಾಲಸುಬ್ರಹ್ಮಣ್ಯಂ ಹೊಸಬರಾದುದರಿಂದಲೋ ಏನೋ ಹಿಂದೆ ಮುಂದೆ ನೋಡಹತ್ತಿದರು. ಆಗ ಅಯ್ಯರ್ ಹೇಳಿದರು, 'ಯೋಚಿಸಬೇಡಿ. ಅವರ ಪರಿಚಯ ನಿಮಗಿಲ್ಲ. ಮುಂದಿನ ಸಲ ಅವರ ಕಾರ್ಯಕ್ರಮ ನಡೆಸಲು ಅವರ ಮನೆಯ ಮುಂದೆ ಕ್ಯೂ ನಿಲ್ಲಬೇಕಾಗುತ್ತದೆ. ಅಂತಹ ದೊಡ್ಡ ವಿದ್ವಾಂಸರು ಅವರು' ಎಂದು. ಅವರ ಮಾತುಗಳು ಮುಂದಿನ ದಿನಗಳಲ್ಲಿ ನಿಜವೂ ಆಯಿತು. ಜಿ.ಎನ್ ಪ್ರಖ್ಯಾತ ಸಂಗೀತಗಾರರೆಂದು ಹೆಸರು ಪಡೆದರು. ನಂತರದ ದಿನಗಳಲ್ಲಿ ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಮಹಾವಿದ್ಯಾಲಯದಲ್ಲಿ ಸೆಮ್ಮನ್ ಗುಡಿಯವರ ಉತ್ತರಾಧಿಕಾರಿಯಾಗಿ ಪ್ರಾಚಾರ್ಯ ಹುದ್ದೆಯನ್ನೂ ನಿರ್ವಹಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

